Monday, May 13, 2024
Homeರಾಷ್ಟ್ರೀಯಮಹಾರಾಷ್ಟ್ರ ಮಹಾವಿಕಾಸ್ ಅಘಾಡಿ ಸೀಟು ಹಂಚಿಕೆ ಅಂತಿಮ

ಮಹಾರಾಷ್ಟ್ರ ಮಹಾವಿಕಾಸ್ ಅಘಾಡಿ ಸೀಟು ಹಂಚಿಕೆ ಅಂತಿಮ

ಮುಂಬೈ,ಮಾ.1- ಮಹಾರಾಷ್ಟ್ರದ 48 ಲೋಕಸಭಾ ಸ್ಥಾನಗಳಿಗೆ ಮಹಾರಾಷ್ಟ್ರ ವಿರೋಧ ಪಕ್ಷದ ಮೈತ್ರಿಕೂಟ ಮಹಾ ವಿಕಾಸ್ ಅಘಾಡಿ (ಎಂವಿಎ) ಸೀಟು ಹಂಚಿಕೆಯ ಮಾತುಕತೆ ಅಂತಿಮಗೊಳಿಸಿದೆ ಎಂದು ವರದಿಯಾಗಿದೆ. ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ 20, ಕಾಂಗ್ರೆಸ್ 18 ಮತ್ತು ಉಳಿದ 10 ಸ್ಥಾನಗಳಲ್ಲಿ ಶರದ್ ಪವಾರ್ ನೇತೃತ್ವದ ಎನ್‍ಸಿಪಿ ಸ್ರ್ಪಧಿಸಲಿದೆ ಎಂದು ತಿಳಿದುಬಂದಿದೆ.

ರಾಜು ಶೆಟ್ಟಿ ನೇತೃತ್ವದ ಸ್ವಾಭಿಮಾನಿ ಶೆಟ್ಕರಿ ಸಂಘಟನೆಯಂತಹ ಸಣ್ಣ ಪಕ್ಷಗಳಿಗೆ ಆಯಾ ಮೈತ್ರಿ ಪಾಲುದಾರರು ಸ್ಥಾನಗಳನ್ನು ನೀಡಲಿದ್ದಾರೆ ಎಂದು ಮಹಾ ವಿಕಾಸ್ ಅಘಾಡಿ ಮೂಲಗಳು ತಿಳಿಸಿವೆ. ಪ್ರಕಾಶ್ ಅಂಬೇಡ್ಕರ್ ನೇತೃತ್ವದ ವಂಚಿತ್ ಬಹುಜನ ಅಘಾಡಿ ಹೊಂದಾಣಿಕೆ ಮಾಡಿಕೊಂಡರೆ, ಶಿವಸೇನೆ ಮತ್ತು ಕಾಂಗ್ರೆಸ್ ಕೋಟಾದಿಂದ ಕನಿಷ್ಠ ಮೂರು ಸ್ಥಾನಗಳನ್ನು ನೀಡಬಹುದು ಎನ್ನಲಾಗಿದೆ.

ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ನಾನಾ ಪಟೋಲೆ, ಪಕ್ಷದ ಹಿರಿಯ ನಾಯಕ ಬಾಳಾಸಾಹೇಬ್ ಥೋರಟ್ ಮತ್ತು ಮಾಜಿ ಸಿಎಂ ಪೃಥ್ವಿರಾಜ್ ಚವ್ಹಾಣ್ ಅವರು ಗುರುವಾರ ಶರದ್ ಪವಾರ್ ಅವರನ್ನು ಅವರ ಸಿಲ್ವರ್ ಓಕ್ ನಿವಾಸದಲ್ಲಿ ಭೇಟಿಯಾಗಿ ಮೈತ್ರಿ ಮಾತುಕತೆ ಅಂತಿಮಗೊಳಿಸಿದರು. ಎನ್‍ಸಿಪಿ ನಾಯಕ ಜಿತೇಂದ್ರ ಅವ್ಹಾದ್ ಮಾತನಾಡಿ, ಲೋಕಸಭೆ ಚುನಾವಣೆಯ ಕುರಿತು ಚರ್ಚೆಗಳು ಮುಗಿದಿವೆ ಎಂದು ಹೇಳಿದ್ದಾರೆ.

