ಮಂಗಳೂರು,ಮೇ23- ಬೆಳ್ತಂಗಡಿಯಲ್ಲಿ ದಿನವಿಡೀ ನಡೆದ ಹೈಡ್ರಾಮಾ ಬಳಿಕ ಬಿಜೆಪಿ ಶಾಸಕ ಹರೀಶ್ ಪೂಂಜಾ ರಾತ್ರಿಯೇ ಬೆಳ್ತಂಗಡಿ ಪೊಲೀಸ್ ಠಾಣೆಗೆ ಬಂದು ವಿಚಾರಣೆಗೆ ಹಾಜರಾದರು. ಶಾಸಕರ ವಿಚಾರಣೆ ನಡೆಸಿದ ಪೊಲೀಸರು, ಬಳಿಕ ಸ್ಟೇಷನ್ ಜಾಮೀನಿನಡಿ ಬಿಡುಗಡೆ ಮಾಡಿದ್ದಾರೆ. ಪೊಲೀಸರಿಗೆ ಧಮ್ಕಿ, ಬೆದರಿಕೆ ಪ್ರಕರಣ ಸಂಬಂಧ ಪೂಂಜಾ ಅವರನ್ನು ಬಂಧಿಸಲು ಬಂದಿದ್ದ ಪೊಲೀಸರು ಕೊನೆಗೆ ನೋಟಿಸ್ ನೀಡಿ ತೆರಳಿದ್ದರು.
ಶಾಸಕ ಹರೀಶ್ ಪೂಂಜಾ ಅವರನ್ನು ಬಂಧಿಸಬೇಕೆಂದು ಬೆಳಗ್ಗೆಯಿಂದಲೇ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಗರ್ಡಾಡಿ ಗ್ರಾಮದಲ್ಲಿರುವ ನಿವಾಸದಲ್ಲಿ ಪೊಲೀಸರು ಠಿಕಾಣಿ ಹೂಡಿದ್ದರು. ಕೊನೆಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿ ವಾಪಸಾಗಿದ್ದರು. ಬಳಿಕ ರಾತ್ರಿ 9.30ರ ಸುಮಾರಿಗೆ ಶಾಸಕ ಹರೀಶ್ ಪೂಂಜಾ ಪೊಲೀಸ್ ಠಾಣೆಗೆ ಹಾಜರಾಗಿದ್ದಾರೆ.
ಶಾಸಕ ಹರೀಶ್ ಪೂಂಜ ವಿರುದ್ಧ ಬೆಳ್ತಂಗಡಿ ಠಾಣೆಯಲ್ಲಿ ದಾಖಲಾಗಿದ್ದ 2 ಪ್ರಕರಣಗಳಿಗೆ ಸಂಬಂಧಿಸಿದಂತೆ ವಿಚಾರಣೆಗಾಗಿ ಠಾಣೆಗೆ ಕರೆತರಲು ಬೆಳ್ತಂಗಡಿ ಠಾಣೆ ಪೊಲೀಸರು ಅವರ ಮನೆಗೆ ತೆರಳಿದ್ದರು. ಈ ವೇಳೆ ಸ್ಥಳದಲ್ಲಿದ್ದ ದಕ್ಷಿಣ ಕನ್ನಡ ಸಂಸದ ನಳೀನ್ ಕುಮಾರ್ ಕಟೀಲ್ ಅವರು, ತಾನೇ ಖುದ್ದಾಗಿ ಹರೀಶ್ ಪೂಂಜಾರನ್ನು ವಿಚಾರಣೆಗೆ ಠಾಣೆಗೆ ಕಳುಹಿಸುವುದಾಗಿ ವಿನಂತಿಸಿಕೊಂಡಿದ್ದರು. ಹಾಗೂ ಅದರಂತೆ ಸಂಸದರು ಆರೋಪಿತರಾದ ಹರೀಶ್ ಪೂಂಜಾರನ್ನು ಪೊಲೀಸ್ ಠಾಣೆಗೆ ಕಳುಹಿಸಿದ್ದರು.
ಬಳಿಕ ಠಾಣೆಯಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಹರೀಶ್ ಪೂಂಜ ಅವರ ವಿಚಾರಣೆ ನಡೆಸಲಾಗಿದೆ.
