ಮಂಗಳೂರು, ಅ.27- ಪೊಲೀಸ್ ಕಮಿಷನರ್ ಅನೂಪ್ ಅಗರ್ವಾಲ್ ಅವರ ಫೇಸ್‍ಬುಕ್ ಅಕೌಂಟ್ ನಕಲು ಮಾಡಿ ಸೈಬರ್ ವಂಚಕನೊಬ್ಬ ಹಣ ದೋಚಲು ಯತ್ನಿಸಿರುವ ಘಟನೆ ನಡೆದಿದೆ. ಸ್ವತಃ ಪೊಲೀಸ್ ಕಮಿಷನರ್ ಅನೂಪ್ ಅಗರ್ವಾಲ್ ಅವರು ತಮ್ಮ ಅಧಿಕೃತ ಟ್ವಿಟ್ ಹಾಗೂ ಫೇಸ್‍ಬುಕ್ ಮೂಲಕ ಇಂತಹ ಸುಳ್ಳು ಮಾಹಿತಿ ಬಗ್ಗೆ ಎಚ್ಚರ ವಹಿಸುವಂತೆ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.
ಚಕ್ರವರ್ತಿ ಎಂಬ ಹೆಸರಿನ ಸೈಬರ್ ವಂಚಕನೊಬ್ಬ ಅನೂಪ್ ಅಗರ್ವಾಲ್ ಹೆಸರಿನಲ್ಲಿ ಫೇಸ್‍ಬುಕ್ ಖಾತೆ ತೆರೆದು ಡಿಪಿಯಲ್ಲಿ ಅವರ ಫೋಟೋ ಹಾಕಿ ಕೆಲವರನ್ನು ಸಂಪರ್ಕಿಸಿ ಹಣ ನೀಡುವಂತೆ ಮೆಸೇಜ್ ಮಾಡಿದ್ದಾನೆ. ಇದಲ್ಲದೆ, ವಾಯ್ಸ್ ಮೆಸೇಜ್ ಕೂಡ ಕಳುಹಿಸಿ ಇಂತಿಷ್ಟು ಹಣ ಬೇಕೆಂದು ಕೇಳಿ ಕೆಲವೇ ಗಂಟೆಗಳಲ್ಲಿ ಅದನ್ನು ವಾಪಸ್ ಕೊಡುವುದಾಗಿ ಕೂಡ ತಿಳಿಸಿದ್ದಾನೆ.
ರಾಜ್ಯದಲ್ಲಿ 5.33 ಕೋಟಿ ಮತದಾರರು, ಮಹಿಳೆಯರೇ ಹೆಚ್ಚು..!
ಈ ಬಗ್ಗೆ ಅನುಮಾನಗೊಂಡ ಕೆಲವರು ಆಯುಕ್ತರ ಗಮನಕ್ಕೆ ತಂದಾಗ ಅವರೇ ಶಾಕ್ ಆಗಿದ್ದಾರೆ. ಕೂಡಲೇ ಅವರ ವಾಟ್ಸಾಪ್ ಪರಿಶೀಲಿಸಿದ ನಂತರ ಮಾಹಿತಿ ನೀಡಿದ ಅವರನ್ನು ಕರೆಸಿಕೊಂಡು ಅವರಿಂದ ಬಂದ ಕರೆ ಮತ್ತು ವಾಟ್ಸಾಪ್ ಮಾಹಿತಿ ನೋಡಿದಾಗ ಇದು ಸೈಬರ್ ವಂಚಕರ ಕುಚೇಷ್ಟೆ ಎಂಬುದು ಗೊತ್ತಾಗಿದೆ.
ತಕ್ಷಣ ಅವರು ಸೈಬರ್ ಅಪರಾಧ ವಿಭಾಗದ ಅಧಿಕಾರಿಗಳಿಗೆ ಸೂಚನೆ ನೀಡಿ ಈ ಬಗ್ಗೆ ತನಿಖೆ ನಡೆಸುವಂತೆ ಸೂಚಿಸಿದ್ದಾರೆ.
ಆರೋಪಿಯ ಮಾಹಿತಿ ಕಲೆಹಾಕುತ್ತಿದ್ದು, ಈತ ಬೇರೊಂದು ರಾಜ್ಯದಿಂದ ಕರೆ ಮಾಡಿರಬಹುದು ಎಂದು ಹೇಳಲಾಗುತ್ತಿದೆ. ಒಟ್ಟಾರೆ ಮಂಗಳೂರು ನಗರ ಕಮಿಷನರ್ ಹೆಸರಿನಲ್ಲಿ ಹಣ ದೋಚಲು ಸೈಬರ್ ವಂಚಕರು ಹೊಸ ತಂತ್ರ ಮಾಡಿದ್ದಾರೆ.