Saturday, June 22, 2024
Homeರಾಷ್ಟ್ರೀಯಮೂರು ರಾಜ್ಯಗಳಿಗೆ ಬಿಜೆಪಿ ಸ್ಟಾರ್ ಪ್ರಚಾರಕರ ಪಟ್ಟಿ ಬಿಡುಗಡೆ

ಮೂರು ರಾಜ್ಯಗಳಿಗೆ ಬಿಜೆಪಿ ಸ್ಟಾರ್ ಪ್ರಚಾರಕರ ಪಟ್ಟಿ ಬಿಡುಗಡೆ

ನವದೆಹಲಿ,ಮಾ.27- ಲೋಕಸಭೆ ಚುನಾವಣೆಯ ಮತ ಸಮರಕ್ಕೆ ದಿನಗಣನೆ ಆರಂಭವಾಗಿರುವಂತೆ ಬಿಜೆಪಿ ಮೂರು ರಾಜ್ಯಗಳಿಗೆ ತಾರಾ ಪ್ರಚಾರಕರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಮೂರು ಪಟ್ಟಿಗಳಲ್ಲಿ ಪ್ರಧಾನಿ ನರೇಂದ್ರಮೋದಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಗೃಹ ಸಚಿವ ಅಮಿತ್ ಶಾ, ರಸ್ತೆ ಸಾರಿಗೆ ಮತ್ತು ರಾಜ್ಯ ಸಚಿವ ನಿತಿನ್ ಗಡ್ಕರಿ ಮತ್ತು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೇರಿದ್ದಾರೆ.

ಆಯಾ ರಾಜ್ಯಗಳ ಅನೇಕ ಪ್ರಮುಖ ಬಿಜೆಪಿ ನಾಯಕರನ್ನು ಸ್ಟಾರ್ ಪ್ರಚಾರಕರನ್ನಾಗಿ ಮಾಡಲಾಗಿದೆ. ವಿಶೇಷ ಅಂದ್ರೆ ವಿಧಾನಸಭಾ ಚುನಾವಣೆಯಲ್ಲಿ ಸೋತಿರುವ ಮತ್ತು ಲೋಕಸಭೆ ಚುನಾವಣೆಯಲ್ಲಿ ಟಿಕೆಟ್ ಕೂಡ ಸಿಗದ ಕೆಲವು ನಾಯಕರ ಹೆಸರು ಕೂಡ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಇದೆ.

ಮೊದಲ ಹಂತದ ಚುನಾವಣೆಗೆ ಇನ್ನು ಕೇವಲ 25 ದಿನಗಳು ಬಾಕಿ ಉಳಿದಿರುವುದು ಗಮನಾರ್ಹ. ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನ ಏಪ್ರಿಲ್ 19ರಂದು ದೇಶದ ವಿವಿಧೆಡೆ ನಡೆಯಲಿದೆ. ಬಿಹಾರ, ಮಧ್ಯಪ್ರದೇಶ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಿಗೆ ಸ್ಟಾರ್ ಪ್ರಚಾರಕರ ಹೆಸರನ್ನು ಬಿಡುಗಡೆ ಮಾಡಲಾಗಿದ್ದು, ಬಿಹಾರದ ಪಟ್ಟಿ ಗಮನಿಸುವುದಾದರೆ, ಇಲ್ಲಿ ಅಶ್ವನಿ ಚೌಬೆ ಸ್ಟಾರ್ ಪ್ರಚಾರಕರಾಗಿದ್ದಾರೆ. ಚುನಾವಣೆಗೆ ಟಿಕೆಟ್ ಸಿಗದಿದ್ದರೂ ಬಿಜೆಪಿಯ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಅನೇಕ ಹೆಸರುಗಳು ಸೇರಿದೆ. ಇನ್ನು ಇತರ ಚುನಾವಣೆಗಳಂತೆ ಈ ಚುನಾವಣೆಯಲ್ಲೂ ಸೈಯದ್ ಶಾನವಾಜ್ ಹುಸೇನ್ ಬಿಹಾರದಿಂದ ಸ್ಟಾರ್ ಪ್ರಚಾರಕರಾಗಿದ್ದಾರೆ.

ಪ್ರಮುಖ ಕೇಂದ್ರ ನಾಯಕರಲ್ಲದೆ, ಬಿಹಾರದ ನಾಯಕರಾದ ಸುಶೀಲ್‍ಕುಮಾರ್ ಮೋದಿ, ಮಂಗಲ್ ಪಾಂಡೆ, ಸಂಜಯ್ ಜೈಸ್ವಾಲ್, ರೇಣುದೇವಿ, ಸಾಮ್ರಾಟ್ ಚೌಧರಿ, ವಿಜಯ್‍ಕುಮಾರ್ ಸಿನ್ಹಾ, ಅನಿಲ್ ಶರ್ಮಾ, ನಿವೇದಿತಾ ಸಿಂಗ್ ಮತ್ತು ನಿಕ್ಕಿ ಹೆಂಬ್ರೆನ್ ಕೂಡ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿದ್ದಾರೆ.

