ಹನೂರು, ಮಾ.27- ಶಕ್ತಿ ಯೋಜನೆ ಜಾರಿಯಾದಗಿನಿಂದ ಶ್ರೀ ಕ್ಷೇತ್ರ ಮಲೈಮಹದೇಶ್ವರ ಬೆಟ್ಟಕ್ಕೆ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದು, 25 ದಿನಗಳಲ್ಲಿ 3.13 ಕೋಟಿ ಬರೋಬ್ಬರಿ ಮೂರು ಕೋಟಿ ಹುಂಡಿಯಲ್ಲಿ ಕಾಣಿಕೆ ಹಣ ಸಂಗ್ರಹವಾಗಿದೆ. ಇತ್ತೀಚೆಗೆ ಮಲೈಮಹದೇಶ್ವರ ಬೆಟ್ಟಕ್ಕೆ ರಾಜ್ಯದ ವಿವಿಧ ಭಾಗಗಳಲ್ಲಿ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದು, ಅದರಲ್ಲೂ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.
ಕಾಣಿಕೆ ರೂಪದಲ್ಲಿ ಹುಂಡಿಗೆ ಹಣ, ಬೆಳ್ಳಿ, ಚಿನ್ನ, ಆಭರಣ ಅರ್ಪಿಸಲಾಗುತ್ತಿದ್ದು, ದಾಖಲೆ ಸಂಗ್ರಹವಾಗಿದೆ. ಬೆಟ್ಟದ ಬಸ್ ನಿಲ್ದಾಣ ಬಳಿಯ ವಾಣಿಜ್ಯ ಸಂಕಿರ್ಣದಲ್ಲಿ ಸಾಲೂರು ಬೃಹನ್ಮಠದ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮಿಯವರ ಸಮ್ಮುಖದಲ್ಲಿ ಹುಂಡಿಗಳನ್ನು ತೆರೆಯಲಾಗಿದ್ದು, ಸಿಸಿ ಟಿವಿಯ ಕಣ್ಗಾವಲಿನಲ್ಲಿ ತಡರಾತ್ರಿಯವರೆಗೂ ಹುಂಡಿ ಎಣಿಕೆ ಕಾರ್ಯ ನಡೆಸಲಾಯಿತು.
ಮಹಾಶಿವರಾತ್ರಿ ಜಾತ್ರಾ ಮಹೋತ್ಸವ ಸರ್ಕಾರಿ ರಜಾ ದಿನ ಹಾಗೂ ಶಕ್ತಿ ಯೋಜನೆಯ ಉಚಿತ ಪ್ರಯಾಣ ಹಿನ್ನೆಲೆಯಲ್ಲಿ ಅಪಾರ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡಿ ಹರಕೆ ರೂಪದಲ್ಲಿ ಕಾಣಿಕೆ ಸಮರ್ಪಿಸುತ್ತಿದ್ದಾರೆ.
47 ಗ್ರಾಂ ಚಿನ್ನ, 2.3 ಕೆಜಿ ಬೆಳ್ಳಿ ಜೊತೆಗೆ ಯುಎಸ್‍ಎ, ಬಾಂಗ್ಲಾದೇಶ, ನೇಪಾಳ, ಮಲೇಶಿಯಾದ ಏಳು ವಿದೇಶಿ ನೋಟುಗಳು ನಿಷೇಧಿತ ಚಲಾವಣೆಯಲ್ಲಿಲ್ಲದ ಎರಡು ಸಾವಿರ ಮುಖಬೆಲೆಯ 26 ನೋಟುಗಳು ಹುಂಡಿಗೆ ಹಾಕಿದ್ದಾರೆ ಎಂದು ದೇವಾಲಯದ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ರಘು ಮಾಹಿತಿ ನೀಡಿದ್ದಾರೆ.