Friday, May 3, 2024
Homeರಾಜ್ಯಬೆಳ್ಳಂಬೆಳಗ್ಗೆ ರಾಜ್ಯದ ಹಲವೆಡೆ ಏಕಕಾಲಕ್ಕೆ ಲೋಕಾಯುಕ್ತ ದಾಳಿ

ಬೆಳ್ಳಂಬೆಳಗ್ಗೆ ರಾಜ್ಯದ ಹಲವೆಡೆ ಏಕಕಾಲಕ್ಕೆ ಲೋಕಾಯುಕ್ತ ದಾಳಿ

ಬೆಂಗಳೂರು, ಮಾ.27- ಲೋಕಸಭೆ ಚುನಾವಣೆ ಕಾವಿನ ನಡುವೆಯೇ ಇಂದು ಬೆಳ್ಳಂಬೆಳಗ್ಗೆ ಲೋಕಾಯುಕ್ತ ಪೊಲೀಸರು ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಭ್ರಷ್ಟ ಅಧಿಕಾರಿಗಳ ಮನೆ, ಕಚೇರಿ ಮೇಲೆ ದಾಳಿ ನಡೆಸಿ ಅಪಾರ ಪ್ರಮಾಣದ ಚರ-ಸ್ಥಿರ ಅಕ್ರಮ ಸಂಪತ್ತನ್ನು ಪತ್ತೆಹಚ್ಚಿದ್ದಾರೆ.

ರಾಜಧಾನಿ ಬೆಂಗಳೂರು, ಉಡುಪಿ, ಮೈಸೂರು, ಕೊಡಗು, ಕಾರವಾರ, ಬೀದರ್, ಧಾರವಾಡ, ವಿಜಯಪುರ, ಚಿಕ್ಕಬಳ್ಳಾಪುರ, ಮಂಡ್ಯ, ಬೆಳಗಾವಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ 60ಕ್ಕೂ ಹೆಚ್ಚು ಸ್ಥಳಗಳಲ್ಲಿ ಇಂದು ಏಕಕಾಲದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ.

ಸಾರ್ವಜನಿಕ ವಲಯದಿಂದ ಬಂದ ದೂರುಗಳನ್ನಾಧರಿಸಿ ಪರಿಶೀಲನೆ ನಡೆಸಿದ ನಂತರ 13 ಸರ್ಕಾರಿ ಅಧಿಕಾರಿಗಳ ಮನೆ, ಕಚೇರಿ ಹಾಗೂ ಸಂಬಂಧಿಕರ ತಾಣಗಳಲ್ಲೂ ಕೂಡ ತಪಾಸಣಾ ಕಾರ್ಯ ನಡೆಸಲಾಗುತ್ತಿದೆ ಎಂದು ಲೋಕಾಯುಕ್ತ ಮೂಲಗಳು ತಿಳಿಸಿವೆ. ರಾಜ್ಯದ ಅತಿ ದೊಡ್ಡ ಶ್ರೀಮಂತ ಗ್ರಾಮ ಪಂಚಾಯಿತಿ ಎಂಬ ಹೆಗ್ಗಳಿಕೆ ಪಡೆದಿರುವ ರಾಜಧಾನಿ ಬೆಂಗಳೂರಿಗೆ ಹೊಂದಿಕೊಂಡಂತಿರುವ ಬಿಡದಿಯ ಮಂಚನಾಯಕನಹಳ್ಳಿ ಗ್ರಾಪಂ ಪಿಡಿಒ ಯತೀಶ್‍ಚಂದ್ರ ಅವರ ಮನೆ ಮೇಲೆ ದಾಳಿ ನಡೆಸಲಾಗಿದ್ದು, ಈ ವೇಳೆ ಅವರು ಇರಲಿಲ್ಲ. ನಂತರ ಮಾಹಿತಿ ಪಡೆದು ಈಗಲ್‍ಟನ್ ರೆಸಾರ್ಟ್‍ನಲ್ಲಿದ್ದ ಅವರನ್ನು ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಇವರು ಕರ್ತವ್ಯ ನಿರ್ವಹಿಸುತ್ತಿದ್ದ ಗ್ರಾಪಂ ಕಚೇರಿ, ಮೈಸೂರು ಸೇರಿದಂತೆ ಏಳಕ್ಕೂ ಹೆಚ್ಚು ಕಡೆ ದಾಳಿ ನಡೆಸಲಾಗಿದೆ. ಈ ವೇಳೆ ಮೈಸೂರಿನಲ್ಲಿ ಪತ್ನಿಯ ಹೆಸರಿನಲ್ಲಿರುವ ಐಷಾರಾಮಿ ಕಟ್ಟಡಗಳು, ವಿವಿಧೆಡೆ ನಿವೇಶನಗಳು ಹಾಗೂ ಹಣ ಹೂಡಿಕೆ ಬಗ್ಗೆ ದಾಖಲೆಗಳು ಪತ್ತೆಯಾಗಿವೆ.

