Sunday, June 16, 2024
Homeರಾಜಕೀಯವಿಧಾನಪರಿಷತ್ ಚುನಾವಣೆ : ಬಿಜೆಪಿ-ಜೆಡಿಎಸ್‌‍ ಮೈತ್ರಿ ಪ್ರಚಾರ ಆರಂಭ

ವಿಧಾನಪರಿಷತ್ ಚುನಾವಣೆ : ಬಿಜೆಪಿ-ಜೆಡಿಎಸ್‌‍ ಮೈತ್ರಿ ಪ್ರಚಾರ ಆರಂಭ

ಬೆಂಗಳೂರು,ಮೇ23-ಜೂನ್‌ 3ರಂದು ನಡೆಯಲಿರುವ ಮೂರು ಶಿಕ್ಷಕ ಕ್ಷೇತ್ರ ಮತ್ತು ಮೂರು ಪದವೀಧರ ಕ್ಷೇತ್ರಗಳ ಚುನಾವಣೆಯಲ್ಲಿ ಎಲ್ಲಾ ಸ್ಥಾನಗಳನ್ನೂ ಗೆಲ್ಲಲು ಬಿಜೆಪಿ ಮತ್ತು ಜೆಡಿಎಸ್‌‍ ಮೈತ್ರಿ ನಾಯಕರು ನಿರ್ಧರಿಸಿದ್ದು, ಪ್ರಚಾರ ಕಾರ್ಯಾರಂಭಿಸಿದ್ದಾರೆ.ನೈರುತ್ಯ ಪದವೀಧರ ಕ್ಷೇತ್ರದಲ್ಲಿ ಬಂಡಾಯ ಹೊರತುಪಡಿಸಿದರೆ ಇತರ ಐದು ಕ್ಷೇತ್ರಗಳಲ್ಲಿ ಮೈತ್ರಿಕೂಟ ನಿರಾತಂಕವಾಗಿ ಚುನಾವಣೆ ಎದುರಿಸುತ್ತಿದೆ. ಕೇಸರಿ ನಾಯಕರು, ದಳಪತಿಗಳು ಒಟ್ಟಾಗಿ ಸ್ಥಳೀಯ ಮಟ್ಟದಿಂದಲೇ ಚುನಾವಣೆಗೆ ಬೇಕಾದ ಸಿದ್ಧತೆಯಲ್ಲಿ ತೊಡಗಿದ್ದಾರೆ.

ಶಿಕ್ಷಕರ ಮತ್ತು ಪದವೀಧರ ಸೇರಿ ಎಲ್ಲಾ ಆರು ಕ್ಷೇತ್ರಗಳಿಗೆ ಬಿಜೆಪಿ ಉಸ್ತುವಾರಿಗಳ ನೇಮಕ ಮಾಡಲಾಗಿದೆ. ಆರು ಕ್ಷೇತ್ರಗಳಲ್ಲಿ ಬಿಜೆಪಿ ನಾಲ್ಕು ಮತ್ತು ಜೆಡಿಎಸ್‌‍ ಎರಡು ಸ್ಥಾನಗಳಲ್ಲಿ ಸ್ಪರ್ಧಿಸಿದ್ದರೂ ಕೂಡ ಮಿತ್ರಪಕ್ಷದ ನೆರವಿಗೆ ಪರಸ್ಪರ ನಾಯಕರು ಮುಂದಾಗಿದ್ದಾರೆ. ಅದರ ಭಾಗವಾಗಿ ಬಿಜೆಪಿಯು ಜೆಡಿಎಸ್‌‍ ಅಭ್ಯರ್ಥಿಗಳ ಕ್ಷೇತ್ರಕ್ಕೂ ಉಸ್ತುವಾರಿಗಳನ್ನು ನಿಯೋಜಿಸಿ ಚುನಾವಣೆಗೆ ಅಗತ್ಯ ಸಹಕಾರ ನೀಡಿದೆ.

ಈಶಾನ್ಯ ಪದವೀಧರ ಕ್ಷೇತ್ರ: ವಿಪಕ್ಷ ಮುಖ್ಯ ಸಚೇತಕ ರವಿಕುಮಾರ್, ನೈಋತ್ಯ ಪದವೀಧರ ಮತ್ತು ನೈಋತ್ಯ ಶಿಕ್ಷಕರ ಕ್ಷೇತ್ರಕ್ಕೆ ರಾಜ್ಯ ಪ್ರಧಾನ ಕಾರ್ಯದರ್ಶಿ ವಿ.ಸುನೀಲ್‌ ಕುಮಾರ್‌ (ಉಸ್ತುವಾರಿ), ವಿಧಾನಪರಿಷತ್‌ ಸದಸ್ಯ ಡಿ.ಎಸ್‌‍.ಅರುಣ್‌ (ಸಹ ಉಸ್ತುವಾರಿ) ಆಗಿದ್ದು, ಬೆಂಗಳೂರು ಪದವೀಧರ ಕ್ಷೇತ್ರಕ್ಕೆ ರಾಜ್ಯ ಮುಖ್ಯ ವಕ್ತಾರ ಅಶ್ವತ್ಥ ನಾರಾಯಣ, ಆಗ್ನೇಯ ಶಿಕ್ಷಕರ ಕ್ಷೇತ್ರಕ್ಕೆ ವಿಧಾನಪರಿಷತ್‌ ಸದಸ್ಯ ಕೆ.ಎಸ್‌‍.ನವೀನ್‌‍, ದಕ್ಷಿಣ ಶಿಕ್ಷಕರ ಕ್ಷೇತ್ರಕ್ಕೆ ರಾಜ್ಯ ಉಪಾಧ್ಯಕ್ಷ ಎಂ.ರಾಜೇಂದ್ರ ಅವರನ್ನು ಉಸ್ತುವಾರಿಗಳನ್ನಾಗಿ ಬಿಜೆಪಿ ನೇಮಿಸಿದೆ.

