ಬೆಂಗಳೂರು,ಮಾ.9- ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೆಸ್ ಗೆದ್ದೇ ಗೆಲ್ಲಲಿದೆ, ಬಿಜೆಪಿಗೆ ಸೋಲು ಕಟ್ಟಿಟ್ಟ ಬುತ್ತಿ ಎಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿವಮೊಗ್ಗ ಲೋಕಸಭೆ ಕ್ಷೇತ್ರದಲ್ಲಿ ಈ ಬಾರಿ ಬಿಜೆಪಿಯವರಿಗೂ ಗೆಲುವು ಸುಲಭವಲ್ಲ ಎಂಬುದನ್ನು ಮರೆಯಬಾರದು ಎಂದರು.
ಕಾಂಗ್ರೆಸ್ ಅಭ್ಯರ್ಥಿಯಾಗಿ ಗೀತಾ ಶಿವರಾಜ್‍ಕುಮಾರ್ ಅವರನ್ನು ಅಭ್ಯರ್ಥಿಯಾಗಿ ಘೋಷಿಸಿರುವುದು ಪಕ್ಷದ ತೀರ್ಮಾನ. ಅವರನ್ನು ಗೆಲ್ಲಿಸಿಕೊಂಡು ಬರುವ ಜವಾಬ್ದಾರಿ ಪಕ್ಷದ ಎಲ್ಲರ ಮೇಲೂ ಇದೆ. ಅದನ್ನು ನಾವು ಯಶಸ್ವಿಯಾಗಿ ನಿಭಾಯಿಸುತ್ತೇವೆ ಎಂದು ಹೇಳಿದರು. ಈ ಹಿಂದೆ ಗೀತಾ ಶಿವರಾಜ್‍ಕುಮಾರ್ ಬೇರೆ ಪಕ್ಷದಿಂದ ಸ್ರ್ಪಧಿಸಿದ್ದರು. ಆಗ ಯಶಸ್ವಿಯಾಗಿರಲಿಲ್ಲ. ಈಗ ಕಾಂಗ್ರೆಸ್‍ನಿಂದ ಅಭ್ಯರ್ಥಿಯಾಗಿದ್ದಾರೆ. ಪಕ್ಷ ನಮಗೆ ಒಳ್ಳೆಯ ಸ್ಥಾನಮಾನ ನೀಡಿದೆ. ನಮ್ಮ ಸರ್ಕಾರ ಜನರಿಗೆ ಉತ್ತಮ ಯೋಜನೆಗಳನ್ನು ನೀಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪ್ರತಿಯೊಂದು ಕುಟುಂಬದ ಕಷ್ಟಗಳಿಗೆ ಸ್ಪಂದಿಸಿದ್ದಾರೆ ಎಂದರು.
ಶಿವಮೊಗ್ಗ ಲೋಕಸಭಾ ಚುನಾವಣೆಯಲ್ಲಿ ಜನರು ಬದಲಾವಣೆ ಬಯಸುತ್ತಿದ್ದಾರೆ. ಗೀತಾ ಶಿವರಾಜ್‍ಕುಮಾರ್ ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರ ಪುತ್ರಿಯಾಗಿ, ಸ್ಟಾರ್ ನಟ ಶಿವರಾಜ್‍ಕುಮಾರ್ ಅವರ ಪತ್ನಿಯಾಗಿ, ನನ್ನ ಅಕ್ಕನಾಗಿ ಕಣಕ್ಕಿಳಿಯುತ್ತಿದ್ದಾರೆ. ಅವರನ್ನು ಗೆಲ್ಲಿಸಿಕೊಂಡು ಬರಲು ಪಕ್ಷದ ಎಲ್ಲರೂ ಒಟ್ಟಾಗಿ ಕೆಲಸ ಮಾಡುತ್ತೇವೆ ಎಂದು ಪುನರ್ ಉಚ್ಚರಿಸಿದರು.
ಚಿತ್ರರಂಗದ ದೊಡ್ಮನೆ ಕುಟುಂಬ ಡಾ.ರಾಜಕುಮಾರ್‍ರವರ ಸೊಸೆ ಗೀತಾ ಶಿವರಾಜ್‍ಕುಮಾರ್ ರಾಜಕೀಯಕ್ಕೆ ಬರುವ ಬಗ್ಗೆ ಈಗಾಗಲೇ ಸಾಕಷ್ಟು ಚರ್ಚೆಗಳಾಗಿವೆ. ಪದೇಪದೇ ಅಂತಹುದೇ ಪ್ರಶ್ನೆಗಳು ಅನಗತ್ಯ. ಶಿವರಾಜ್‍ಕುಮಾರ್ ಅವರೇ ಈಗಾಗಲೇ ಇಂತಹ ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ. ಗೀತಾ ಅವರು ಮೊದಲು ಬಂಗಾರಪ್ಪ ಅವರ ಪುತ್ರಿ. ಹೀಗಾಗಿ ಅವರು ರಾಜಕೀಯಕ್ಕೆ ಬರುವುದು ಸಹಜ ಎಂದರು.
ನಾವು ಅನ್ಯ ಪಕ್ಷದಂತೆ ಬೇರೆಯವರ ಹೆಸರಿನಲ್ಲಿ ಮತ ಕೇಳುವುದಿಲ್ಲ. ನಾವು ನಮ್ಮದೇ ಹೆಸರಿನಲ್ಲಿ ಚುನಾವಣೆ ನಡೆಸುತ್ತೇವೆ. ನಮ್ಮ ಸರ್ಕಾರದ ಗ್ಯಾರಂಟಿಗಳನ್ನು ಮುಂದಿಟ್ಟುಕೊಂಡು ಪ್ರಚಾರ ಮಾಡುತ್ತೇವೆ. ಬಿಜೆಪಿಯವರು ಚುನಾವಣೆಗೋಸ್ಕರ ಗ್ಯಾರಂಟಿ ಹೇಳುತ್ತಿದ್ದಾರೆ. ನಾವು ಜನರಿಗಾಗಿ ಗ್ಯಾರಂಟಿಗಳನ್ನು ಜಾರಿಗೆ ತಂದಿದ್ದೇವೆ. ಹೀಗಾಗಿ ಮತದಾರರು ನಮ್ಮ ಕೈ ಹಿಡಿಯುತ್ತಾರೆ ಎಂಬ ವಿಶ್ವಾಸ ಇದೆ. ತಾಯಂದಿರೇ ಅಸ್ತಿತ್ವಕ್ಕೆ ತಂದಿರುವ ನಮ್ಮ ಸರ್ಕಾರಕ್ಕೆ ಅವರಿಂದಲೇ ಬೆಂಬಲ ಸಿಗುತ್ತದೆ ಎಂದು ಹೇಳಿದರು.