Sunday, April 28, 2024
Homeರಾಜಕೀಯಹೈಕಮಾಂಡ್‍ ಷರತ್ತಿಗೆ ಶಾಕ್ ಅದ ನಿಗಮ ಮಂಡಳಿ ಆಕಾಂಕ್ಷಿಗಳು

ಹೈಕಮಾಂಡ್‍ ಷರತ್ತಿಗೆ ಶಾಕ್ ಅದ ನಿಗಮ ಮಂಡಳಿ ಆಕಾಂಕ್ಷಿಗಳು

ಬೆಂಗಳೂರು, ಅ.30- ನಿಗಮ ಮಂಡಳಿ ನೇಮಕಾತಿಗೆ ಸಂಬಂಧಿಸಿದಂತೆ ಪ್ರಕ್ರಿಯೆಗಳಿಗೆ ಚಾಲನೆ ನೀಡುತ್ತಿದ್ದಂತೆ ಆಕಾಂಕ್ಷಿಗಳಲ್ಲಿ ತಳಮಳ ಹೆಚ್ಚಾಗಿದ್ದು, ಹೈಕಮಾಂಡ್‍ನ ಷರತ್ತುಗಳು ಬಿಸಿ ತುಪ್ಪವಾಗಿ ಪರಿಣಮಿಸಿವೆ. ಮೊದಲ ಹಂತದಲ್ಲಿ 30 ಮಂದಿ ಶಾಸಕರಿಗೆ, ಅದರಲ್ಲೂ ಎರಡಕ್ಕಿಂತ ಹೆಚ್ಚು ಬಾರಿ ಆಯ್ಕೆಯಾಗಿರುವವರಿಗೆ ಸಂವೃದ್ಧಿಯಾಗಿರುವ ನಿಗಮಗಳ ಅಧ್ಯಕ್ಷ ಸ್ಥಾನ ನೀಡಲು ನಿರ್ಧರಿಸಲಾಗಿದೆ.

ಈ ನಿಟ್ಟಿನಲ್ಲಿ ನಿನ್ನೆ ತಡರಾತ್ರಿವರೆಗೂ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಮಾಲೋಚನೆ ನಡೆಸಿದ್ದಾರೆ. ಪರಸ್ಪರ ಇಬ್ಬರು ತಮ್ಮಲ್ಲಿರುವ ಆಕಾಂಕ್ಷಿಗಳ ಪಟ್ಟಿಯನ್ನು ವಿನಿಮಯ ಮಾಡಿಕೊಂಡಿದ್ದು, ಅವಕಾಶ ನೀಡುವ ಬಗ್ಗೆ ಚರ್ಚೆ ನಡೆಸಿದ್ದಾರೆ. ಜಾತಿ, ಧರ್ಮ, ಪ್ರಾದೇಶಿಕತೆ, ಪಕ್ಷ ನಿಷ್ಠೆ ಹಾಗೂ ಸಕ್ರಿಯ ಪಾಲ್ಗೋಳ್ಳುವಿಕೆಯನ್ನು ಪರಿಗಣಿಸಲಾಗಿದೆ.

ಮತ್ತೊಂದು ಮಹತ್ವದ ಬೆಳವಣಿಗೆಯಲ್ಲಿ ನಿಗಮ ಮಂಡಳಿಗಳಲ್ಲಿ ಅಧಿಕಾರ ಹಿಡಿಯುವ ಕನಸು ಕಾಣುತ್ತಿದ್ದವರಿಗೆ ರಾಜ್ಯ ನಾಯಕರು ಕೆಲ ಷರತ್ತುಗಳನ್ನು ಮುಂದಿಟ್ಟಿದ್ದಾರೆ. ಮೊದಲು ನಿಗಮ ಮಂಡಳಿಯ ಅಧ್ಯಕ್ಷ ಸ್ಥಾನ ಪಡೆದುಕೊಂಡು, ಮುಂದಿನ ಸಚಿವ ಸಂಪುಟ ವಿಸ್ತರಣೆಯ ವೇಳೆ ಲಾಬಿ ನಡೆಸಿ, ಸಂಪುಟಕ್ಕೆ ಸೇರಿಕೊಳ್ಳುವ ಸನ್ನಾಹ ನಡೆಸಿದ್ದವರಿಗೆ ತಳಮಳ ಸೃಷ್ಟಿಸಿವೆ.

