ಎಣ್ಣೆ ಪ್ರೀಯರಿಗೆ ಖುಷಿ ಸುದ್ದಿ..!

Social Share

ಬೆಂಗಳೂರು, ಫೆ.24- ಸದ್ಯಕ್ಕೆ ರಾಜ್ಯದಲ್ಲಿ ಮದ್ಯದ ದರವನ್ನು ಹೆಚ್ಚಳ ಮಾಡುವ ಪ್ರಸ್ತಾವನೆ ನಮ್ಮ ಮುಂದೆ ಇಲ್ಲ ಎಂದು ಅಬಕಾರಿ ಸಚಿವ ಕೆ.ಗೋಪಾಲಯ್ಯ ಅವರು ಹೇಳುವ ಮೂಲಕ ಮದ್ಯ ಪ್ರಿಯರಿಗೆ ಸಿಹಿ ಸುದ್ದಿ ನೀಡಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಲಾಖೆಯ ಹಣಕಾಸಿನ ಪರಿಸ್ಥಿತಿಯನ್ನು ಮುಖ್ಯಮಂತ್ರಿಗಳು ಪರಾಮರ್ಶೆ ನಡೆಸಿ ಕೆಲವು ಸಲಹೆ ನೀಡಿರುವುದರ ಜತೆಗೆ ಇಲಾಖೆಯ ಅಭಿವೃದ್ಧಿಗೂ ಸಹಕಾರ ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.
ನಾಳೆ ಹಣಕಾಸು ಇಲಾಖೆ ಕಾರ್ಯದರ್ಶಿಗಳು ಮತ್ತು ಸಿಎಂ ಜೊತೆ ಚರ್ಚೆ ನಡೆಸಿ ಮುಂದಿನ ಕಾರ್ಯಕ್ರಮದ ಬಗ್ಗೆ ಚಿಂತನೆ ನಡೆಸಲಾಗುವುದು. ಇಲಾಖೆಯ ಕೆಲವು ಬೇಡಿಕೆಗಳ ಬಗ್ಗೆಯೂ ಸಿಎಂ ಗಮನ ಸೆಳೆಯುವ ಕೆಲಸ ಮಾಡಲಾಗಿದೆ.ಇದಕ್ಕೆ ಅವರು ಬಜೆಟ್‍ನಲ್ಲಿ ಅಥವಾ ಆ ನಂತರ ಸೂಕ್ತವಾಗಿ ಸ್ಪಂದಿಸುವ ಭರವಸೆ ಇದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
# ಕಾಂಗ್ರೆಸ್ ಸೇರಲ್ಲ:
ತಾವು ಕಾಂಗ್ರೆಸ್ ಸೇರುತ್ತೀರಾ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಗೋಪಾಲಯ್ಯ ಅವರು ನಾನಾಗಲಿ ಇಲ್ಲವೆ ನನ್ನ ಜತೆ ಬಂದವರು ಸೇರಿದಂತೆ ನಾವು ಯಾರೊಬ್ಬರೂ ಪಕ್ಷ ಬಿಟ್ಟು ಕಾಂಗ್ರೆಸ್ ಸೇರುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಈ ಬಗ್ಗೆ ಪದೇ ಪದೇ ವದಂತಿಗಳು ಹಬ್ಬುತ್ತಲೇ ಇವೆ. ನಾವ್ಯಾರು ಎಲ್ಲಿಗೂ ಹೋಗುವುದಿಲ್ಲ. ನಾವೆಲ್ಲ ಬಿಜೆಪಿಯಲ್ಲಿ ಚೆನ್ನಾಗಿಯೇ ಇದ್ದೇವೆ. ಇಲ್ಲಿ ನಮಗೆ ಯಾವುದೇ ಸಮಸ್ಯೆ ಇಲ್ಲ. ನಮಗೆ ಸಚಿವ ಸ್ಥಾನ ನೀಡಿ ಗೌರವದಿಂದ ನಡೆಸಿಕೊಳ್ಳುತ್ತಿದ್ದಾರೆ. ಹೀಗಿರುವಾಗ ನಾವೇಕೆ ಬಿಜೆಪಿ ಬಿಟ್ಟು ಹೋಗಬೇಕು ಎಂದು ಪ್ರಶ್ನಿಸಿದರು.
