ಬೆಂಗಳೂರು, ಮಾ.26- ದಿನದಿಂದ ದಿನಕ್ಕೆ ತಾಪಾಮಾನ ಏರಿಕೆಯಾಗುತ್ತಿದ್ದು, ಸುಡು ಬಿಸಿಲಿನಲ್ಲಿ ದೇಹವನ್ನು ತಂಪಾಗಿಟ್ಟುಕೊಳ್ಳಲು ಜನರು ಎಳನೀರು, ತಂಪುಪಾನೀಯ, ಕಲ್ಲಂಗಡಿ ಹಾಗೂ ಸೌತೆಕಾಯಿ ಮೊರೆಹೊಗುತ್ತಿದ್ದಾರೆ.ಬಿಸಿಲು ಏರುತ್ತಿದ್ದಂತೆ ಇವರುಗಳ ಬೆಲೆಯೂ ಸಹ ಏರುತ್ತಿದ್ದು ಗ್ರಾಹಕರನ್ನು ಸುಡುತ್ತಿದೆ. ರಾಜ್ಯಾದ್ಯಂತ ಬರಗಾಲ ಆವರಿಸಿದ್ದು, ಮಳೆ ಬಾರದೆ ರಾಜಧಾನಿ ಸೇರಿದಂತೆ ವಿವಿಧೆಡೆ ಕುಡಿಯುವ ನೀರಿಗೆ ತೀವ್ರ ಸಮಸ್ಯೆ ಎದರಾಗಿದೆ. ಈ ಬಿಸಿಲಿನಲ್ಲಿ ದೇಹಕ್ಕೆ ಅಷ್ಟೇನೂ ಆಹಾರ ಸೇರುವುದಿಲ್ಲ. ನೀರು ಕುಡಿದು ಕುಡಿದು ಹೊಟ್ಟೆ ತುಂಬುತ್ತದೆ ಅಷ್ಟೆ.
ಈ ಸಮಯದಲ್ಲಿ ಯಾವ ಹಣ್ಣು ತರಕಾರಿ, ಪಾನೀಯ ಸೇವಿಸಬೇಕೆಂಬುದೇ ಒಂದು ಸಮಸ್ಯೆಯಾಗಿದ್ದು, ಇರುವುದರಲ್ಲಿ ನೈಸರ್ಗಿಕ ಪಾನೀಯವನ್ನು ಜನರು ಆಯ್ಕೆ ಮಾಡಿಕೊಳ್ಳುತ್ತಾರೆ. ಇದರಲ್ಲಿ ಎಳನೀರು ಮೊದಲ ಸ್ಥಾನದಲ್ಲಿದೆ. ಇದು ದಾಹನ ನೀಗಿಸುವುದರ ಜೊತೆಗೆ ದೇಹಕ್ಕೆ ಹಲವಾರು ಪೌಶಕಾಂಶಗಳನ್ನು ನೀಡುತ್ತದೆ. ಈ ಹಿನ್ನಲೆಯಲ್ಲಿ ಬೆಂಗಳೂರಿನಲ್ಲಿ ಎಳನೀರು ಮಾರಾಟ ಜೋರಾಗಿದೆ. ಆದರೆ ಬೆಲೆ ಮಾತ್ರ ಬಲು ದುಬಾರಿಯಾಗಿದೆ.
ಗುಣಮಟ್ಟ ಹಾಗೂ ಫ್ರೆಶ್ ಆಗಿರುವ ಒಂದು ಎಳನೀರಿಗೆ 35ರಿಂದ 40 ರೂ. ಮಾರಾಟವಾಗುತ್ತದೆ. ಬೆಂಗಳೂರಿಗೆ ಹೆಚ್ಚಾಗಿ ಮದ್ದೂರು, ಮಂಡ್ಯ ಭಾಗದಿಂದ ಎಳನೀರು ಬರುತ್ತಿದ್ದು, ಸಾಗಾಣಿಕೆ ವೆಚ್ಚ, ಕೂಲಿ ಎಲ್ಲವೂ ಸೇರಿ 40 ರೂ. ಗೆ ಮಾರಾಟ ಮಾಡಲಾಗುತ್ತಿದೆ. ಇದು ಹೊರೆಯಾದರೂ ಆರೋಗ್ಯದ ದೃಷ್ಟಿಯಿಂದ ಜನರು ಕುಡಿಯುತ್ತಿದ್ದಾರೆ.
