Friday, May 24, 2024
Homeರಾಜ್ಯಚುನಾವಣೆ ಸಮೀಪಿಸುತ್ತಿದ್ದಂತೆ ಮತ್ತಷ್ಟು ಹೆಚ್ಚಾದ ನಾಯಕರ ಪ್ರಚಾರದ ಅಬ್ಬರ

ಚುನಾವಣೆ ಸಮೀಪಿಸುತ್ತಿದ್ದಂತೆ ಮತ್ತಷ್ಟು ಹೆಚ್ಚಾದ ನಾಯಕರ ಪ್ರಚಾರದ ಅಬ್ಬರ

ಬೆಂಗಳೂರು,ಏ.21- ಲೋಕಸಭಾ ಮಹಾಸಮರ ದಲ್ಲಿ ರಾಜ್ಯದ ಮೊದಲ ಅಧ್ಯಾಯಕ್ಕೆ ಬಹಿರಂಗ ಪ್ರಚಾರ ಇನ್ನು ಮೂರು ದಿನ ಬಾಕಿ ಇರುವ ಹಿನ್ನೆಲೆಯಲ್ಲಿ ಎಲ್ಲಾ ಪಕ್ಷಗಳೂ ರಣಕಣದಲ್ಲಿ ಆರ್ಭಟಿಸುತ್ತಿದ್ದು, ಮತದಾರರ ಮನಸ್ಸು ಗೆಲ್ಲಲು ಬೆವರಿಳಿಸುತ್ತಿದ್ದಾರೆ. ಕಳೆದೆರಡು ದಿನಗಳಿಂದ ಕೆಲವು ಕಡೆ ಸಣ್ಣಪುಟ್ಟ ಮಳೆಯಾಗಿದ್ದರೂ ಬಿಸಿಲಿನ ಝಳ ತಗ್ಗಿಲ್ಲ.

ಬೇಸಿಗೆಯ ಉಷ್ಣಾಂಶಕ್ಕಿಂತಲೂ ರಾಜಕೀಯದ ಕಾವು ದಿನೇದಿನೇ ಏರುತ್ತಿದೆ. ಏ.24 ರ ಸಂಜೆ 6 ಗಂಟೆಗೆ ಬಹಿರಂಗ ಪ್ರಚಾರ ಅಂತ್ಯಗೊಳ್ಳುವುದರಿಂದಾಗಿ ಪ್ರತಿಯೊಬ್ಬ ನಾಯಕರೂ ತಮಗೆ ನಿಯೋಜಿಸಿದ ಕ್ಷೇತ್ರಗಳಲ್ಲಿ ಬಿರುಸಿನ ಪ್ರಚಾರದಲ್ಲಿ ತೊಡಗಿದ್ದಾರೆ. ಪ್ರಧಾನಮಂತ್ರಿ ನರೇಂದ್ರಮೋದಿ ನಿನ್ನೆ ರಾಜ್ಯಕ್ಕೆ ಭೇಟಿ ನೀಡಿ ಚಿಕ್ಕಬಳ್ಳಾಪುರ ಮತ್ತು ಬೆಂಗಳೂರಿನಲ್ಲಿ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಮತಯಾಚನೆ ಮಾಡಿ ತೆರಳಿದ್ದಾರೆ.

ಇಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹುಬ್ಬಳ್ಳಿಗೆ ಭೇಟಿ ನೀಡುತ್ತಿದ್ದು,ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಪರವಾಗಿ ಮತ ಯಾಚಿಸಲಿದ್ದಾರೆ. ಜೊತೆಗೆ ಇತ್ತೀಚೆಗಷ್ಟೇ ಕೊಲೆಯಾದ ನೇಹಾ ಹಿರೇಮಠ್ ಅವರ ಕುಟುಂಬದ ಸದಸ್ಯರನ್ನು ಭೇಟಿ ಮಾಡಿ ಸಾಂತ್ವನ ಹೇಳಲಿದ್ದಾರೆ.

ಕಾಂಗ್ರೆಸ್ ಸರ್ಕಾರ ಚೊಂಬು ಜಾಹೀರಾತಿನ ಮೂಲಕ ಬಿಜೆಪಿಗೆ ಮುಜುಗರ ಉಂಟುಮಾಡಿದ್ದು, ಇದಕ್ಕೆ ಇಂದು ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಡಿ.ವಿ.ಸದಾನಂದಗೌಡ ಪತ್ರಿಕಾಗೋಷ್ಠಿ ನಡೆಸಿ ಠಕ್ಕರ್ ನೀಡಿದ್ದಾರೆ.ಯಡಿಯೂರಪ್ಪ ಅವರು ಪತ್ರಿಕಾಗೋಷ್ಠಿಯ ಬಳಿಕ ವಿಶ್ರಾಂತಿ ಪಡೆಯದೆ ಚಾಮರಾಜನಗರ ಲೋಕಸಭಾ ಕ್ಷೇತ್ರಕ್ಕೆ ತೆರಳಲಿದ್ದು, ಹೆಲಿಕಾಪ್ಟರ್ ಮೂಲಕ ಚಿತ್ರದುರ್ಗಕ್ಕೆ ಪ್ರವಾಸ ಬೆಳೆಸಲಿದ್ದಾರೆ. ಎರಡೂ ಕಡೆ ಬಿಜೆಪಿ ಅಭ್ಯರ್ಥಿಯ ಪರವಾಗಿ ಮತಯಾಚನೆ ನಡೆಸಲಿದ್ದಾರೆ.