ಕೆಲವರಿಗೆ ನಿಗಮ-ಮಂಡಳಿಯಲ್ಲಿ ಸ್ಥಾನ ನೀಡಲಾಗಿದೆ. ಒಂದಿಬ್ಬರಿಗೆ ಸಚಿವ ಸ್ಥಾನ ಸಿಕ್ಕಿಲ್ಲವಷ್ಟೇ. ನಾವೆಲ್ಲರೂ ಒಟ್ಟಾಗಿಯೇ ಇದ್ದೇವೆ ಎಂದು ಹೇಳಿದರು.ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಜತೆ ನಡೆಸಿದ ಸಭೆಯಲ್ಲಿ ಹಲವು ವಿಚಾರಗಳು ಚರ್ಚೆಯಾಗಿವೆ. ನಾಳೆ ಆರ್ಥಿಕ ಇಲಾಖೆಯ ಅಕಾರಿಗಳ ಜತೆ ನಮ್ಮ ಇಲಾಖೆ ಅಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ ಎಂದರು.
ಸಂಸ್ಥೆಗಳ ಸದಸ್ಯರು ಕೊಟ್ಟ ಸಲಹೆ ಮತ್ತು ಮನವಿಗಳನ್ನು ಸಿಎಂ ಕೇಳಿದ್ದಾರೆ. ಕಮಿಷನ್ ದರ ಹೆಚ್ಚಳ ವಿಚಾರವಾಗಿ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗಿದೆ. ಆರ್ಥಿಕ ಇಲಾಖೆ ಜತೆ ಸಿಎಂ ಚರ್ಚೆ ಮಾಡಿದ ನಿರ್ಧಾರ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ತಿಳಿಸಿದರು.
ಪ್ರಸಕ್ತ ವರ್ಷದಲ್ಲಿ 23,247 ಕೋಟಿ ತೆರಿಗೆ ಸಂಗ್ರಹ ಮಾಡಿದ್ದೇವೆ. 25 ಕೋಟಿ ಸಾವಿರ ತಲುಪುವ ಸಾಧ್ಯತೆ ಇದೆ. ಕೋವಿಡ್ ಸಮಯದಲ್ಲೂ ನಮ್ಮ ಗುರಿ ತಲುಪಲಾಗಿದೆ. ಈ ವರ್ಷ ಗುರಿ ಮೀರಿ ತೆರಿಗೆ ಸಂಗ್ರಹವಾಗಲಿದೆ ಎಂಬ ವಿಶ್ವಾಸವನ್ನು ಗೋಪಾಲಯ್ಯ ವ್ಯಕ್ತಪಡಿಸಿದರು.
ಇಂದಿನ ಸಭೆಯಲ್ಲಿ ವೈನ್ ಮಾರಾಟ ಮಾಡುವವರಿಗೆ ಬಿಯರ್ ಮಾರಾಟ ಮಾಡಲು ಅವಕಾಶ ನೀಡಬೇಕೆಂದು ಸಿಎಂಗೆ ಮನವಿ ಮಾಡಿದ್ದೇವೆ. ವೈನರಿಗಳಲ್ಲಿ ಕೇವಲ ವೈನ್ ಮಾರಾಟ ಮಾಡಿದರೆ ನಮಗೆ ನಷ್ಟವಾಗುತ್ತದೆ. ಇದರಿಂದ ಯಾವ ಲಾಭವೂ ಸಿಗುವುದಿಲ್ಲ. ಕಳೆದ ಹಲವು ವರ್ಷಗಳಿಂದ ಇದು ನಷ್ಟದಲ್ಲಿದೆ. ಹೀಗಾಗಿ ಬಿಯರ್ ಮಾರಾಟ ಮಾಡಲು ಅವಕಾಶ ಕೇಳಿದ್ದೇವೆ ಎಂದರು.

Articles You Might Like

Share This Article