ನಿಗಮ ಮಂಡಳಿಯಲ್ಲಿ ಸ್ಥಾನ ಪಡೆದವರಿಗೆ ಮುಂದಿನ ಸಚಿವ ಸಂಪುಟ ವಿಸ್ತರಣೆಯಲ್ಲಿ ಅವಕಾಶ ನೀಡಲಾಗುವುದಿಲ್ಲ ಎಂದು ಹೈಕಮಾಂಡ್ ಸಂದೇಶವನ್ನು ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಆಕಾಂಕ್ಷಿಗಳಿಗೆ ತಲುಪಿಸಿದ್ದಾರೆ. ಮುಂದಿನ ಸಚಿವ ಸಂಪುಟ ವಿಸ್ತರಣೆಯಲ್ಲಾದರೂ ಅವಕಾಶ ನೀಡಲಾಗುವುದೇ ಎಂಬ ಪ್ರಶ್ನೆಗೂ ಸ್ಪಷ್ಟ ಉತ್ತರ ಸಿಗುತ್ತಿಲ್ಲ. ಆ ಕಾಲಕ್ಕನುಗುಣವಾಗಿ ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧವಾಗಿರಬೇಕಾಗುತ್ತದೆ ಎಂಬ ಸಂದೇಶಗಳು ರವಾನೆಯಾಗುತ್ತಿವೆ. ಹೀಗಾಗಿ ಬಹಳಷ್ಟು ಹಿರಿಯ ಹಾಗೂ ಪ್ರಭಾವಿ ಶಾಸಕರು ನಿಗಮ ಮಂಡಳಿಗಳನ್ನು ಒಪ್ಪಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ.

ಈ ಹಿಂದೆ ಚಾಮರಾಜನಗರ ಕ್ಷೇತ್ರದ ಶಾಸಕ ಪುಟ್ಟರಂಗಶೆಟ್ಟಿ ಅವರಿಗೆ ವಿಧಾನಸಭೆ ಉಪಾಧ್ಯಕ್ಷ ಸ್ಥಾನ ನೀಡಲು ನಿರ್ಧರಿಸಲಾಗಿತ್ತು. ಆದರೆ ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಅವರು ಪಕ್ಷದ ಸಲಹೆಯನ್ನು ತಿರಸ್ಕರಿಸಿದ್ದರು. ಬಳಿಕ ವಿಧಾನಸಭೆ ಉಪಾಧ್ಯಕ್ಷ ಸ್ಥಾನವನ್ನು ಸಚಿವ ಸ್ಥಾನದ ಮತ್ತೊಬ್ಬ ಆಕಾಂಕ್ಷಿ ರುದ್ರಪ್ಪ ಲಮಾಣಿ ಅವರಿಗೆ ನೀಡಲಾಗಿದೆ. ಅವಕಾಶ ತಳ್ಳಿ ಹಾಕಿದ ಪುಟ್ಟರಂಗಶೆಟ್ಟಿ ಈಗ ಸಚಿವ ಸ್ಥಾನವೂ ಇಲ್ಲ, ಉಪಾಧ್ಯಕ್ಷ ಸ್ಥಾನವೂ ಇಲ್ಲದಂತಾಗಿ ದಿನ ಬೇಳಗಾದರೆ ಮುಖ್ಯಮಂತ್ರಿಯವರ ವಿರುದ್ಧ ಅಸಮಧಾನ ವ್ಯಕ್ತಪಡಿಸಿಕೊಂಡು ತಿರುಗಾಡುತ್ತಿದ್ದಾರೆ.

ಏಷ್ಯನ್ ಚಾಂಪಿಯನ್‍ಶಿಪ್‍ನಲ್ಲಿ ಕಂಚು ಗೆದ್ದ ಶೂಟರ್ ಅನೀಶ್

ಇದೇ ಪರಿಸ್ಥಿತಿ ತಮಗೆ ಬರಬಹುದು ಎಂಬ ಅಳುಕು ಬಹಳಷ್ಟು ಶಾಸಕರನ್ನು ಕಾಡುತ್ತಿದೆ. ಪ್ರಾದೇಶಿಕ, ಸಾಮಾಜಿಕ ನ್ಯಾಯ ಲೆಕ್ಕಾಚಾರದಲ್ಲಿ ಬಹಳಷ್ಟು ಮಂದಿ ತಮಗೆ ಸಚಿವ ಸ್ಥಾನ ಸಿಗಲೇಬೇಕು ಎಂಬ ನಿರೀಕ್ಷೆಯಲ್ಲಿ ಇರುವವರು ನಿಗಮ ಮಂಡಳಿಗಳ ಅಧ್ಯಕ್ಷ ಸ್ಥಾನವನ್ನು ನಿರಾಕರಿಸುತ್ತಿದ್ದಾರೆ. ಉಳಿದವರು ಇರುವುದರಲ್ಲೇ ಸಂವೃದ್ಧಿಯಾದ ನಿಗಮ ಮಂಡಳಿಯಲ್ಲಿ ಅಧಿಕಾರ ಹಿಡಿಯಲು ಲಾಬಿ ನಡೆಸುತ್ತಿದ್ದಾರೆ. ಒಂದೆರಡು ದಿನಗಳಲ್ಲಿ ಪಟ್ಟಿ ಪ್ರಕಟವಾಗುವ ನಿರೀಕ್ಷೆ ಇದ್ದು, ಶಾಸಕರು ಆಕಾಂಕ್ಷಿಗಳು ತುದಿಗಾಲಲ್ಲಿ ನಿಂತಿದ್ದಾರೆ.

