Thursday, November 21, 2024
Homeರಾಜ್ಯಕೊಲೆಯಾದ ಅಂಜಲಿ ಮನೆಗೆ ಸಚಿವ ಸಂತೋಷ್‌ ಲಾಡ್‌ ಭೇಟಿ

ಕೊಲೆಯಾದ ಅಂಜಲಿ ಮನೆಗೆ ಸಚಿವ ಸಂತೋಷ್‌ ಲಾಡ್‌ ಭೇಟಿ

ಹುಬ್ಬಳ್ಳಿ, ಮೇ 18- ಇತ್ತೀಚೆಗೆ ಕೊಲೆಯಾದ ವೀರಾಪುರ ಓಣಿಯ ಅಂಜಲಿ ಅಂಬಿಗೇರ ಅವರ ಮನೆಗೆ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್‌ ಲಾಡ್‌ ಇಂದು ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು. ಅಂಜಲಿ ಅವರ ಅಜ್ಜಿ ಗಂಗಮ ಮತ್ತು ಸಹೋದರಿಯರಿಗೆ ಧೈರ್ಯ ಹೇಳಿದ ಲಾಡ್‌, ಸಂತೋಷ್‌ ಲಾಡ್‌ ಫೌಂಡೇಷನ್‌ನಿಂದ 2 ಲಕ್ಷ ರೂ.ಗಳ ಚೆಕ್‌ ನೀಡಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಂಜಲಿ ಅಂಬಿಗೇರ ಕೊಲೆ ಪ್ರಕರಣದ ತನಿಖೆ ಸಿಐಡಿಗೆ ವಹಿಸಬೇಕು ಹಾಗೂ ವಿಶೇಷ ನ್ಯಾಯಾಲಯ ಸ್ಥಾಪಿಸಬೇಕು ಎಂದು ಮನವಿ ಮಾಡಿದರು. ಸಮಾಜದಲ್ಲಿ ಹಾಗೂ ವಿಶೇಷವಾಗಿ ಹುಬ್ಬಳ್ಳಿ-ಧಾರವಾಡದಲ್ಲಿ ಇಂತಹ ಪ್ರಕರಣಗಳು ನಡೆಯುತ್ತಿರುವುದು ಒಳ್ಳೆಯದಲ್ಲ. ಅಪರಾಧ ಕೃತ್ಯಗಳಲ್ಲಿ ತೊಡಗುವ ಯುವಕರ ಮನಃಸ್ಥಿತಿ ಎಂತಹದ್ದು ಇದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಗೃಹ ಸಚಿವರು ಸದ್ಯದಲ್ಲೇ ನಗರಕ್ಕೆ ಭೇಟಿ ನೀಡಲಿದ್ದು, ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳಲಿದ್ದಾರೆ. ನಿರ್ಲಕ್ಷ್ಯ ವಹಿಸಿದ ಪೊಲೀಸರನ್ನು ಅಮಾನತು ಸಹ ಮಾಡಲಾಗಿದೆ. ವಿಪಕ್ಷದಲ್ಲಿರುವ ಬಿಜೆಪಿ ನಾಯಕರು ಅವರ ಕೆಲಸ ಮಾಡುತ್ತಿದ್ದಾರೆ. ಸರ್ಕಾರವನ್ನು ವಿರೋಧಿಸುವುದು ಅವರ ಕೆಲಸ ಎಂದರು.

ಡ್ರಗ್‌್ಸ ಮಾರಾಟ ರಾಜ್ಯ ಅಷ್ಟೇ ಅಲ್ಲ, ದೇಶದಾದ್ಯಂತ ನಡೆಯುತ್ತಿದೆ. ಇಂತಹ ಪ್ರಕರಣದಲ್ಲಿ ಭಾಗಿಯಾಗುವವರ ಬಗ್ಗೆ ಮಾಹಿತಿ ನೀಡಿದರೆ ತಕ್ಷಣ ಕ್ರಮಕೈಗೊಳ್ಳುತ್ತೇವೆ. ಶ್ರೀ ರಾಮ ಸೇನೆ ಮಹಿಳೆಯರ ಆತ ರಕ್ಷಣೆ ಮಾಡುತ್ತಿರುವುದು ಒಳ್ಳೆಯದು. ಆದರೆ ಇದು ತ್ರಿಶೂಲ ದೀಕ್ಷೆ ನೀಡುವ ಹಾಗೂ ಪಡೆಯುವವರಿಗೆ ಬಿಟ್ಟ ವಿಚಾರ. ಇದಕ್ಕೆ ನಾನು ಉತ್ತರಿಸಲ್ಲ. ಕಾನೂನು ಪ್ರಕಾರ ನೀಡಲಾಗದಿದ್ದರೆ ಖಂಡಿತವಾಗಿ ನಿಲ್ಲಿಸುತ್ತೇವೆ ಎಂದರು.

ಅಂಜಲಿ ಕುಟುಂಬ ಬಡತನದಲ್ಲಿದೆ. ಅವರಿಗೆ ಸರ್ಕಾರದ ಪರಿಹಾರ ನೀಡುತ್ತದೆ. ಏನು ಪರಿಹಾರ ಕೊಡಲಿದೆ ಎಂಬುವುದನ್ನು ನಾನು ಹೇಳುವುದಿಲ್ಲ ಎಂದರು.ಲಾಡ್‌ ಭೇಟಿಗೆ ವಿರೋಧ: ಅಂಜಲಿ ಮನೆಗೆ ಭೇಟಿ ನೀಡಿದ ಸಚಿವ ಸಂತೋಷ್‌ ಲಾಡ್‌, ಶಾಸಕ ಪ್ರಸಾದ ಅಬ್ಬಯ್ಯ ಅವರನ್ನು ಬಿಜೆಪಿ ಮುಖಂಡ ಅನೂಪ್‌ ಬಿಜವಾಡ ಸೇರಿದಂತೆ ಸ್ಥಳೀಯರು ಇಷ್ಟು ದಿನ ಎಲ್ಲಿ ಹೋಗಿದ್ದಿರಿ, ಈಗ ಯಾಕೆ ಬಂದಿರಿ ಎಂದು ತೀವ್ರ ತರಾಟೆಗೆ ತೆಗೆದುಕೊಂಡರು.

RELATED ARTICLES

Latest News