ಇದೇ ವೇಳೆ ನೆರೆಯ ಚನ್ನಪಟ್ಟಣ ತಾಲೂಕಿನ ಮೈಲನಾಯಕನಹಳ್ಳಿ ಗ್ರಾಪಂ ಪಿಡಿಒ ಶೀಬಾ ಅವರ ನಿವಾಸ, ಕಚೇರಿ ಮೇಲೆ ದಾಳಿ ನಡೆಸಲಾಗಿದೆ. ವಿಶೇಷವೆಂದರೆ ಇವರು ಕಳೆದ ಒಂದು ತಿಂಗಳ ಹಿಂದೆ ಎರಡು ತಿಂಗಳು ರಜೆ ಹಾಕಿ ಮನೆಯಲ್ಲಿದ್ದರು ಎಂದು ತಿಳಿದುಬಂದಿದೆ. ಇವರ ನಿವಾಸದಲ್ಲಿ ನಗದು, ಕೆಲ ಆಸ್ತಿ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ.

ಇನ್ನು ಬೆಂಗಳೂರು ಮಹಾನಗರ ಪಾಲಿಕೆಯ ಮುಖ್ಯ ಎಂಜಿನಿಯರ್ ರಂಗನಾಥ್ ಅವರ ಬೆಂಗಳೂರಿನ ನಿವಾಸ ಸೇರಿದಂತೆ ಹಲವೆಡೆ ದಾಳಿ ನಡೆಸಲಾಗಿದೆ. ಲೋಕಾಯುಕ್ತ ಎಸ್‍ಪಿ ನೇತೃತ್ವದಲ್ಲಿ ಸುಮಾರು 30ಕ್ಕೂ ಹೆಚ್ಚು ಸಿಬ್ಬಂದಿ ಐದು ಕಡೆ ದಾಳಿ ನಡೆಸಿ ಹಲವು ದಾಖಲೆಗಳು, ನಗದು ಹಾಗೂ ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಕಾರವಾರ ನಗರಾಭಿವೃದ್ಧಿ ಪ್ರಾಧಿಕಾರದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರಕಾಶ್ ಆರ್.ರೇವಣಕರ್ ಅವರ ಕಚೇರಿ ಹಾಗೂ ಐಶ್ವರ್ಯ ರೆಸಿಡೆನ್ಷಿಯಲ್ ಲೇಔಟ್‍ನಲ್ಲಿರುವ ಮನೆ ಮೇಲೆ ದಾಳಿ ನಡೆದಿದೆ. ಈ ವೇಳೆ ಲೋಕಾಯುಕ್ತ ಅಕಾರಿಗಳನ್ನು ಕಂಡು ಮನೆಯವರು ಶಾಕ್ ಆಗಿದ್ದಾರೆ. ತಪಾಸಣೆ ವೇಳೆ ಹಲವು ಆಸ್ತಿಗಳ ದಾಖಲಾತಿಗಳು ಸಿಕ್ಕಿದ್ದು, ಚಿನ್ನಾಭರಣ ಸೇರಿದಂತೆ ಹಲವು ವಸ್ತುಗಳ ಮೌಲ್ಯವನ್ನು ಪರಿಶೀಲಿಸಲಾಗುತ್ತಿದೆ.

