ಮದ್ದೂರು,ಸೆ.11-ಹೊತ್ತಿ ಉರಿದಿದ್ದ ಪಟ್ಟಣದಲ್ಲಿ ಇದೀಗ ಜನಜೀವನ ಯಥಾಸ್ಥಿತಿಗೆ ಮರಳಿದೆ. ಎಂದಿನಂತೆ ಜನರು ತಮ ತಮ್ಮ ಚಟುವಟಿಕೆಯಲ್ಲಿ ತೊಡಗಿರುವುದು ಕಂಡುಬಂತು. ಈ ನಡುವೆ ಘಟನೆ ಮರುಕಳಿಸದಂತೆ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ.
ಮದ್ದೂರು ಪಟ್ಟಣದಲ್ಲಿ ಪರಿಸ್ಥಿತಿ ಶಾಂತಿಯುತವಾಗಿದೆ. ಪೊಲೀಸ್ ಬಂದೋಬಸ್ತ್‌ನ್ನು ಮುಂದುವರೆಸಿದ್ದೇವೆ ಎಂದು ಮಂಡ್ಯ ಜಿಲ್ಲಾ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿಯವರು ತಿಳಿಸಿದ್ದಾರೆ.
ಈ ಸಂಜೆಯೊಂದಿಗೆ ಮಾತನಾಡಿದ ಅವರು, ಇದುವರೆಗೂ ಏಳು ಪ್ರಕರಣಗಳು ದಾಖಲಾಗಿವೆ. ಘಟನೆ ಸಂಬಂಧ 22 ಮಂದಿಯನ್ನು ಬಂಧಿಸಿದ್ದೇವೆ. ಕಲ್ಲು ತೂರಾಟ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಆರೋಪಿಗಳ ಬಂಧನ ಕಾರ್ಯ ತೀವ್ರಗೊಂಡಿದೆ ಎಂದರು.
ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿಯವರು ನಿನ್ನೆ ಮದ್ದೂರು ಪಟ್ಟಣದಲ್ಲಿ ಗಣೇಶಮೂರ್ತಿಗಳ ಸಾಮೂಹಿಕ ವಿಸರ್ಜನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪ್ರಚೋದನಕಾರಿ ಭಾಷಣ ಮಾಡಿದರೆಂಬ ಕಾರಣಕ್ಕೆ ಅವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದರು.