Tuesday, May 28, 2024
Homeರಾಜ್ಯಎಚ್‌.ಡಿ.ರೇವಣ್ಣ ಪ್ರಕರಣದಲ್ಲಿ ರಾಜಕೀಯ ಇಲ್ಲ, ನೊಂದ ಕುಟುಂಬಗಳಿಗೆ ನ್ಯಾಯ ಸಿಗಬೇಕು : ಖರ್ಗೆ

ಎಚ್‌.ಡಿ.ರೇವಣ್ಣ ಪ್ರಕರಣದಲ್ಲಿ ರಾಜಕೀಯ ಇಲ್ಲ, ನೊಂದ ಕುಟುಂಬಗಳಿಗೆ ನ್ಯಾಯ ಸಿಗಬೇಕು : ಖರ್ಗೆ

ಕಲಬುರಗಿ,ಮೇ.5- ಮಾಜಿ ಸಚಿವ ಎಚ್‌.ಡಿ.ರೇವಣ್ಣ ಅವರ ಬಂಧನ ಪ್ರಕರಣದಲ್ಲಿ ರಾಜಕೀಯ ಇಲ್ಲ ಎಂದು ಸ್ಪಷ್ಟಪಡಿಸಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೊಂದ ಕುಟುಂಬಗಳಿಗೆ ನ್ಯಾಯ ಸಿಗಬೇಕು, ಕಾನೂನು ಮೀರುವವರಿಗೆ ಪಾಠವಾಗಬೇಕು ಎಂದಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಸರ್ಕಾರ ಈಗಾಗಲೇ ಎಸ್‌ಐಟಿ ರಚನೆ ಮಾಡಿದೆ. ಕಾನೂನು ಪ್ರಕಾರ ಎಸ್‌ಐಟಿ ಕ್ರಮ ಕೈಗೊಳ್ಳುತ್ತಾರೆ. ನೆಲದ ಕಾನೂನು ಆಧರಿಸಿ ಕ್ರಮ ಕೈಗೊಳ್ಳುತ್ತಾರೆ. ಬಂಧನ, ಜಾಮೀನು ಇವೆಲ್ಲಾ ನಡೆಯುತ್ತದೆ. ಈಗ ರೇವಣ್ಣ ಅವರ ಬಂಧನವಾಗಿದೆ. ಮುಂದೆ ನೊಂದ ಕುಟುಂಬಗಳಿಗೆ ನ್ಯಾಯ ಸಿಗಬೇಕು. ಇಂತಹ ಹೀನ ಕೆಲಸ ಮಾಡುವವರಿಗೂ ಬುದ್ಧಿ ಬರಬೇಕು ಎಂದರು.

ಕಾನೂನು ಕಠಿಣವಾಗಿದೆ. ಯಾರಿಗೂ ಅದರಿಂದ ಬಿಡುಗಡೆಯಾಗುವುದಿಲ್ಲ. ಇದರಲ್ಲಿ ಯಾವುದೇ ರಾಜಕೀಯವಿಲ್ಲ. ಹೀನ ಕೃತ್ಯ ಎಸಗಲು ನಾವು ಹೇಳಿರಲಿಲ್ಲ. ಹತ್ತಾರು ವರ್ಷಗಳಿಂದ ಇದು ನಡೆಯುತ್ತಾ ಬಂದಿದೆ. ಅವರ ಸರ್ಕಾರವೂ ಅಧಿ ಕಾರದಲ್ಲಿತ್ತು. ಮತ್ತೊಬ್ಬರ ಸರ್ಕಾರವೂ ಇತ್ತು.

ಈಗ ಅದು ಬೇರೆ ವಿಚಾರ. ಪ್ರತಿಯೊಂದರಲ್ಲೂ ರಾಜಕೀಯ ಮಾಡುವುದು ಸರಿಯಲ್ಲ. ಇದರಲ್ಲಿ ಯಾರೂ ರಾಜಕೀಯ ಬೆರೆಸಬಾರದು ಎಂದು ಹೇಳಿದರು.ಪ್ರಜ್ವಲ್‌ ರೇವಣ್ಣ ಅವರ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಅವರು, ಅವರು ಕಿರಿಯರಿದ್ದಾರೆ. ನನಗೆ ಅವರಿಗಿಂತಲೂ ಹಿರಿಯರ ಬಗ್ಗೆ ಮಾತನಾಡುವುದು ಸೂಕ್ತ ಎಂದರು.

