ಬೆಂಗಳೂರು,ಮೇ 18- ಆರೋಪಿ ಸ್ಥಾನದಲ್ಲಿರುವ ವ್ಯಕ್ತಿ ನೀಡುವ ಹೇಳಿಕೆಯ ಸತ್ಯಾಸತ್ಯತೆಗಳು ಕೂಡಾ ಚರ್ಚೆಗೆ ಅರ್ಹ ಎಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ. ಚಿಕ್ಕಮಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೆನ್ಡ್ರೈವ್ ಪ್ರಕರಣ ಹಾಗೂ ಅತ್ಯಾಚಾರ ಆರೋಪದಡಿ ಬಂಧನಕ್ಕೊಳಗಾಗಿ ಜೈಲಿನಲ್ಲಿರುವ ಬಿಜೆಪಿ ಮುಖಂಡ ದೇವರಾಜೇಗೌಡರ ಹೇಳಿಕೆಗೆ ಪ್ರತಿಕ್ರಿಯಿಸಿದರು.
ದೇವರಾಜೇಗೌಡರು ಯಾವ ಪರಿಸ್ಥಿತಿಯಲ್ಲಿದ್ದಾರೆ ಎಂಬುದನ್ನು ಪರಿಗಣಿಸಬೇಕು. ಯಾವುದೇ ಸಂದರ್ಭವಾದರೂ ಕಾನೂನು ಮೇಲುಗೈ ಸಾಧಿಸಬೇಕು. ಇಲ್ಲಿ ಪಕ್ಷ, ವ್ಯಕ್ತಿ ಮುಖ್ಯ ಅಲ್ಲ ಎಂದರು.
ಪೆನ್ಡ್ರೈವ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ರವರು ದೇವರಾಜೇಗೌಡರಿಗೆ 100 ಕೋಟಿ ರೂ. ಆಫರ್ ನೀಡಿದ್ದರು ಎಂಬ ಆರೋಪಕ್ಕೆ ಸಂಬಂಧಪಟ್ಟಂತೆ ಪ್ರಕರಣ ದಾಖಲಿಸಲಿ, ನಾವ್ಯಾರೂ ಬೇಡ ಎನ್ನುವುದಿಲ್ಲ ಎಂದ ಸಚಿವರು, ಈ ರೀತಿಯ ಆರೋಪ ಮಾಡುವ ವ್ಯಕ್ತಿ ಯಾರು? ಆತನ ಹಿನ್ನಲೆ ಏನು? ಯಾವ ಸಂದರ್ಭದಲ್ಲಿ ಏಕೆ ಹೇಳಿದ್ದಾರೆ? ಎಂಬುದನ್ನು ಪರಿಗಣಿಸಬೇಕಾಗುತ್ತದೆ ಎಂದರು.
ಹೇಳಿಕೆಯ ಸತ್ಯಾಸತ್ಯತೆ ಕೂಡಾ ಗಮನಾರ್ಹ. ದೇವರಾಜೇಗೌಡ ಸದ್ಯಕ್ಕೆ ಆರೋಪಿ ಸ್ಥಾನದಲ್ಲಿದ್ದಾರೆ. ಆತನ ಹೇಳಿಕೆಗೆ ಪ್ರತಿಕ್ರಿಯಿಸುವ ಅಗತ್ಯ ಇಲ್ಲ. ಕಾನೂನು ತನ್ನದೇ ಆದ ರೀತಿಯಲ್ಲಿ ಕ್ರಮ ಕೈಗೊಳ್ಳುತ್ತದೆ ಎಂದು ಹೇಳಿದರು.
ಚರ್ಚೆಗೆ ಗ್ರಾಸವಾದ ಹೇಳಿಕೆ :
ಅತ್ಯಾಚಾರದ ಆರೋಪದಲ್ಲಿ ವಿಚಾರಣೆ ಎದುರಿಸುತ್ತಿರುವ ದೇವರಾಜೇಗೌಡ ನಿನ್ನೆ ಪೊಲೀಸ್ ವ್ಯಾನಿನಲ್ಲೇ ಕುಳಿತು ಹೇಳಿಕೆ ನೀಡಿದ್ದು, ಪೆನ್ಡ್ರೈವ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಮಗೆ 100 ಕೋಟಿ ರೂ. ಆಫರ್ ನೀಡಿದ್ದರು ಎಂದಿದ್ದಾರೆ.
ಹಾಸನದ ಗೋಪಾಲಸ್ವಾಮಿಯವರನ್ನು ಮಧ್ಯವರ್ತಿಯನ್ನಾಗಿ ಕಳುಹಿಸಿದ್ದರು. ಬಿಜೆಪಿಯ ಮುಖಂಡ ಎಲ್.ಆರ್.ಶಿವರಾಮೇಗೌಡ ಮಾತುಕತೆ ನಡೆಸಿದ್ದರು. ಬೋರಿಂಗ್ ಕ್ಲಬ್ನಲ್ಲಿ ಈ ನಿಟ್ಟಿನಲ್ಲಿ ಚರ್ಚೆಯಾಗಿತ್ತು. ತಮ ಬಳಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಹತ್ವದ ಪುರಾವೆಗಳಿವೆ. ಅವುಗಳನ್ನು ನಾನು ಯಾರಿಗೂ ಸಿಗದಂತೆ ಸಂರಕ್ಷಿಸಿಟ್ಟಿದ್ದೇನೆ. ಪೆನ್ಡ್ರೈವ್ ಪ್ರಕರಣವನ್ನು ದಾರಿ ತಪ್ಪಿಸಲು ಸಚಿವರಾದ ಚೆಲುವರಾಯಸ್ವಾಮಿ, ಕೃಷ್ಣಾಭೈರೇಗೌಡ, ಪ್ರಿಯಾಂಕ ಖರ್ಗೆ ಸೇರಿದಂತೆ ನಾಲ್ಕು ಮಂದಿಯ ತಂಡ ಸಕ್ರಿಯವಾಗಿದೆ ಎಂದು ದೂರಿದರು.
ನಾನು ಜೈಲಿನಿಂದ ಬಿಡುಗಡೆಯಾಗಿ ದಾಖಲೆಗಳನ್ನು ಬಹಿರಂಗಪಡಿಸಿದರೆ ರಾಜ್ಯಸರ್ಕಾರ ಪತನವಾಗಲಿದೆ ಎಂದು ದೇವರಾಜೇಗೌಡ ನೀಡಿರುವ ಹೇಳಿಕೆ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.