ಬೆಂಗಳೂರು,ಏ.26-ರಾಜ್ಯದ ದಕ್ಷಿಣ ಭಾಗದಲ್ಲಿನ 14 ಲೋಕಸಭಾ ಕ್ಷೇತ್ರಗಳಿಗೆ ಇಂದು ಬೆಳಿಗ್ಗೆಯಿಂದಲೇ ಬಿರುಸಿನ ಮತದಾನ ನಡೆದಿದೆ. ಬಿಸಿಲೇರುವ ಮುನ್ನ ಮತದಾನ ಮಾಡಬೇಕು ಎಂಬ ಇರಾದೆಯಲ್ಲಿ ಬಹಳಷ್ಟು ಮಂದಿ ಬೆಳಿಗ್ಗೆ 6 ಗಂಟೆಯಿಂದಲೇ ಮತಗಟ್ಟೆಯ ಮುಂದೆ ಸಾಲುಗಟ್ಟಿ ನಿಂತಿದ್ದು ಕಂಡುಬಂದಿತು.
ಹಾಸನದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ತಮ್ಮ ಪತ್ನಿ ಚೆನ್ನಮ್ಮ ಅವರೊಂದಿಗೆ ಮತಗಟ್ಟೆಗೆ ಬಂದು ಮತ ಚಲಾಯಿಸುವ ಸಂದರ್ಭದಲ್ಲಿ ಚುನಾವಣಾ ಸಿಬ್ಬಂದಿಗಳು ಅವರಿಗೆ ಸಹಾಯ ಮಾಡಿದರು. ಇದೇ ವೇಳೆ ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ರೇವಣ್ಣ, ಮಾಜಿ ಸಚಿವ ಎಚ್.ಡಿ.ರೇವಣ್ಣ ಕುಟುಂಬ ಸಮೇತರಾಗಿ ಆಗಮಿಸಿ ಮತ ಚಲಾಯಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಮೈಸೂರಿನ ಸಿದ್ದರಾಮನಹುಂಡಿಯಲ್ಲಿ ಮತ ಚಲಾಯಿಸಿದರು. ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ರವರು ಸಾತನೂರಿನ ದೊಡ್ಡಆಲನಹಳ್ಳಿಯಲ್ಲಿ ಕುಟುಂಬ ಸಮೇತರಾಗಿ ಮತ ಚಲಾಯಿಸಿದರು. ಈ ವೇಳೆ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ಕೂಡ ತಮ್ಮ ಹಕ್ಕು ಚಲಾಯಿಸಿದರು.
ಕೆಲವೆಡೆ ಉದ್ದನೆಯ ಸರದಿ ಸಾಲಿನಲ್ಲಿ ನಿಂತು ಮತ ಚಲಾವಣೆ ಮಾಡಲಾಯಿತು. ಇನ್‌ಫೋಸಿಸ್‌ನ ಸಂಸ್ಥಾಪಕ ನಾರಾಯಣಮೂರ್ತಿ ಮತ್ತು ಅವರ ಪತ್ನಿ, ರಾಜ್ಯಸಭಾ ಸದಸ್ಯೆ ಸುಧಾಮೂರ್ತಿಯವರು ಜಯನಗರದಲ್ಲಿ ಮತದಾನ ಮಾಡಿದರು. ಚುನಾವಣಾ ಮುಖ್ಯ ಅಧಿಕಾರಿ ಮನೋಜ್‌ಕುಮಾರ್ ಮೀನಾ, ಬಿಬಿಎಂಪಿಯ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಜಕ್ಕೂರು ಪ್ರದೇಶದಲ್ಲಿರುವ ಮತಗಟ್ಟೆಯಲ್ಲಿ ಕುಟುಂಬ ಸಮೇತರಾಗಿ ನಿಂತು ಮತದಾನ ಮಾಡಿದರು.