ಬೆಳ್ತಂಗಡಿ ಠಾಣೆ 58/2024, ಕಲಂ: 143, 147, 341, 504, 506 ಜೊತೆಗೆ 149 ಐಪಿಸಿ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಹರೀಶ್ ಪೂಂಜಾರನ್ನು ವಿಚಾರಣೆ ನಡೆಸಿ, ಸ್ಟೇಷನ್ ಜಾಮೀನಿನಡಿ ಬಿಡುಗಡೆ ಮಾಡಲಾಗಿದೆ.ಈ ವೇಳೆ ಸುದ್ದಿಗಾರರ ಜೊತೆ ಮಾತನಾಡಿದ ಶಾಸಕ ಪೂಂಜಾ ಅವರು, ಪೊಲೀಸರ ಮೇಲೆ ಹೆಚ್ಚಿನ ದೌಜನ್ಯ ಮಾಡಿರುವುದು ಕಾಂಗ್ರೆಸ್. ಬಿಜೆಪಿ ನಾಯಕರಿಗೆ ಬುದ್ದಿ ಹೇಳುವ ಅವಶ್ಯಕತೆ ಇಲ್ಲ.
ತುರ್ತು ಪರಿಸ್ಥಿತಿಯಿಂದ ಹಿಡಿದು ಅವತ್ತಿನಿಂದ ಇವತ್ತಿನ ವರೆಗೆ ಪೊಲೀಸರನ್ನು ಹಿಡಿದುಕೊಂಡು ಕಾಂಗ್ರೆಸ್ ದೌರ್ಜನ್ಯ ಮಾಡುತ್ತಿದೆ. ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಕಾಂಗ್ರೆಸ್ ಪ್ರತಿಭಟನೆ ಮಾಡುತ್ತಿಲ್ಲವಾ? ಆವಾಗ ಯಾವ ನ್ಯಾಯ ಕಾನೂನು ಇತ್ತು. ಬಿಜೆಪಿ ಕಾರ್ಯಕರ್ತನಿಗೆ ಅನ್ಯಾಯ ಆದಾಗ ಪ್ರತಿಭಟನೆಗೆ ಅವಕಾಶ ನೀಡುವುದಿಲ್ಲ ಇದು ಯಾವ ನ್ಯಾಯ ಎಂದು ಪ್ರಶ್ನಿಸಿದರು.
ಒಬ್ಬ ಅಮಾಯಕನ ಬಂಧನವಾಗಿದೆ. ಆತ ಬಿಜೆಪಿಯಲ್ಲಿ ಮುಂಚೂಣಿಯಲ್ಲಿದ್ದಾನೆ ಎಂದು ಬಂಧಿಸಿದ್ದಾರೆ. ಅದನ್ನು ನಾನು ಜನಪ್ರತಿನಿಧಿಯಾಗಿ ಖಂಡಿಸಿರುವುದು. ದ್ವೇಷದ ರಾಜಕಾರಣ ಮಾಡಿದರೆ ಒಪುವುದಿಲ್ಲ ಎಂದು ಪೊಲೀಸರ ಮೂಲಕ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು. ಅದನ್ನೇ ನೆಪವಾಗಿ ಇಟ್ಟು ಮೂರು ಕೇಸ್ ಹಾಕಿದ್ದಾರೆ. ಅಧಿಕಾರಕ್ಕೆ ನಾನು ಪೊಲೀಸರಿಗೆ ಬೈದಿಲ್ಲ. ಸಿದ್ದರಾಮಯ್ಯ ಅಧಿಕಾರಕ್ಕಾಗಿ ಪೊಲೀಸ್ ಅಧಿಕಾರಿ ಶಂಕರ್ ಬಿದರಿ ಕಾಲರ್ ಪಟ್ಟಿ ಹಿಡಿದಿಲ್ಲವೇ? ಕಾರ್ಯಕರ್ತರ ಶಕ್ತಿಗಾಗಿ ಪೊಲೀಸರಿಗೆ ಬೈದದ್ದು ಅಧಿಕಾರಕ್ಕಾಗಿ ಅಲ್ಲ ಎಂದು ಸ್ಪಷ್ಟಪಡಿಸಿದರು.