ಬೆಂಗಳೂರು,ಏ.28- ಹಾಸನ ಕ್ಷೇತ್ರದಲ್ಲಿ ಕೇಳಿಬಂದಿರುವ ಲೈಂಗಿಕ ದೌರ್ಜನ್ಯದ ಆರೋಪದ ಬಗ್ಗೆ ಸರ್ಕಾರ ಎಸ್‌ಐಟಿ ತನಿಖೆಗೆ ಆದೇಶಿಸಿದ್ದು, ತನಿಖೆಯಿಂದ ಸತ್ಯಾಂಶ ಹೊರಬರಲಿ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಷ್ಟ ಹೇಳಿಕೊಂಡು ಬಂದಂತಹ ಹೆಣ್ಣುಮಕ್ಕಳ ಕಷ್ಟವನ್ನು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರಾಗಲಿ, ನಾನಾಗಲೀ ಪರಿಹರಿಸಿ ಕಳುಹಿಸಿದ್ದೇವೆ. ಹೆಣ್ಣು ಮಕ್ಕಳಿಗೆ ಹೆಚ್ಚಿನ ಗೌರವ ಕೊಟ್ಟಿದ್ದೇವೆ ಎಂದರು.
ಹಾಸನ ಚುನಾವಣಾ ಸಂದರ್ಭದಲ್ಲಿ ಕೇಳಿಬಂದಿರುವ ಆರೋಪದ ಬಗ್ಗೆ ಎಸ್‌ಐಟಿ ತನಿಖೆ ವಹಿಸಲಾಗಿದೆ. ಈ ನೆಲದಲ್ಲಿ ಯಾರೇ ತಪ್ಪು ಮಾಡಿದರೂ ಉಪ್ಪು ತಿಂದ ಮೇಲೆ ನೀರು ಕುಡಿಯಲೇಬೇಕು, ತಪ್ಪು ಮಾಡಿದವರನ್ನು ಕ್ಷಮಿಸುವ ಪ್ರಶ್ನೆಯೇ ಇಲ್ಲ ಎಂದು ಕಡ್ಡಿ ಮುರಿದಂತೆ ನುಡಿದರು.
ಸಂಸದ ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಹೋಗಿದ್ದಾರೆ ಎಂಬ ಬಗ್ಗೆ ಗಮನ ಸೆಳೆದಾಗ ಪ್ರತಿಕ್ರಿಯಿಸಿದ ಅವರು, ಎಸ್‌ಐಟಿ ತನಿಖೆ ನಡೆಸುತ್ತಿದ್ದು, ಎಲ್ಲೇ ಇದ್ದರೂ ಕರೆದುಕೊಂಡು ಬರುವ ಜವಾಬ್ದಾರಿ ಅವರದು ಎಂದರು.
ಕೇಂದ್ರದ ಮೇಲೆ ಗೂಬೆ ಕೂರಿಸುವ ಪ್ರಯತ್ನ :
ರಾಜ್ಯಸರ್ಕಾರ ಬರ ಪರಿಹಾರದ ವಿಚಾರದಲ್ಲಿ ಜನರನ್ನು ದಾರಿ ತಪ್ಪಿಸಲು ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡುತ್ತಿದೆ ಎಂದು ಕುಮಾರಸ್ವಾಮಿ ಆರೋಪಿಸಿದರು. ಎನ್‌ಡಿಆರ್‌ಎಫ್‌ನಿಂದ ಯುಪಿಎ ಅವಧಿಯಲ್ಲಿ ಶೇ.8 ರಷ್ಟು ಹಣ ದೊರೆತಿದ್ದರೆ, ಎನ್‌ಡಿಎ ಅವಧಿಯಲ್ಲಿ ಶೇ.38 ರಷ್ಟು ಎನ್‌ಡಿಆರ್‌ಎಫ್ ಹಣ ಬಂದಿದೆ. ಆದರೂ ಕಾಂಗ್ರೆಸ್ ಸರ್ಕಾರ ಅಪಪ್ರಚಾರ ಮಾಡಿ ಪ್ರತಿಭಟನೆ ಮಾಡುತ್ತಿದೆ ಎಂದು ಟೀಕಿಸಿದರು.
ರಾಜ್ಯಸರ್ಕಾರ ಮೊದಲು ಕೇಳಿದ್ದು 4,800 ಕೋಟಿ ರೂ. ಇನ್ಪುಟ್ ಸಬ್ಸಿಡಿ. ಅದನ್ನು ಕೊಟ್ಟರೆ ಸಾಕು ಎಂದು ಹೇಳಿದ್ದರು. ಈಗ 18 ಸಾವಿರ ಕೋಟಿ ರೂ. ಕೊಡಬೇಕಿತ್ತು ಎಂದು ಹೇಳಿ ಕೇಂದ್ರ ಸರ್ಕಾರದ ಮೇಲೆ ಪದೇಪದೇ ಗೂಬೆ ಕೂರಿಸುವ ಪ್ರಯತ್ನವನ್ನು ಮಾಡುತ್ತಿದ್ದಾರೆ ಎಂದರು.
ಚುನಾವಣಾ ಪ್ರಚಾರ :
ಎನ್‌ಡಿಎ ಅಭ್ಯರ್ಥಿಗಳ ಪರವಾಗಿ ಹೊಸಪೇಟೆ, ಶಿವಮೊಗ್ಗ, ಕಲಬುರಗಿ, ಬೀದರ್, ರಾಯಚೂರು, ಕೊಪ್ಪಳದಲ್ಲಿ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಳ್ಳುವುದಾಗಿ ಕುಮಾರಸ್ವಾಮಿ ಇದೇ ಸಂದರ್ಭದಲ್ಲಿ ತಿಳಿಸಿದರು.