ಮೈಸೂರಿನಲ್ಲಿ 101 ವರ್ಷದ ಅಜ್ಜಿ ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸುವ ಮೂಲಕ ಗಮನ ಸೆಳೆದರೆ, ಬಿಜೆಪಿ ಅಭ್ಯರ್ಥಿಯಾಗಿರುವ ರಾಜಮನೆತನದ ಯದುವೀರ್ ಕೃಷ್ಣದತ್ತ ಒಡೆಯರ್, ಪತ್ನಿ ತ್ರಿಷಿಕಾ, ಅವರ ತಾಯಿ ಪ್ರಮೋದಾ ದೇವಿ ಅವರುಗಳು ಕುಟುಂಬ ಸಮೇತರಾಗಿ ಆಗಮಿಸಿ ಮತ ಚಲಾಯಿಸಿದರು.
ಬೆಂಗಳೂರಿನಲ್ಲಿ ಕ್ರಿಕೆಟಿಗ ರಾಹುಲ್‌ದ್ರಾವಿಡ್, ಹಿರಿಯ ನಟ ಹಾಗೂ ನಿರ್ಮಾಪಕ ರಾಘವೇಂದ್ರ ರಾಜ್‌ಕುಮಾರ್, ಪತ್ನಿ ಮಂಗಳ, ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್‌ಕುಮಾರ್, ಸದಾಶಿವನಗರದ ಮತಗಟ್ಟೆಯಲ್ಲಿ, ಹಿರಿಯ ನಟ ಹಾಗೂ ರಾಜ್ಯಸಭಾ ಸದಸ್ಯ ಜಗ್ಗೇಶ್ ಮಲ್ಲೇಶ್ವರಂನಲ್ಲಿ, ನಟಿ ಅಮೂಲ್ಯ ಪತಿ ಜಗದೀಶ್ ಅವರೊಂದಿಗೆ, ಗೋಲ್ಡನ್ ಸ್ಟಾರ್ ಗಣೇಶ್ ಪತ್ನಿ ಶಿಲ್ಪಾ ಅವರೊಂದಿಗೆ ಬಂದು ಮತ ಚಲಾಯಿಸಿದರು. ಗೃಹಸಚಿವ ಡಾ.ಜಿ.ಪರಮೇಶ್ವರ್ ತುಮಕೂರಿನ ಹೆಗ್ಗೆರೆಯಲ್ಲಿ, ಚಿಕ್ಕಬಳ್ಳಾಪುರದ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಸುಧಾಕರ್ ಕೆರೆಸಂದ್ರದಲ್ಲಿ ಮತ ಚಲಾಯಿಸಿದರು.
ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹಾಗೂ ಅವರ ಪುತ್ರಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯರೆಡ್ಡಿ ಅವರೊಂದಿಗೆ ಆಗಮಿಸಿ ಮತ ಚಲಾಯಿಸಿದರು. ವಿರೋಧ ಪಕ್ಷದ ನಾಯಕ ಆರ್.ಅಶೋಕ್, ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಶೋಭಾ ಕರಂದ್ಲಾಜೆ ಹಾಗೂ ಸಂಸದ ಡಿ.ವಿ.ಸದಾನಂದಗೌಡ, ನಟಿ ಸಪ್ತಮಿಗೌಡ, ಹಿರಿಯ ನಟ ಪ್ರಕಾಶ್ ರೈ ಅವರುಗಳೂ ಮತ ಚಲಾಯಿಸಿದ್ದಾರೆ.