ಕಾಂಗ್ರೆಸ್‌ನ ವಿರುದ್ಧ ಪೂರ್ವಾಗ್ರಹ ಪೀಡಿತವಾಗಿರುವವರು ಗ್ಯಾರಂಟಿ ಯೋಜನೆಗಳ ಬಗ್ಗೆ ಅಪಪ್ರಚಾರ ನಡೆಸಿದ್ದಾರೆ. ಗೃಹಲಕ್ಷ್ಮಿ ಯೋಜನೆಯಡಿ ಮಹಿಳೆಯರಿಗೆ 2 ಸಾವಿರ ರೂ. ಸಿಗುತ್ತಿದೆ, 200 ಯೂನಿಟ್‌ವರೆಗೆ ಬಳಕೆಗೆ ಉಚಿತ ವಿದ್ಯುತ್‌ ದೊರೆತಿದೆ, ಮಹಿಳೆಯರು ಸ್ತ್ರೀಶಕ್ತಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದಾರೆ, ಯುವನಿಧಿ ಯೋಜನೆಯಡಿ ಪದವೀಧರರಿಗೆ ಆರ್ಥಿಕ ನೆರವು ನೀಡಲಾಗುತ್ತಿದೆ, ಅನ್ನಭಾಗ್ಯ ಯೋಜನೆಯೂ ಯಶಸ್ವಿಯಾಗಿದೆ. ಆದರೆ ಯಾರ ಉದ್ದೇಶ ಸರಿ ಇರುವುದಿಲ್ಲವೋ ಅವರು ಮಾತ್ರ ಗ್ಯಾರಂಟಿ ಯೋಜನೆಗಳ ಬಗ್ಗೆ ಅಪಸ್ವರ ಎತ್ತುತ್ತಿದ್ದಾರೆ ಎಂದು ಹೇಳಿದರು.

ನನ್ನ ನೆಲ, ನನ್ನ ನೀರು :
ಕಲಬುರಗಿ ನನ್ನ ಊರು, ನನ್ನ ನೀರು, ನನ್ನ ಭೂಮಿ, ನನ್ನ ಜನ್ಮಭೂಮಿಯಲ್ಲಿ ನಾನು ಇರುವುದನ್ನು ಪ್ರಶ್ನೆ ಮಾಡಲಾಗುತ್ತದೆ. 53 ವರ್ಷ ನಾನಿಲ್ಲಿ ರಾಜಕೀಯ ಮಾಡಿದ್ದೇನೆ. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಈವರೆಗೂ 2 ದಿನ ಸಾರ್ವಜನಿಕ ಸಮಾವೇಶಗಳನ್ನು ನಡೆಸಿದ್ದೇನೆ.

ಇದನ್ನು ಕೇಳುತ್ತಿರುವವರು ಪ್ರಧಾನಿ ನರೇಂದ್ರ ಮೋದಿಯ ಬಗ್ಗೆ ಪ್ರಶ್ನೆ ಮಾಡುವುದಿಲ್ಲ. ಸಂಬಂಧವೇ ಇಲ್ಲದಿರುವ ಮೋದಿ ಈಗಾಗಲೇ ಎರಡು ಬಾರಿ ಕಲಬುರಗಿಗೆ ಬಂದು ಹೋಗಿದ್ದಾರೆ. ಹಲವಾರು ಬಿಜೆಪಿ ನಾಯಕರು ಇಲ್ಲಿ ಪ್ರಚಾರ ಮಾಡಿದ್ದಾರೆ. ಆರ್‌ಎಸ್‌ಎಸ್‌ ನಾಯಕರು ಇಲ್ಲೇ ಟಿಕಾಣಿ ಹೂಡಿದ್ದಾರೆ. ಅವರ ಬಗ್ಗೆ ಯಾರೂ ಪ್ರಶ್ನೆ ಮಾಡುವುದಿಲ್ಲ. ನನ್ನ ಊರಿನಲ್ಲಿ ನಾನಿದ್ದರೆ ಅದಕ್ಕೆ ತಕರಾರುಗಳೇಕೆ? ಎಂದು ಪ್ರಶ್ನಿಸಿದರು.

RELATED ARTICLES

Latest News