ಶಿಕ್ಷಕರ ಮತ್ತು ಪದವೀಧರ ಕ್ಷೇತ್ರಗಳ ಚುನಾವಣೆಯಲ್ಲಿ ಈಗಾಗಲೇ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಪ್ರತಿಪಕ್ಷ ನಾಯಕ ಆರ್‌.ಅಶೋಕ್‌‍, ಹಿರಿಯ ನಾಯಕ ಬಿ.ಎಸ್‌‍.ಯಡಿಯೂರಪ್ಪ, ಮಾಜಿ ಸಿಎಂ ಡಿ.ವಿ.ಸದಾನಂದ ಗೌಡ ಸೇರಿದಂತೆ ಹಿರಿಯ ನಾಯಕರು ಮತ್ತು ಆಯಾ ಕ್ಷೇತ್ರಗಳ ಪ್ರಮುಖ ನಾಯಕರು ಎನ್‌‍ಡಿಎ ಮೈತ್ರಿಕೂಟದ ಅಭ್ಯರ್ಥಿಗಳ ಪರ ಪ್ರಚಾರ ನಡೆಸುತ್ತಿದ್ದಾರೆ.

ಜೆಡಿಎಸ್‌‍ ರಾಜ್ಯಾಧ್ಯಕ್ಷ ಹೆಚ್‌.ಡಿ.ಕುಮಾರಸ್ವಾಮಿ, ಕೋರ್‌ ಕಮಿಟಿ ಅಧ್ಯಕ್ಷ ಜಿ.ಟಿ.ದೇವೇಗೌಡ, ಹಿರಿಯ ನಾಯಕರಾದ ಸಾ.ರಾ.ಮಹೇಶ್‌‍, ಸಿಎಸ್‌‍ ಪುಟ್ಟರಾಜು ಸೇರಿದಂತೆ ಹಲವು ನಾಯಕರು ಜೆಡಿಎಸ್‌‍ ಅಭ್ಯರ್ಥಿಗಳ ಪರ ಪ್ರಚಾರ ನಡೆಸುತ್ತಿದ್ದು, ಸ್ಥಳೀಯ ನಾಯಕರು ಬಿಜೆಪಿ ನಾಯಕರ ಜೊತೆ ಕೈಜೋಡಿಸಿ ಬಿಜೆಪಿ ಅಭ್ಯರ್ಥಿಗಳು ಸ್ಪರ್ಧೆ ಮಾಡಿರುವ ಕಡೆ ಪ್ರಚಾರ ಮಾಡುತ್ತಿದ್ದಾರೆ.

ಕುಮಾರಸ್ವಾಮಿ ಕೂಡ ಮೈತ್ರಿಕೂಟದ ನಾಯಕರಾಗಿ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲಿದ್ದಾರೆ. ಜೆಡಿಎಸ್‌‍ ಪಾಲಿನ ಎರಡು ಕ್ಷೇತ್ರಗಳಿಗೆ ಉಸ್ತುವಾರಿಗಳ ನೇಮಿಸಿ ಜವಾಬ್ದಾರಿ ಹಂಚಿಕೆ ಮಾಡಲಾಗಿದೆ.

ದಕ್ಷಿಣ ಶಿಕ್ಷಕರ ಕ್ಷೇತ್ರಕ್ಕೆ ಕೋರ್‌ ಕಮಿಟಿ ಅಧ್ಯಕ್ಷ ಜಿ.ಟಿ.ದೇವೇಗೌಡ, ನಾಯಕರಾದ ಸಾ.ರಾ.ಮಹೇಶ್‌‍, ಸಿ.ಎಸ್‌‍.ಪುಟ್ಟರಾಜುಗೆ ಉಸ್ತುವಾರಿ ವಹಿಸಿದ್ದು, ನೈರುತ್ಯ ಶಿಕ್ಷಕರ ಕ್ಷೇತ್ರಕ್ಕೆ ಶಾಸಕಿ ಶಾರದಾ ಪೂರ್ಯಾ ನಾಯ್ಕ, ವೈಎಸ್ವಿ ದತ್ತಾ ಸೇರಿ ಇತರರಿಗೆ ಜವಾಬ್ದಾರಿ ವಹಿಸಲಾಗಿದೆ. ಕ್ಷೇತ್ರದಲ್ಲೇ ಬೀಡುಬಿಟ್ಟಿರುವ ನಾಯಕರು ಅಭ್ಯರ್ಥಿಗಳ ಪರ ಪ್ರಚಾರದಲ್ಲಿ ತೊಡಗಿದ್ದಾರೆ.

RELATED ARTICLES

Latest News