ವಿರೋಧಪಕ್ಷದ ನಾಯಕ ಆರ್.ಅಶೋಕ್ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಡಾ.ಸಿ.ಎನ್.ಮಂಜುನಾಥ್ ಪರವಾಗಿ ಮತ್ತು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರ ಪರವಾಗಿ ಮತಪ್ರಚಾರ ನಡೆಸಲಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಮೈಸೂರು ನಗರ, ಎಚ್.ಡಿ.ಕೋಟೆ, ನಂಜನಗೂಡು ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಇಂದು ಪ್ರಚಾರ ನಡೆಸಿದ್ದಾರೆ.ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾದ ಎಚ್.ಡಿ.ದೇವೇಗೌಡ ಅವರು ಹಾಸನ ಲೋಕಸಭಾ ಕ್ಷೇತ್ರದಲ್ಲಿ ಪ್ರವಾಸ ಕೈಗೊಂಡಿದ್ದಾರೆ. ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ವಿಜಯನಗರ, ಗೋವಿಂದರಾಜನಗರದಲ್ಲಿ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಪರವಾಗಿ ಪ್ರಚಾರ ನಡೆಸಿದರು.

ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಜಂಟಿ ಪ್ರವಾಸ ಕೈಗೊಂಡಿದ್ದಾರೆ. ಬೆಳಿಗ್ಗೆ ಕೋಲಾರ ಲೋಕಸಭಾ ಕ್ಷೇತ್ರದ ಬಂಗಾರಪೇಟೆ, ಶಿಡ್ಲಘಟ್ಟದಲ್ಲಿ ರೋಡ್ ಶೋ ನಡೆಸಿ ಸಂಜೆ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಆನೇಕಲ್, ಬೆಂಗಳೂರು ದಕ್ಷಿಣ ಮತ್ತು ಆರ್.ಆರ್.ನಗರ ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರಜಾಧ್ವನಿ-2 ಅನ್ನು ಮುಂದುವರೆಸಲಿದ್ದಾರೆ.ಮೊದಲ ಹಂತದಲ್ಲಿ ದಕ್ಷಿಣ ಕರ್ನಾಟಕ ಹಾಗೂ ಕರಾವಳಿ ಭಾಗದ 14 ಲೋಕಸಭಾ ಕ್ಷೇತ್ರಗಳಿಗೆ ಏ.26 ರಂದು ಚುನಾವಣೆ ನಡೆಯಲಿದೆ.

ಈ ಕ್ಷೇತ್ರಗಳಲ್ಲಿ ಹೆಚ್ಚಿನ ಮತ ಸೆಳೆಯಲು 3 ಪಕ್ಷಗಳು ಆಕ್ರಮಣಕಾರಿ ಪ್ರಚಾರ ತಂತ್ರಗಳನ್ನು ಅನುಸರಿಸುತ್ತಿವೆ.ರಾಜ್ಯದಲ್ಲಿ ಆಡಳಿತದಲ್ಲಿರುವ ಕಾಂಗ್ರೆಸ್ ಕೇಂದ್ರದ ವಿರುದ್ಧ ತಾರತಮ್ಯದ ಅಸ್ತ್ರ ಪ್ರಯೋಗಿಸಿದರೆ, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ರಾಜ್ಯಸರ್ಕಾರ ಕಾನೂನು ಸುವ್ಯವಸ್ಥೆ ನಿರ್ವಹಣೆ, ಬರ ನಿರ್ವಹಣೆ ಸೇರಿದಂತೆ ಹಲವಾರು ವಿಚಾರಗಳಲ್ಲಿ ವೈಫಲ್ಯ ಕಂಡಿದೆ ಎಂದು ವಾಗ್ದಾಳಿ ನಡೆಸುತ್ತಿವೆ.

ಕೇಂದ್ರ ಚುನಾವಣಾ ಆಯೋಗದ ಕಟ್ಟುನಿಟ್ಟಿನ ಕ್ರಮದ ನಡುವೆಯೂ ಅಲ್ಲಲ್ಲಿ ಅಪಾರ ಪ್ರಮಾಣದ ನಗದು, ಉಡುಗೊರೆಗಳು ಹಾಗೂ ಇತರ ವಸ್ತುಗಳು ಕೋಟ್ಯಂತರ ರೂ. ಲೆಕ್ಕದಲ್ಲಿ ಪತ್ತೆಯಾಗುತ್ತಲೇ ಇವೆ. ಉತ್ತರ ಕರ್ನಾಟಕ ಭಾಗ ಹಾಗೂ ಮಲೆನಾಡು ಪ್ರದೇಶದ 14 ಕ್ಷೇತ್ರಗಳಿಗೆ ಎರಡನೇ ಹಂತದಲ್ಲಿ ಮೇ 7 ರಂದು ಚುನಾವಣೆ ನಡೆಯಲಿದ್ದು, ಮೊದಲ ಹಂತದ ಬಳಿಕ ಸ್ವಲ್ಪ ಸಮಯ ವಿಶ್ರಾಂತಿ ಪಡೆದು ಸ್ಟಾರ್ ಪ್ರಚಾರಕರು ಮತ್ತೆ ಎರಡನೇ ಹಂತದ ಕ್ಷೇತ್ರಗಳತ್ತ ದಾಂಗುಡಿ ಇಡಬೇಕಾದ ಅನಿವಾರ್ಯತೆ ಎದುರಾಗಿದೆ.

RELATED ARTICLES

Latest News