ಮೈಸೂರಿನಲ್ಲಿ ಮತದಾನ ಬಿರುಸು
ಮೈಸೂರು ನಗರ ಮತ್ತು ಜಿಲ್ಲೆಯಾದ್ಯಂತ ಬೆಳಗಿನಿಂದಲೇ ಬಿರುಸಿನ ಮತದಾನ ನಡೆಯಿತು.ಯುವ ಜನತೆ ಮತ್ತು ಮೊದಲ ಬಾರಿಗೆ ಮತದಾನ ಮಾಡುವವರು, ಹಿರಿಯ ನಾಗರಿಕರು, ವಿಕಲಚೇತನರು ಕೂಡ ಅತ್ಯುತ್ಸಾಹದಿಂದ ಮತದಾನದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.ಒಂದೆರಡು ಮತಗಟ್ಟೆಗಳಲ್ಲಿ ಸ್ವಲ್ಪ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು, ಕೆಲವೆಡೆ ಸಣ್ಣಪುಟ್ಟ ಜಗಳ ನಡೆದರೆ ಜಿಲ್ಲೆಯಲ್ಲಿ ಬಹುತೇಕ ಶಾಂತಿಯುತ ಮತದಾನ ನಡೆದಿದೆ.ನಗರದಲ್ಲಿ ಗಣ್ಯರು ಬೆಳಗ್ಗೆ ಬೇಗನೆ ಬಂದು ಮತ ಹಾಕಿ ಯುವಜನತೆಗೆ ಮಾದರಿಯಾದರು.
ಮೈಸೂರಿನ ಶ್ರೀಕಾಂತ ಶಾಲೆಯಲ್ಲಿ ಮೈಸೂರು-ಕೊಡಗು ಬಿಜೆಪಿ ಅಭ್ಯರ್ಥಿ ಯದುವೀರ್ ಅವರು ಪತ್ನಿ ತ್ರಿಷಿಕಾ ಹಾಗೂ ತಾಯಿ ರಾಜಮಾತೆ ಪ್ರಮೋದಾ ದೇವಿ ಒಡೆಯರ್ ಅವರೊಂದಿಗೆ ಆಗಮಿಸಿ ಮತ ಚಲಾಯಿಸಿದರು. ಎಲ್ಲರೂ ಮರೆಯದೆ ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸುವಂತೆ ಮನವಿ ಮಾಡಿದರು.ಮತದಾನ ಮಾಡಿ ಮನೆಗೆ ಬಂದ ವೃದ್ಧೆ ಮೃತಪಟ್ಟ ಘಟನೆ ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕು ಕಲ್ಲಳ್ಳಿ ಗ್ರಾಮದಲ್ಲಿ ನಡೆದಿದೆ. ಪುಟ್ಟಮ್ಮ (90) ಸಾವನ್ನಪ್ಪಿದ್ದು, ಕಲ್ಲಳ್ಳಿ ಸರ್ಕಾರಿ ಶಾಲೆಯಲ್ಲಿ ಮತದಾನ ಮಾಡಿ ಆರಾಮವಾಗಿಯೇ ಬಂದಿದ್ದರು. ಅದೇನಾಯಿತೋ ಇದ್ದಕ್ಕಿದ್ದಂತೆ ಮೃತಪಟ್ಟಿದ್ದಾರೆ.
ಎಂಬತ್ತು ವರ್ಷದಿಂದ ಮತದಾನ ಮಾಡುತ್ತಿರುವ ಶತಾಯುಷಿ
ನಾನು ಇದುವರೆಗೂ ಒಂದು ಚುನಾವಣೆಯನ್ನು ಮಿಸ್ ಮಾಡ್ಕೊಂಡಿಲ್ಲ ತಪ್ಪದೆ ಮತದಾನ ಮಾಡುತ್ತಿದ್ದೇನೆ ಎಂದು ಜಮುವಿನ 102 ವರ್ಷದ ಶತಾಯುಷಿ ಮತದಾರ ಹೇಳಿಕೊಂಡಿದ್ದಾರೆ ಕುಟುಂಬ ಸದಸ್ಯರೊಂದಿಗೆ ಊರುಗೋಲಿನ ಸಮೇತ ಜಮು ಮತಗಟ್ಟೆಗೆ ಬಂದ 102 ವರ್ಷದ ಹಾಜಿ ಕರಮ್‌ದಿನ್ ಎಂಬುವರು ತಮ ಮತ ಚಲಾಯಿಸಿದ ಬಳಿಕ ಬೆರಳನ್ನು ತೋರಿಸಿ ಫೋಟೋಗೆ ಪೋಸ್ ನೀಡಿದ ನಂತರ ಮಾತನಾಡಿದರು.ಈ ವಯಸ್ಸಿನಲ್ಲಿ ಈ ಮತಗಟ್ಟೆಯಲ್ಲಿ ಮತದಾನ ಮಾಡಲು ನನಗೆ ತುಂಬಾ ಸಂತೋಷವಾಗಿದೆ. ನಾನು ಪ್ರತಿ ಬಾರಿಯೂ ಮತದಾನ ಮಾಡಿದ್ದೇನೆ. 102 ನೇ ವಯಸ್ಸಿನಲ್ಲಿ ಈ ಪ್ರಯಾಣವು ಇಂದಿಗೂ ಮುಂದುವರೆದಿದೆ ಎಂದು ಅವರು ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದರು.