ಬೀದರ್ ಜಿಲ್ಲೆಯ ಬಾಲ್ಕಿ ಕಾರಂಜ ವಿಭಾಗದ ಎಲೆಕ್ಟ್ರಿಕಲ್ ಎಂಜಿನಿಯರ್ ಶಿವಕುಮಾರ ಸ್ವಾಮಿ ಅವರ ಅಗ್ರಿಕಲ್ಚರ್ ಕಾಲೋನಿಯಲ್ಲಿರುವ ಮನೆ, ಕಲಬುರಗಿಯ ಎಂಬಿ ಕಾಲೋನಿಯಲ್ಲಿರುವ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.ಚಿಕ್ಕಬಳ್ಳಾಪುರದ ಕೆಆರ್‍ಡಿಎಲ್‍ನ ಅಧಿಕಾರಿ ಸದಾಶಿವಯ್ಯ ಅವರ ಯಲಹಂಕದಲ್ಲಿರುವ ಮನೆ ಹಾಗೂ ಕಚೇರಿಗಳ ಮೇಲೆ ದಾಳಿ ನಡೆಸಿದೆ. ಇವರಿಗೆ ಮೈಸೂರಿನಲ್ಲಿ ಎರಡು ಮನೆ, ಟಿ.ನರಸೀಪುರದಲ್ಲಿ ಮನೆ ಇರುವುದು ಪರಿಶೀಲನೆ ವೇಳೆ ತಿಳಿದುಬಂದಿದ್ದು, ಇನ್ನೂ ಹಲವೆಡೆ ಕೃಷಿ ಜಮೀನು ಹಾಗೂ ನಿವೇಶಗಳನ್ನು ಹೊಂದಿರುವ ಬಗ್ಗೆ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ.

ವಿಜಯಪುರದಲ್ಲಿ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ಷಣ್ಮುಗಪ್ಪ ತೀರ್ಥ ಅವರಿಗೆ ಲೋಕಾಯುಕ್ತ ಪೊಲೀಸರು ಶಾಕ್ ನೀಡಿದ್ದಾರೆ. ವಿಜಯಪುರದ ಚಾಲುಕ್ಯ ನಗರದಲ್ಲಿರುವ ನಿವಾಸ, ಜಮಖಂಡಿಯಲ್ಲಿರುವ ಮತ್ತೊಂದು ಮನೆ ಹಾಗೂ ಅವರ ಸಂಬಂಧಿಕರ ಮನೆಗಳ ಮೇಲೂ ಲೋಕಾಯುಕ್ತ ದಾಳಿ ನಡೆಸಲಾಗಿದೆ.

ಇಲ್ಲಿ ಅಪಾರ ಪ್ರಮಾಣದ ಚರ-ಸ್ಥಿರ ಆಸ್ತಿಗಳ ದಾಖಲೆಗಳು ಪತ್ತೆಯಾಗಿದ್ದು, ಅವರ ಸಂಪತ್ತು ನೋಡಿ ಲೋಕಾಯುಕ್ತರೇ ಬೆರಗಾಗಿದ್ದಾರೆ. ಧಾರವಾಡದ ಅರಣ್ಯ ಸಂಶೋಧನಾ ವಿಭಾಗದ ಆರ್‍ಎಫ್‍ಒ ಮಹೇಶ್ ಹಿರೇಮಠ ಅವರ ಮೂಕಾಂಬಿಕ ನಗರದಲ್ಲಿರುವ ಮನೆ ಹಾಗೂ ಕಚೇರಿಗಳ ಮೇಲೆ ಧಾರವಾಡ ಎಸ್‍ಪಿ ಶಂಕರ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.

ಹಲವೆಡೆ ಕೃಷಿ ಜಮೀನು ಹಾಗೂ ಹಲವು ಬ್ಯಾಂಕ್‍ಗಳಲ್ಲಿ ಹೂಡಿಕೆ ಮಾಡಿರುವುದು ಪತ್ತೆಯಾಗಿದ್ದು, ಪರಿಶೀಲನೆ ಮುಂದುವರೆದಿದೆ. ಒಟ್ಟಾರೆ ಲೋಕಾಯುಕ್ತ ಅಧಿಕಾರಿಗಳು ಬೇಸಿಗೆಯ ಬಿಸಿ ನಡುವೆಯೇ ಭ್ರಷ್ಟ ಸರ್ಕಾರಿ ಅಧಿಕಾರಿಗಳಿಗೆ ಚಾಟಿ ಬೀಸಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

RELATED ARTICLES

Latest News