Monday, November 25, 2024
Homeರಾಜ್ಯಘಟಾನುಘಟಿ ನಾಯಕರ ಶಕ್ತಿ ಪ್ರದರ್ಶನ : ನಾಮಪತ್ರ ಸಲ್ಲಿಕೆ ಭರಾಟೆ

ಘಟಾನುಘಟಿ ನಾಯಕರ ಶಕ್ತಿ ಪ್ರದರ್ಶನ : ನಾಮಪತ್ರ ಸಲ್ಲಿಕೆ ಭರಾಟೆ

ಬೆಂಗಳೂರು, ಏ.3-ಪ್ರಸಕ್ತ ಲೋಕಸಭಾ ಚುನಾವಣೆಯ ಮೊದಲ ಹಂತದ ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ನಾಮಪತ್ರ ಸಲ್ಲಿಸಲು ನಾಳೆ ಕಡೆಯ ದಿನವಾಗಿದ್ದು, ಇಂದು ವಿವಿಧ ರಾಜಕೀಯ ಪಕ್ಷಗಳ ಹಾಗೂ ಸ್ವತಂತ್ರ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ ಭರಾಟೆ ಜೋರಾಗಿತ್ತು. ಘನಾಘಟಿ ನಾಯಕರು ನಾಮಪತ್ರ ಸಲ್ಲಿಕೆ ಮೂಲಕ ಚುನಾವಣಾ ಅಖಾಡಕ್ಕೆ ಇಳಿದಿದ್ದಾರೆ. ಇದರಿಂದ ಲೋಕಸಭಾ ಚುನಾವಣಾ ಕಣ ರಂಗೇರತೊಡಗಿದೆ.

ನಾಮಪತ್ರ ಸಲ್ಲಿಕೆಗೂ ಮುನ್ನ ದೇವಾಲಯಗಳಲ್ಲಿ ಕೆಲವು ಅಭ್ಯರ್ಥಿಗಳು ಪೂಜೆ ಸಲ್ಲಿಸಿ,ಅನಂತರ ರೋಡ್ ಶೋ ನಡೆಸಿದರು. ಶಕ್ತಿ ಪ್ರದರ್ಶನ ಮೂಲಕ ಕೆಲವರು ನಾಮಪತ್ರ ಸಲ್ಲಿಸಿದ್ದರೆ, ಮತ್ತೆ ಕೆಲವರು ಯಾವುದೇ ಶಕ್ತಿ ಪ್ರದರ್ಶನವಿಲ್ಲದೆ, ಸರಳವಾಗಿ ಉಮೇದುವಾರಿಕೆ ಸಲ್ಲಿಸಿದರು. ಬಹಳಷ್ಟು ಅಭ್ಯರ್ಥಿಗಳು ರೋಡ್ ಶೋ, ಸಾರ್ವಜನಿಕ ಸಭೆ ಬಳಿಕ ಆಯಾ ಕ್ಷೇತ್ರದ ಚುನಾವಣಾಧಿಕಾರಿಗಳ ಕಚೇರಿಗೆ ತೆರಳಿ ತಮ್ಮ ಉಮೇದುವಾರಿಕೆ ಸಲ್ಲಿಸಿದರು.

ರೋಡ್ ಶೋ ಹಾಗೂ ನಾಮಪತ್ರ ಸಲ್ಲಿಸುವ ವೇಳೆ ಆಯಾ ಪಕ್ಷದ ನಾಯಕರು, ಮುಖಂಡರು ಅಭ್ಯರ್ಥಿಗಳಿಗೆ ಸಾಥ್ ನೀಡಿದರು. ಇಂದು ಉಮೇದುವಾರಿಕೆ ಸಲ್ಲಿಸಿದವರಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಮೈಸೂರು ರಾಜ ವಂಶಸ್ಥ ಯದುವೀರ್ ಕೃಷ್ಣರಾಜದತ್ತ ಒಡೆಯರ್, ಮಾಜಿ ಸಚಿವ ವಿ.ಸೋಮಣ್ಣ, ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮನ್ಸೂರ್ ಅಲಿ ಖಾನ್ ಪ್ರಮುಖರಾಗಿದ್ದಾರೆ.