ರಿಯಾಸಿ ಜಿಲ್ಲೆ ಜಮು ಸಂಸದೀಯ ಕ್ಷೇತ್ರದ ಭಾಗವಾಗಿದ್ದು, 22 ಅಭ್ಯರ್ಥಿಗಳ ಭವಿಷ್ಯವನ್ನು ನಿರ್ಧರಿಸಲು 17.81 ಲಕ್ಷಕ್ಕೂ ಹೆಚ್ಚು ಮತದಾರರು ತಮ ಮತ ಚಲಾಯಿಸಲು ಅರ್ಹರಾಗಿದ್ದಾರೆ.ಪ್ರಸ್ತುತ ಬಿಜೆಪಿ ಸಂಸದ ಜುಗಲ್ ಕಿಶೋರ್ ಶರ್ಮಾ ಅವರು 2014 ಮತ್ತು 2019 ರ ಚುನಾವಣೆಗಳಲ್ಲಿ ಸತತ ಗೆಲುವಿನ ನಂತರ ಮೂರನೇ ಬಾರಿಗೆ ಸ್ಪರ್ಧಿಸುತ್ತಿದ್ದಾರೆ ಅವರ ಪ್ರಮುಖ ಸ್ಪರ್ಧಿ ಕಾಂಗ್ರೆಸ್ ಅಭ್ಯರ್ಥಿ ಮತ್ತು ಮಾಜಿ ಸಚಿವ ರಾಮನ್ ಭಲ್ಲಾ ಅವರಾಗಿದ್ದಾರೆ.
ಜಮು-ರಿಯಾಸಿ ಲೋಕಸಭಾ ಕ್ಷೇತ್ರದಲ್ಲಿ ಮತದಾನ ಆರಂಭಗೊಂಡಿದ್ದು, ಉತ್ಸಾಹದಿಂದ ಮತದಾರರು ಬೂತ್‌ಗಳಿಗೆ ಆಗಮಿಸಿದ್ದರು, ಕೆಲವರು ಸಾಂಪ್ರದಾಯಿಕ ಡೋಗ್ರಾ ಉಡುಗೆಗಳನ್ನು ಧರಿಸಿ ಮತದಾನ ಮಾಡಿದರು.ಕ್ಷೇತ್ರದಾದ್ಯಂತ 2,416 ಮತಗಟ್ಟೆಗಳಲ್ಲಿ ಬೆಳಗ್ಗೆ 7 ಗಂಟೆಗೆ ಮತದಾನ ಆರಂಭಗೊಂಡಿದ್ದು ಬಿರುಸಿನಿಂದ ಮತದಾನವಾಗುತ್ತಿದೆ. 2019 ರ ಲೋಕಸಭೆ ಚುನಾವಣೆಯಲ್ಲಿ ಜಮುವಿನಲ್ಲಿ ಶೇ,74ರಷ್ಟು ಮತದಾನವಾಗಿದೆ.ಐದು ವರ್ಷಗಳ ಹಿಂದೆ ಆರ್ಟಿಕಲ್ 370 ರದ್ದತಿ ಮತ್ತು ಹಿಂದಿನ ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿದ ನಂತರ ಜಮುವಿನಲ್ಲಿ ಇದು ಮೊದಲ ಪ್ರಮುಖ ಚುನಾವಣೆಯಾಗಿದೆ.