ಬಿಜೆಪಿಯು ಮೈತ್ರಿ ಅಭ್ಯರ್ಥಿಗಳನ್ನು ಬೇಟೆಯಾಡಬಹುದು ಅಥವಾ ಬೆದರಿಕೆ ಹಾಕಬಹುದು ಎಂಬ ಕಾರಣದಿಂದ ಔಪಚಾರಿಕ ಘೋಷಣೆ ವಿಳಂಬವಾಗಬಹುದು ಎಂದು ತಿಳಿದು ಬಂದಿದೆ. ಸೀಟು ಹಂಚಿಕೆಗೆ ಸಂಬಂಧಿಸಿದ ಬಹುತೇಕ ಸಮಸ್ಯೆಗಳು ಬಗೆಹರಿದಿವೆ. ಉಳಿದವುಗಳನ್ನು ಪಕ್ಷದ ವರಿಷ್ಠರು ಪರಿಹರಿಸುತ್ತಾರೆ ಎಂದು ಅವ್ಹಾದ್ ಹೇಳಿದ್ದಾರೆ. ಪ್ರಕಾಶ್ ಅಂಬೇಡ್ಕರ್ ನೇತೃತ್ವದ ವಂಚಿತ್ ಬಹುಜನ ಅಘಾಡಿ ಮಹಾರಾಷ್ಟ್ರದಲ್ಲಿ ವಿರೋಧ ಪಕ್ಷಗಳ ಮೈತ್ರಿಕೂಟದ ಭಾಗವಾಗುವ ಸಾಧ್ಯತೆಯಿಲ್ಲ ಎಂದು ಅವ್ಹಾದ್‍ಮೂಲಗಳು ತಿಳಿಸಿವೆ.

ಪ್ರಕಾಶ್ ಅಂಬೇಡ್ಕರ್ ಅವರು 27 ಸ್ಥಾನಗಳಿಗಾಗಿ ಎದುರು ನೋಡುತ್ತಿದ್ದಾರೆ, ಇದು ಅಪ್ರಾಯೋಗಿಕವಾಗಿದೆ. ನಾವು ಅವರನ್ನು ಮೈತ್ರಿಗೆ ಸೇರಿಸಿಕೊಳ್ಳಲು ಉತ್ಸುಕರಾಗಿದ್ದೇವೆ ಆದರೆ ಅವರು ಬಿಜೆಪಿ ಆಣತಿಯಂತೆ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ. ಗೆಲುವಿನ ಅಂಶವನ್ನು ಗಮನದಲ್ಲಿಟ್ಟುಕೊಂಡು ನಾವು ಸೀಟುಗಳನ್ನು ವಿನಿಮಯ ಮಾಡಿಕೊಳ್ಳಲು ಸಿದ್ಧರಿದ್ದೇವೆ. ನಾವು ಒಗ್ಗಟ್ಟಿನಿಂದ ಇರಬೇಕಾಗಿದೆ. ಉದಾಹರಣೆಗೆ, ರೈತರು ತಮ್ಮ ಬೆಳೆಗಳಿಗೆ ಕಡಿಮೆ ದರವನ್ನು ನೀಡುವುದರಿಂದ ಸಂತುಷ್ಟರಾಗಿಲ್ಲ, ಸಾಮಾನ್ಯ ಜನರು ಹೆಚ್ಚಿನ ಹಣದುಬ್ಬರದಿಂದ ತೊಂದರೆಗೀಡಾಗಿದ್ದಾರೆ, ಜೊತೆಗೆ ನಿರುದ್ಯೋಗವು ಯುವಜನರಲ್ಲಿ ಪ್ರಮುಖ ಅಂಶವಾಗಿದೆ. ಇವುಗಳ ವಿರುದ್ಧ ನಾವು ಒಟ್ಟಾಗಿ ಧ್ವನಿ ಎತ್ತಬೇಕು ಎಂದಿದ್ದಾರೆ.

RELATED ARTICLES

Latest News