ಮಾರ್ಚ್ 28ರಿಂದ ನಾಮಪತ್ರ ಸಲ್ಲಿಕೆ ಪ್ರಾರಂಭವಾಗಿದ್ದು, ನಿನ್ನೆಯವರೆಗೆ 152 ಮಂದಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಅದರಲ್ಲಿ 135 ಪುರುಷ, 17 ಮಹಿಳಾ ಅಭ್ಯರ್ಥಿಗಳು ಉಮೇದುವಾರಿಕೆ ಸಲ್ಲಿಸಿದ್ದಾರೆ. ಬಿಜೆಪಿಯಿಂದ 9, ಕಾಂಗ್ರೆಸ್‍ನಿಂದ 8, ಬಿಎಸ್‍ಪಿಯಿಂದ 5 ಹಾಗೂ ಜೆಡಿಎಸ್‍ನಿಂದ ಇಬ್ಬರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.

ರಾಜಕೀಯ ಪಕ್ಷಗಳು ಅಧಿಕೃತವಾಗಿ ಅಭ್ಯರ್ಥಿಗಳನ್ನು ಘೋಷಿಸಿದ್ದರೂ ಇನ್ನೂ ಕೆಲವರು ತಮ್ಮ ಉಮೇದುವಾರಿಕೆ ಸಲ್ಲಿಸಿಲ್ಲ. ಕೆಲವರು ಶುಭದಿನ, ಮುಹೂರ್ತಕ್ಕಾಗಿ ನಾಳೆವರೆಗೂ ಕಾಯುತ್ತಿದ್ದಾರೆ. ಈಗಾಗಲೇ ಕೆಲವರು ಸಾಂಕೇತಿಕವಾಗಿ ತಮ್ಮ ಉಮೇದುವಾರಿಕೆ ಸಲ್ಲಿಸಿದ್ದು, ಮತ್ತೊಮ್ಮೆ ರೋಡ್ ಶೋ ನಡೆಸಿ ಶಕ್ತಿ ಪ್ರದರ್ಶನದ ಮೂಲಕ ನಾಮಪತ್ರ ಸಲ್ಲಿಸುವವರೂ ಇದ್ದಾರೆ.

ಶೋಭಾಕರಂದ್ಲಾಜೆ ಅವರು ಸಂಜಯನಗರದ ರಾಧಾಕೃಷ್ಣ ದೇವಾಲಯ ಮತ್ತು ಮೈಸೂರು ಬ್ಯಾಂಕ್ ವೃತ್ತದ ಗಣಪತಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ನಂತರ ರೋಡ್ ಶೋ ನಡೆಸಿದರು. ಬಳಿಕ ನಗರ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ತಮ್ಮ ಉಮೇದುವಾರಿಕೆಯನ್ನು ಚುನಾವಣಾಕಾರಿಗಳಿಗೆ ಸಲ್ಲಿಸಿದರು.

ಮೈಸೂರಿನ ಕೋಟೆ ಆಂಜನೇಯಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಯದುವೀರ್ ಕೃಷ್ಣರಾಜದತ್ತ ಒಡೆಯರ್, ಮೈಸೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಚುನಾವಣಾಧಿಕಾರಿಗಳಿಗೆ ನಾಮಪತ್ರ ಸಲ್ಲಿಸಿದರು.

ತುಮಕೂರು ಲೋಕಸಭಾ ಕ್ಷೇತ್ರ ಬಿಜೆಪಿ ಅಭ್ಯರ್ಥಿ ವಿ. ಸೋಮಣ್ಣ ರೋಡ್ ಶೋ ನಡೆಸಿದ ಬಳಿಕ ತಮ್ಮ ಉಮೇದುವಾರಿಕೆ ಸಲ್ಲಿಸಿದರು. ಚಾಮರಾಜನಗರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್. ಬಾಲರಾಜ್, ಕಾಂಗ್ರೆಸ್ ಅಭ್ಯರ್ಥಿ ಸುನೀಲ್ ಬೋಸ್ ಅವರು ನಾಮಪತ್ರ ಸಲ್ಲಿಸಿದರು. ಉಡುಪಿ – ಚಿಕ್ಕಮಗಳೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಅವರು ತಮ್ಮ ನಾಮಪತ್ರ ಸಲ್ಲಿಸಿದರು.
ಮೈಸೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮಣ್ ಅವರು ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ವಿಶೇಷ ಪೂಜೆ ಸಲ್ಲಿಸಿದ ನಂತರ ತಮ್ಮ ಉಮೇದುವಾರಿಕೆ ಸಲ್ಲಿಸಿದರು. ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮನ್ಸೂರ್ ಅಲಿ ಖಾನ್ ಅವರು ಬಿಬಿಎಂಪಿ ಕಚೇರಿಯಲ್ಲಿ ತಮ್ಮ ಉಮೇದುವಾರಿಕೆ ಸಲ್ಲಿಸಿದರು.

RELATED ARTICLES

Latest News