ಕಾಫಿನಾಡಿನಲ್ಲಿ ಯುವಜನತೆಗೆ ಮಾದರಿಯಾದ ಹಿರಿಯ ನಾಗರಿಕರು
ಉಡುಪಿ – ಚಿಕ್ಕಮಗಳೂರು ಲೋಕಸಭಾ ಚುನಾವಣೆಗೆ ಮತದಾನ ಪ್ರಕ್ರಿಯೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಮುಂಜಾನೆಯಿಂದ ಬಿರುಸು ಪಡೆದುಕೊಂಡಿದೆ. ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಮತದಾನ ಪ್ರಕ್ರಿಯೆ ಆರಂಭವಾಗಿದ್ದು ಮಾದರಿಯಾಗುವ ಘಟನೆಗಳಿಗೂ ಕೂಡ ಮತದಾನ ಪ್ರಕ್ರಿಯೆ ಕಾರಣವಾಗಿದೆ. ಒಂದೆಡೆ ಹಿರಿಯ ನಾಗರಿಕರು ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಿದ್ರೆ, ಮತ್ತೊಂದೆಡೆ ಹಸೆಮಣೆ ಏರುವ ಮುನ್ನ ಮತಗಟ್ಟೆಗೆ ಬಂದು ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ.
ಮತದಾನದ ಪ್ರಕ್ರಿಯೆಯಲ್ಲಿ ಹಿರಿಯ ನಾಗರಿಕರು ಅತ್ಯಂತ ಉತ್ಸಾಹದಿಂದ ಮತದಾನದ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದಾರೆ. ಬೆಳಗ್ಗೆ ಏಳು ಗಂಟೆಗೆ ಮತಗಟ್ಟೆಗಳಿಗೆ ಆಗಮಿಸಿದ ಹಿರಿಯ ನಾಗರಿಕರು ಸರತಿ ಸಾಲಿನಲ್ಲಿ ನಿಂತು ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ. ನಗರದ ಬಸವನಹಳ್ಳಿಯ ಮತಗಟ್ಟೆಯಲ್ಲಿ ಮತದಾನ ಆರಂಭಕ್ಕೂ ಮುನ್ನವೇ ಆಗಮಿಸಿದ್ದ 80 ವರ್ಷದ ವೃದ್ಧೆ ಕನ್ನಮ್ಮ ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ.
ಸೊಪ್ಪು, ವ್ಯಾಪಾರಿಯಾಗಿರುವ ಕನ್ನಮ್ಮ ವ್ಯಾಪಾರಕ್ಕೆ ಹೋಗುವ ಹಿನ್ನೆಲೆಯಲ್ಲಿ ಮುಂಜಾನೆ ಮತಗಟ್ಟೆಗೆ ಆಗಮಿಸಿ ಮತದಾನ ಮಾಡಿದ್ದಾರೆ. ಈ ಸಂಜೆಯೊಂದಿಗೆ ಮಾತನಾಡಿದ ಕನ್ನಮ್ಮ ಮುಂದಿನ ಚುನಾವಣೆಗೆ ನಾನು ಇರ್ತೀನೋ ಇಲ್ಲವೋ ಗೊತ್ತಿಲ್ಲ, ಆದರೆ ಮತದಾನ ಒಂದು ಪವಿತ್ರವಾದ ಕಾರ್ಯವಾಗಿದ್ದು ನಮ್ಮ ಕರ್ತವ್ಯವನ್ನು ನಾನು ಮಾಡಿದ್ದೇನೆ. ನಾನು ವ್ಯಾಪಾರಕ್ಕೆ ಹೋಗುವ ಕಾರಣ ಬೆಳಿಗ್ಗೆ ಬೇಗ ಬಂದು ವೋಟ್ ಮಾಡಿದ್ದೇನೆ ಎಂದರು.