ಬೇಸಿಗೆಯಲ್ಲಿ ಬಸವಳಿದು ಮನೆಗೆ ಬಂದರೆ ಕೂಡಲೇ ಎನರ್ಜಿ ಡ್ರಿಂಕ್ ಆಗಿ ನಿಂಬೆ ಜ್ಯೂಸ್ ಅನ್ನು ಹೆಚ್ಚು ಜನ ಸೇವಿಸುತ್ತಾರೆ. ಆದರೆ ಈ ಸಮಯದಲ್ಲಿ ನಿಂಬೆಹಣ್ಣಿನ ಬೆಲೆ ಮಾತ್ರ ದುಬಾರಿಯಾಗುತ್ತಿದೆ. ಸಾಮಾನ್ಯ ದಿನಗಳಲ್ಲಿ ಒಂದಕ್ಕೆ ಹೆಚ್ಚು ಅಂದರೂ 5 ರೂ. ಇರುತ್ತದೆ. ಆದರೆ ಇಗ ಇದರ ಬೆಲೆ ಒಂದಕ್ಕೆ 10 ರೂ. ಮುಟ್ಟಿದೆ ನೀರಿಲ್ಲದೆ ಗಿಡಗಳು ಒಣಗುತ್ತಿದ್ದು, ತಾಪಕ್ಕೆ ಹೂ, ಪೀಚುಗಳು ಉದುರುತ್ತಿದ್ದು, ಇಳುವರಿ ಕುಂಠಿತವಾಗಿದೆ. ಮಾರುಕಟ್ಟೆಗೆ ಅಗತ್ಯ ಪ್ರಮಾಣದಲ್ಲಿ ಹಣ್ಣು ಬಾರದಿರುವುದರಿಂದ ಬೆಲೆ ಏರಿಕೆಯಾಗಿದೆ. ಇನ್ನು ಯುಗಾದಿ ಹಬ್ಬಕ್ಕೆ ಒಂದು ನಿಂಬೆಹಣ್ಣಿನ ಬೆಲೆ 20ರೂ. ಆದರೂ ಅಚ್ಚರಿ ಪಡುವಂತಿಲ್ಲ.
ನೀರಿನ ಅಂಶ ಹೆಚ್ಚಾಗಿರುವ ಸೌತೆಕಾಯಿ ಬೆಲೆಯಲ್ಲೂ ಸಹ ಹೆಚ್ಚಳವಾಗಿದೆ. ದಾಹ ನೀಗಿಸುವುದರ ಜೊತೆಗೆ ಹಲವಾರು ಔಷಯ ಗುಣಗಳನ್ನು ಹೊಂದಿರುವ ಸೌತೆಗೆ ಡಿಮ್ಯಾಂಡ್ ಹೆಚ್ಚಾಗಿದ್ದು, ಮಾರುಕಟ್ಟೆಯಲ್ಲಿ ಕೆಜಿಗೆ 35ರಿಂದ 40 ರೂ.ಗೆ ಮಾರಾಟ ಮಾಡಲಾಗುತ್ತಿದೆ.
ಈ ಬೆಳೆಗೆ ಹೆಚ್ಚು ನೀರಿನ ಅವಶ್ಯಕತೆ ಇದ್ದು, ಬೋರ್ವೆಲ್ಗಳಲ್ಲಿ ಅಂತರ್ಜಲ ಮಾಯವಾಗಿರುವದರಿಂದ ರೈತರು ಬೆಳೆಯಲು ಮುಂದಾಗಿಲ್ಲ. ಜೊತೆಗೆ ಬಿಸಿಲು ಹೆಚ್ಚಾಗಿರುವುದರಿಂದ ಬೇಗ ಬೆಂಡಾಗುತ್ತವೆ.ಈ ಹಿನ್ನೆಲೆಯಲ್ಲಿ ಇಳುವರಿ ಇಳಿಮುಖ ವಾಗಿದ್ದು, ಬೆಲೆ ಹೆಚ್ಚಳವಾಗಿದೆ. ಯುಗಾದಿ ಹೊಸತಡಕಿಗೆ ಹೆಚ್ಚಾಗಿ ಸೌತೆಕಾಯಿ, ಲಿಂಬೆಹಣ್ಣನ್ನು ಬಳಸುವುದರಿಂದ ಇವುಗಳ ಬೆಲೆ ಮತ್ತಷ್ಟು ಏರುವ ಸಾಧ್ಯತೆ ಇದೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ. ಒಂದು ಕಡೆ ಬಿಸಿಲು ನೆತ್ತಿಸುಡುತ್ತಿದ್ದರೆ ಮತ್ತೊಂದೆಡೆ ದಾಹನೀಗಿಸುವ ಎಳನೀರು, ಸೌತೆಕಾಯಿ ಹಾಗೂ ಲಿಂಬೆಹಣ್ಣಿನ ಬೆಲೆ ಗ್ರಾಹಕರ ಜೇಬನ್ನು ಸುಡುತ್ತಿದೆ.