ನನಗೆ ಯಾವುದೇ ಅಸಮಾಧಾನವಿಲ್ಲ, ದೊಡ್ಡ ಹುದ್ದೆ ನನಗೇಕೆ ಬೇಕು : ಎಂ.ಬಿ.ಪಾಟೀಲ್

M-B-Patil

ಬೆಂಗಳೂರು, ಜೂ.10- ನಾನು ಹೈಕಮಾಂಡ್ ಬಳಿ ಮಂತ್ರಿ, ಉಪಮುಖ್ಯಮಂತ್ರಿ, ಕೆಪಿಸಿಸಿ ಹುದ್ದೆ ಯಾವುದನ್ನೂ ಕೇಳಿಲ್ಲ. ದೊಡ್ಡ ಹುದ್ದೆ ನನಗೇಕೆ ಬೇಕು ಎಂದು ಕಾಂಗ್ರೆಸ್ ಮುಖಂಡ, ಶಾಸಕ ಎಂ.ಬಿ.ಪಾಟೀಲ್ ಹೇಳಿದ್ದಾರೆ.ಪಕ್ಷದ ಅಸಮಾಧಾನ ವಿಚಾರವಾಗಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ದೊಡ್ಡ ಹುದ್ದೆ ನನಗೇಕೆ ಬೇಕು, ಪಕ್ಷ ನನ್ನನ್ನು ಶಾಸಕನನ್ನಾಗಿ ಮಾಡಿದೆ. ನನಗೆ ಯಾವುದೇ ಅಸಮಾಧಾನವಿಲ್ಲ. ಸಂತೋಷವಾಗಿದ್ದೇನೆ ಎಂದರು.

ಶಾಸಕನಾಗಿಯೇ ನಾನು ನನ್ನ ಕ್ಷೇತ್ರದಲ್ಲಿ ಉತ್ತಮ ಕೆಲಸಗಳನ್ನು ಮಾಡುತ್ತೇನೆ. ಬಿಜೆಪಿಯವರ್ಯಾರೂ ನನ್ನನ್ನು ಸಂಪರ್ಕ ಮಾಡಿಲ್ಲ. ಪಕ್ಷ ಬಿಡುವ ಬಗ್ಗೆ ನಾನು ಯೋಚಿಸಿಯೂ ಇಲ್ಲ ಎಂದು ಸ್ಪಷ್ಟಪಡಿಸಿದರು.  ಪಕ್ಷದಲ್ಲಿರುವ ಅಸಮಾಧಾನದ ಬಗ್ಗೆ ಹೈಕಮಾಂಡ್‍ನೊಂದಿಗೆ ನಾಲ್ಕು ಗೋಡೆಗಳ ಮಧ್ಯೆ ಚರ್ಚೆ ಮಾಡಿದ್ದೇನೆ. ನಾನು ಮಾಧ್ಯಮಗಳಿಗೆ ಯಾವುದೇ ರೀತಿಯ ಹೇಳಿಕೆಗಳನ್ನು ಕೊಟ್ಟಿಲ್ಲ, ಯಾವುದೇ ಕಾರಣಕ್ಕೂ ಪಕ್ಷ ಬಿಟ್ಟು ಹೋಗುವುದಿಲ್ಲ ಎಂದರು.

ಪ್ರಸಕ್ತ ರಾಜಕೀಯ ವಿದ್ಯಮಾನಗಳ ಬಗ್ಗೆ ಹೈಕಮಾಂಡ್ ಆಗಿರುವ ರಾಹುಲ್‍ಗಾಂಧಿ ಅವರೊಂದಿಗೆ ಚರ್ಚೆ ನಡೆಸಿ ಅವರಿಂದ ಕೆಲವು ಸಲಹೆಗಳನ್ನು ಪಡೆದಿರುವುದಾಗಿ ತಿಳಿಸಿದರು. ಹೈಕಮಾಂಡ್ ಅವರನ್ನು ಭೇಟಿಯಾದ ಬಳಿಕ ಶಾಸಕ ಎಂ.ಬಿ.ಪಾಟೀಲ್ ತಣ್ಣಗಾದಂತೆ ಕಂಡುಬಂದಿದ್ದು, ಮಾಧ್ಯಮಗಳಿಗೆ ಸ್ಪಷ್ಟ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.

Sri Raghav

Admin