ಶಾಸಕರಂತೆ ಪ್ರಮುಖ ನಾಯಕರಿಗೂ ನಿಗಮ-ಮಂಡಳಿಗಳ ಅಧ್ಯಕ್ಷ ಸ್ಥಾನದಲ್ಲಿ ಅರ್ಧಚಂದ್ರ ಸ್ಥಿತಿ ನಿರ್ಮಾಣವಾಗಿದೆ. ಮುಂದಿನ ದಿನಗಳಲ್ಲಿ 15ರಿಂದ 20 ವಿಧಾನ ಪರಿಷತ್ ಸ್ಥಾನಗಳು ತೆರವಾಗುತ್ತಿವೆ. ಬಹಳಷ್ಟು ಮಂದಿ ಅವುಗಳ ಮೇಲೆ ಕಣ್ಣಿಟ್ಟಿದ್ದಾರೆ. ಇನ್ನೂ ಕೆಲವರು ಲೋಕಸಭೆ ಚುನಾವಣೆ ಸ್ಪರ್ಧೆಯ ನಿರೀಕ್ಷೆಯಲ್ಲಿದ್ದಾರೆ. ಅವರುಗಳಿಗೆ ಯಾವುದಾರು ಒಂದು ಆಯ್ಕೆ ಮಾಡಿಕೊಳ್ಳುವಂತೆ ಷರತ್ತು ಮುಂದಿಡಲಾಗಿದೆ.

ಹೀಗಾಗಿ ಬಹಳಷ್ಟು ನಾಯಕರು ಕೂಡ ಗೊಂದಲದಲ್ಲಿದ್ದಾರೆ. ಮುಂದಿನ ದಿನಗಳಲ್ಲಿ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಅವಕಾಶ ನೀಡಲಾಗುವುದೇ ಎಂಬುದು ಖಚಿತವಿಲ್ಲ. ಪಕ್ಷದಿಂದ ನಡೆಸಲಾಗುವ ಸಮೀಕ್ಷೆ, ಹೈಕಮಾಂಡ್‍ನ ಅಂದಾಜು, ಸಾಮಾಜಿಕ ನ್ಯಾಯ ಆಧಾರದ ಮೇಲೆ ಲೋಕಸಭೆ ಚುನಾವಣೆ ಟಿಕೆಟ್‍ಗಳು ಹಂಚಿಕೆಯಾಗಲಿವೆ, ಯಾರಿಗೆ ಅವಕಾಶ ಸಿಗಲಿದೆ ಎಂಬ ಖಚಿತತೆ ಇಲ್ಲ.

ಚುನಾವಣೆಯನ್ನು ನಂಬಿಕೊಂಡು ಈಗ ಸಿಗುವ ನಿಗಮ ಮಂಡಳಿಯ ಅಧಿಕಾರವನ್ನು ಕಳೆದುಕೊಳ್ಳಲು ಸಾಧ್ಯವೇ ಎಂಬ ಗೊಂದಲದಲ್ಲಿ ಪ್ರಮುಖ ನಾಯಕರಿದ್ದಾರೆ. ವಿಧಾನ ಪರಿಷತ್ ಸ್ಥಾನಕ್ಕೆ ಬಹಳಷ್ಟು ಮಂದಿ ಟವಲ್ ಹಾಕಿದ್ದಾರೆ. ಅಂತಹವರು ನಿಗಮಮಂಡಳಿಯನ್ನು ಒಪ್ಪಿಕೊಂಡರೆ ರಾಜಕೀಯ ಭವಿಷ್ಯವೇ ಸೀಮಿತಗೊಳ್ಳುತ್ತದೆ ಎಂಬ ದುಗುಡದಲ್ಲಿದ್ದಾರೆ.

ಅಲ್ಲಿ-ಇಲ್ಲಿ-ಎಲ್ಲಾ ಕಡೆ ಅವಕಾಶ ಗಿಟ್ಟಿಸಿ, ಅಧಿಕಾರ ಅನುಭವಿಸುವ ಕನಸು ಕಾಣುತ್ತಿದ್ದವರಿಗೆ ಹೈಕಮಾಂಡ್‍ನ ಷರತ್ತು ನುಂಗಲಾರದ ಬಿಸಿ ತುಪ್ಪವಾಗಿದೆ. ಪ್ರಭಾವಿ ನಾಯಕರ ಕೃಪಾಕಟಾಕ್ಷದಿಂದ ಹೇಗೋ ಬೇಳೆ ಬೇಯಿಸಿಕೊಳ್ಳಬಹುದು ಎಂದುಕೊಂಡವರಿಗೆ ತ್ರಿಶಂಕು ಸ್ಥಿತಿ ನಿರ್ಮಾಣವಾಗಿದೆ.

RELATED ARTICLES

Latest News