Saturday, June 22, 2024
Homeರಾಜ್ಯಜರ್ಮನಿಯಿಂದ ಲಂಡನ್‌ಗೆ ಹಾರಿದ ಪ್ರಜ್ವಲ್..!?

ಜರ್ಮನಿಯಿಂದ ಲಂಡನ್‌ಗೆ ಹಾರಿದ ಪ್ರಜ್ವಲ್..!?

ಬೆಂಗಳೂರು, ಮೇ 18- ಅಶ್ಲೀಲ ವಿಡಿಯೋ, ಲೈಂಗಿಕ ದೌರ್ಜನ್ಯದ ಆರೋಪ ಹೊತ್ತಿರುವ ಸಂಸದ ಪ್ರಜ್ವಲ್‌ ರೇವಣ್ಣ ಜರ್ಮನಿಯಿಂದ ಲಂಡನ್‌ಗೆ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಲೋಕಸಭಾ ಚುನಾವಣೆಯ ಮೊದಲನೇ ಹಂತದ ಮತದಾನ ಮುಗಿದ ಬಳಿಕ ಪ್ರಜ್ವಲ್‌ ಜರ್ಮನಿಗೆ ಹೋಗಿದ್ದು, ಇಲ್ಲಿಯ ವರೆಗೂ ಅಲ್ಲೇ ಇದ್ದಾರೆ ಎಂದು ಹೇಳಲಾಗುತ್ತಿತ್ತು. ಆದರೆ ಇದೀಗ ಲಂಡನ್‌ಗೆ ಹೋಗಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.

ಇಂಗ್ಲೆಂಡ್‌ನಲ್ಲಿರುವ ಭಾರತದ ಉದ್ಯಮಿಯೊಬ್ಬರ ಸಹಾಯದಿಂದ ಪ್ರಜ್ವಲ್‌ ತನ್ನ ಇಬ್ಬರು ಗೆಳೆಯರೊಂದಿಗೆ ರೈಲು ಮೂಲಕ ಜರ್ಮನಿಯ ಮ್ಯೂನಿಚ್‌ನಿಂದ ಲಂಡನ್‌ಗೆ ಹೋಗಿದ್ದಾರೆ ಎಂಬುವುದು ಗೊತ್ತಾಗಿದೆ.

ದುಬೈ ಮೂಲದ ಸ್ನೇಹಿತ ಮತ್ತು ಬೆಂಗಳೂರು ಮೂಲದ ಮತ್ತೊಬ್ಬ ಸ್ನೇಹಿತ ಪ್ರಜ್ವಲ್‌ ಜೊತೆ ಇರುವ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಈ ಮೂವರು ಒಟ್ಟಾಗಿ ಲಂಡನ್‌ಗೆ ಹೋಗಿರುವ ಸಾಧ್ಯತೆಯಿದೆ.

ಪ್ರಜ್ವಲ್‌ ರೇವಣ್ಣ ಕಳೆದ 20 ದಿನಗಳಿಂದ ಕುಟುಂಬದವರ ಸಂಪರ್ಕದಲ್ಲಿ ಇಲ್ಲ ಎಂದು ಹೇಳಲಾಗುತ್ತಿದೆ. ಜರ್ಮನಿಗೆ ಹೋದ ನಂತರ ಭಾರತಕ್ಕೆ ವಾಪಸ್‌‍ ಬರಲು 2 ಬಾರಿ ವಿಮಾನದ ಟಿಕೆಟ್‌ ಬುಕ್‌ ಮಾಡಿ ಕೊನೆ ಕ್ಷಣದಲ್ಲಿ ರದ್ದು ಮಾಡಿದ್ದರು. ಮೇ 3 ಮತ್ತು 15ರಂದು ಬುಕ್‌ ಮಾಡಿದ್ದ ಟಿಕ್‌ ರದ್ದಾಗಿತ್ತು. ಹೀಗಾಗಿ ಅಧಿಕಾರಿಗಳು ಮುಂದಿನ ಟಿಕೆಟ್‌ ಬುಕ್ಕಿಂಗ್‌ ಮೇಲೆ ಕಣ್ಣಿಟ್ಟಿದ್ದಾರೆ.

ಈ ನಡುವೆ ಪ್ರಜ್ವಲ್‌ಗೆ ಎಸ್‌‍ಐಟಿ ತನಿಖಾ ತಂಡ ನೋಟಿಸ್‌‍ಗಳನ್ನು ಕೊಟ್ಟಿತ್ತು. ಪ್ರಜ್ವಲ್ ಪರ ವಕೀಲರು ವಿಚಾರಣೆಗಾಗಿ ಕಾಲಾವಕಾಶ ಕೇಳಿದ್ದರು. ಕಾಲಾವಕಾಶ ಅವಧಿ ಮುಗಿದರೂ ಸಹ ಪ್ರಜ್ವಲ್‌ ವಿಚಾರಣೆಗೆ ಹಾಜರಾಗದ ಕಾರಣ ಲುಕ್‌ಔಟ್‌ ನೋಟಿಸ್‌‍ ಸಹ ಜಾರಿ ಮಾಡಲಾಗಿತ್ತು.

ನಂತರ ಬ್ಲೂಕಾರ್ನರ್‌ ನೋಟಿಸ್‌‍ ನೀಡಿದ್ದರೂ ಸಹ ಪ್ರಜ್ವಲ್‌ ವಿಚಾರಣೆಗೆ ಬಂದಿಲ್ಲ. ಹಾಗಾಗಿ ಇದೀಗ ರೆಡ್‌ ಕಾರ್ನರ್‌ ನೋಟಿಸ್‌‍ ನೀಡಲು ಎಸ್‌‍ಐಟಿ ಸಿದ್ಧತೆ ಮಾಡಿಕೊಳ್ಳುತ್ತಿದೆ.

ಮತ್ತೊಂದೆಡೆ ಲೋಕಸಭಾ ಚುನಾವಣೆ ಫಲಿತಾಂಶ ಪ್ರಕಟವಾದ ನಂತರ(ಜೂ.4) ಪ್ರಜ್ವಲ್‌ ಭಾರತಕ್ಕೆ ಬರಬಹುದೆಂಬ ನಿರೀಕ್ಷೆಯಿದೆ. ಮತ್ತೊಂದೆಡೆ ಕುಟುಂಬಸ್ಥರಿಂದಲೂ ವಾಪಸ್‌‍ ಬರುವಂತೆ ಪ್ರಜ್ವಲ್‌ಗೆ ಒತ್ತಡ ಹಾಕಲಾಗಿದೆ ಎಂದು ತಿಳಿದುಬಂದಿದೆ.
ಒಟ್ಟಾರೆ ಪೆನ್‌ಡ್ರೈವ್‌ ಪ್ರಕರಣ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿದ್ದು, ದಿನದಿಂದ ದಿನಕ್ಕೆ ರೋಚಕತೆ ಪಡೆದುಕೊಳ್ಳುತ್ತಿದೆ.

RELATED ARTICLES

Latest News