ಕಳೆದ 10 ವರ್ಷಗಳಿಂದ ದೆಹಲಿ ಸಂಸದರಾಗಿರುವ ಭೋಜ್‍ಪುರಿ ನಟ ಮನೋಜ್ ತಿವಾರಿ ಕೂಡ ಬಿಹಾರದ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಸೇರಿದ್ದಾರೆ. ಮಧ್ಯಪ್ರದೇಶ ಮುಖ್ಯಮಂತ್ರಿ ಡಾ.ಮೋಹನ್ ಯಾದವ್ ಕೂಡ ಬಿಹಾರದಲ್ಲಿ ಸ್ಟಾರ್ ಪ್ರಚಾರಕರಾಗಿದ್ದಾರೆ.
ಮಧ್ಯಪ್ರದೇಶದಿಂದ ಬಿಜೆಪಿ ಬಿಡುಗಡೆ ಮಾಡಿರುವ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ರಾಜ್ಯದ ಮಾಜಿ ಗೃಹ ಸಚಿವ ಹಾಗೂ ವಿಧಾನಸಭೆ ಚುನಾವಣೆಯಲ್ಲಿ ಸೋತಿದ್ದ ನರೋತ್ತಮ್ ಮಿಶ್ರಾ ಅವರ ಹೆಸರೂ ಸೇರಿದೆ. ಇದರೊಂದಿಗೆ ಇತರ ರಾಜ್ಯಗಳ ಹಲವು ಮುಖ್ಯಮಂತ್ರಿಗಳು ಮಧ್ಯಪ್ರದೇಶದಲ್ಲಿ ಬಿಜೆಪಿಯ ಸ್ಟಾರ್ ಪ್ರಚಾರಕರಾಗಿದ್ದಾರೆ.

ಮಧ್ಯಪ್ರದೇಶದಲ್ಲಿ, ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಛತ್ತೀಸ್‍ಗಢ ಮುಖ್ಯಮಂತ್ರಿ ವಿಷ್ಣು ದೇವ್ ಸಾಯಿ, ಅಸ್ಸಾಂ ಮುಖ್ಯಮಂತ್ರಿ ಹೇಮಂತ್ ವಿಶ್ವ ಶರ್ಮಾ, ರಾಜಸ್ಥಾನ ಮುಖ್ಯಮಂತ್ರಿ ಭಜನ್‍ಲಾಲ್ ಶರ್ಮಾ, ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಸಹ ಸ್ಟಾರ್ ಪ್ರಚಾರಕರು. ಕೆಲ ದಿನಗಳ ಹಿಂದೆ ಕಾಂಗ್ರೆಸ್ ನಿಂದ ಬಿಜೆಪಿ ಸೇರಿದ್ದ ಸುರೇಶ್ ಪಚೌರಿ ಕೂಡ ಬಿಜೆಪಿಯ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಸೇರಿದ್ದಾರೆ.

ಮಿಥುನ್ ಚಕ್ರವರ್ತಿ-ಅಮಿತ್ ಮಾಳವೀಯ ಸ್ಟಾರ್ ಪ್ರಚಾರಕರು
ಬಿಜೆಪಿಗೆ ಸವಾಲಿನ ರಾಜ್ಯವಾಗಿರುವ ಪಶ್ಚಿಮ ಬಂಗಾಳದಲ್ಲಿ ಪಕ್ಷವು ತನ್ನ ಸಂಸದರ ಸಂಖ್ಯೆಯನ್ನು ಹೆಚ್ಚಿಸಲು ಬಯಸಿದೆ. ಹೀಗಾಗಿ, ಬಿಜೆಪಿ ಬಿಡುಗಡೆ ಮಾಡಿರುವ ಪಶ್ಚಿಮ ಬಂಗಾಳದ 40 ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಚಲನಚಿತ್ರ ನಟ ಮಿಥುನ್ ಚಕ್ರವರ್ತಿ ಮತ್ತು ಪಕ್ಷದ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಅವರ ಹೆಸರೂ ಸೇರಿದೆ. ಪ್ರಧಾನಿ ಮೋದಿ ಮತ್ತು ಪ್ರಮುಖ ಕೇಂದ್ರ ನಾಯಕರಲ್ಲದೆ, ಶುವೇಂದು ಅಕಾರಿ, ದಿಲೀಪ್ ಘೋಷ್, ಸ್ವಪನ್ ದಾಸ್ ಗುಪ್ತಾ, ಮುಫುಜಾ ಖಾತೂನ್, ರುದ್ರನೀಲ್ ಘೋಷ್, ಅಮಿತಾಬ್ ಚಕ್ರವರ್ತಿ, ಸುಕುಮಾರ್ ರೈ, ಸಿದ್ಧಾರ್ಥ್ ಟಿರ್ಕಿ, ದೇವಶ್ರೀ ಚೌಧುರಿ ಸೇರಿದಂತೆ ಅನೇಕ ದೊಡ್ಡ ನಾಯಕರು ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯಿಂದ ಸ್ಟಾರ್ ಪ್ರಚಾರಕರಾಗಿದ್ದಾರೆ.

ಈ ಮೂರು ಪಟ್ಟಿಗಳಲ್ಲಿ ಪ್ರಧಾನಿ ನರೇಂದ್ರಮೋದಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಗೃಹ ಸಚಿವ ಅಮಿತ್ ಶಾ, ರಸ್ತೆ ಸಾರಿಗೆ ಮತ್ತು ರಾಜ್ಯ ಸಚಿವ ನಿತಿನ್ ಗಡ್ಕರಿ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೇರಿದ್ದಾರೆ.

RELATED ARTICLES

Latest News