ನವದೆಹಲಿ,ಜ.22- ತೀವ್ರ ಚಳಿ ಕಾಣಿಸಿಕೊಂಡ ಹಿನ್ನಲೆಯಲ್ಲಿ ಬಿಜೆಪಿಯ ಹಿರಿಯ ನಾಯಕ ಎಲ್.ಕೆ. ಅಡ್ವಾಣಿಯವರು ಅಯೋಧ್ಯೆಯಲ್ಲಿ ನಡೆಯುವ ಬಾಲರಾಮನ ಪ್ರಾಣಪ್ರತಿಷ್ಠೆ ಕಾರ್ಯಕ್ರಮಕ್ಕೆ ಗೈರಾದರು.ಆರೋಗ್ಯದ ಹಿತದೃಷ್ಟಿ ಹಾಗೂ ವೈದ್ಯರ ಸಲಹೆ ಮೇರೆಗೆ ಕೊನೆಯ ಕ್ಷಣದಲ್ಲಿ ಅಡ್ವಾಣಿಯವರ ಅಯೋಧ್ಯೆ ಪ್ರಯಾಣ ರದ್ದಾಯಿತು. ಈ ಮೂಲಕ ಅಡ್ವಾಣಿಯವರು ಇಂದಿನ ಕಾರ್ಯಕ್ರಮದಿಂದ ಹೊರಗುಳಿದರು.
ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮಮಂದಿರಕ್ಕಾಗಿ ಹೋರಾಟ ನಡೆಸಿದವರಲ್ಲಿ ಅಡ್ವಾಣಿ ಕೂಡ ಪ್ರಮುಖ ವ್ಯಕ್ತಿ. 96ನೇ ವಯಸ್ಸಿನಲ್ಲಿಯೂ ಆಹ್ವಾನ ಸ್ವೀಕರಿಸಿ ಅಯೋಧ್ಯೆಗೆ ತೆರಳಲು ಸಿದ್ಧರಾಗಿದ್ದರು. ಹಿರಿಯ ನಾಯಕರ ಆರೋಗ್ಯ ಮತ್ತು ವಯಸ್ಸಿನ ಕಾರಣದಿಂದ ಈ ಮಹಾ ಕಾರ್ಯಕ್ರಮಕ್ಕೆ ಹಾಜರಾಗದಂತೆ ಈ ಹಿಂದೆ ವಿನಂತಿಸಲಾಗಿತ್ತು.
ಅಡ್ವಾಣಿಯವರೊಂದಿಗೆ ರಾಮಮಂದಿರ ಚಳುವಳಿಯ ನೇತೃತ್ವ ವಹಿಸಿದ್ದ ಮುರಳಿ ಮನೋಹರ್ ಜೋಶಿ ಅವರನ್ನೂ ಸಮಾರಂಭದಿಂದ ಹೊರಗುಳಿಯುವಂತೆ ಕೇಳಲಾಗಿತ್ತು. ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ (ರಾಮ ಮಂದಿರ ಟ್ರಸ್ಟ್) ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರು ಅಡ್ವಾಣಿ ಮತ್ತು ಜೋಶಿ ಅವರ ವಯಸ್ಸು ಮತ್ತು ಆರೋಗ್ಯದ ಸ್ಥಿತಿಯನ್ನು ಪರಿಗಣಿಸಿ ಸಮಾರಂಭಕ್ಕೆ ಹಾಜರಾಗದಂತೆ ವಿನಂತಿಸಲಾಗಿದೆ ಎಂದು ಮಾಧ್ಯಮಗಳಿಗೆ ತಿಳಿಸಿದ್ದರು. ಅದರಂತೆ ಇಬ್ಬರೂ ಒಪ್ಪಿಕೊಂಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಜೈಶ್ರೀರಾಮ್ ಘೋಷ ಜೋರಾಗಿ ಮೊಳಗಿಸಿ : ವೆಂಕಟೇಶ್‍ಪ್ರಸಾದ್
ಆಹ್ವಾನಿತರಲ್ಲಿ ಕ್ರಿಕೆಟ್ ದಿಗ್ಗಜರಾದ ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ, ಬಿಗ್‍ಬಿ ಅಮಿತಾಭ್ ಬಚ್ಚನ್, ಉದ್ಯಮಿಗಳಾದ ಅನಿಲ್ ಅಂಬಾನಿ, ಗೌತಮ್ ಅದಾನಿ ಕೂಡ ಸೇರಿದ್ದಾರೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‍ಎಸ್‍ಎಸ್) ಮುಖಂಡ ಕೃಷ್ಣ ಗೋಪಾಲ್ ಮತ್ತು ರಾಮ್‍ಲಾಲ್ ಅವರು ವಿಎಚ್‍ಪಿ ಮುಖ್ಯಸ್ಥ ಅಲೋಕ್‍ಕುಮಾರ್ ಅವರೊಂದಿಗೆ ಎಲ್.ಕೆ.ಅಡ್ವಾಣಿ ಅವರನ್ನು ಭೇಟಿ ಮಾಡಿ ರಾಮಮಂದಿರ ಪ್ರಾಣ ಪ್ರತಿಷ್ಠೆ ಸಮಾರಂಭಕ್ಕೆ ಆಹ್ವಾನ ನೀಡಿದ್ದರು.
ಅಯೋಧ್ಯೆಯಲ್ಲಿ ನಡೆಯುವ ಪ್ರಾಣ ಪ್ರತಿಷ್ಠೆ ಸಮಾರಂಭಕ್ಕೆ ಎಲ್.ಕೆ.ಅಡ್ವಾಣಿ ಭೇಟಿ ನೀಡುವ ಸಂದರ್ಭದಲ್ಲಿ ಅವರಿಗೆ ಅಗತ್ಯವಿರುವ ಎಲ್ಲಾ ವೈದ್ಯಕೀಯ ಸೌಲಭ್ಯಗಳು ಮತ್ತು ಇತರ ವ್ಯವಸ್ಥೆಗಳನ್ನು ಒದಗಿಸಲಾಗುವುದು ಎಂದು ಅಲೋಕ್ ಕುಮಾರ್ ತಿಳಿಸಿದ್ದರು.
ರಾಮಮಂದಿರ ಉದ್ಘಾಟನೆ ಸಮಾರಂಭದಲ್ಲಿ ಪಾಲ್ಗೊಳ್ಳುವುದಕ್ಕೆ ಕಾಂಗ್ರೆಸ್ ನಿರಾಕರಿಸಿದೆ. ಕಾಂಗ್ರೆಸ್‍ನ ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ ಮತ್ತು ಅೀಧಿರ್ ರಂಜನ್ ಚೌಧರಿ ಸಮಾರಂಭದ ಆಹ್ವಾನವನ್ನು ತಿರಸ್ಕರಿಸಿದ್ದಾರೆ.