Sunday, June 16, 2024
Homeರಾಜ್ಯಸಭಾಪತಿ ಮತ್ತು ಉಪಸಭಾಪತಿ ಸ್ಥಾನ ಉಳಿಸಿಕೊಳ್ಳಲು ಮಿತ್ರಪಕ್ಷಗಳ ಮಾಸ್ಟರ್‌ ಪ್ಲಾನ್‌

ಸಭಾಪತಿ ಮತ್ತು ಉಪಸಭಾಪತಿ ಸ್ಥಾನ ಉಳಿಸಿಕೊಳ್ಳಲು ಮಿತ್ರಪಕ್ಷಗಳ ಮಾಸ್ಟರ್‌ ಪ್ಲಾನ್‌

ಬೆಂಗಳೂರು,ಮೇ23- ವಿಧಾನಸಭೆಯಲ್ಲಿ ಪ್ರಚಂಡ ಬಹುಮತದೊಂದಿಗೆ ಕಾಂಗ್ರೆಸ್‌‍ ಅಧಿಕಾರದಲ್ಲಿದ್ದರೂ ವಿಧಾನಪರಿಷತ್‌‍ನಲ್ಲಿ ಬಿಜೆಪಿ ಮತ್ತು ಜೆಡಿಎಸ್‌‍ ಮೈತ್ರಿಕೂಟ ಬಹುಮತದೊಂದಿಗೆ ಸಭಾಪತಿ ಮತ್ತು ಉಪಸಭಾಪತಿ ಸ್ಥಾನವನ್ನು ಪಡೆದುಕೊಂಡಿದೆ.

ಆದರೆ ಶಿಕ್ಷಕರ, ಪದವೀಧರರ ಕ್ಷೇತ್ರದ ಚುನಾವಣೆ ಹಾಗೂ ವಿಧಾನಸಭೆಯಿಂದ ವಿಧಾನಪರಿಷತ್‌‍ಗೆ ಈಗ ನಡೆಯುತ್ತಿರುವ ಚುನಾವಣೆಯಲ್ಲಿ ಮೈತ್ರಿಕೂಟದ ಬಹುಮತಕ್ಕೆ ತಡೆಯೊಡ್ಡಲು ಆಡಳಿತರೂಢ ಕಾಂಗ್ರೆಸ್‌‍ ಮುಂದಾಗಿದೆ. ಅದೇ ರೀತಿ ತಮ್ಮ ಬಹುಮತ ಉಳಿಸಿಕೊಳ್ಳಲು ಮಿತ್ರಪಕ್ಷಗಳ ಕೂಟ ಮಾಸ್ಟರ್‌ ಪ್ಲಾನ್‌ ಮಾಡುತ್ತಿದೆ.

75 ಸದಸ್ಯ ಬಲ ಹೊಂದಿರುವ ವಿಧಾನಪರಿಷತ್‌‍ನಲ್ಲಿ ಬಿಜೆಪಿ 35, ಕಾಂಗ್ರೆಸ್‌‍ 29, ಜೆಡಿಎಸ್‌‍ 8, ಸಭಾಪತಿ 1, ಪಕ್ಷೇತರ 1 ಸ್ಥಾನ ಹೊಂದಿದ್ದು, 1 ಸ್ಥಾನ ಖಾಲಿ ಇದೆ. ಜಗದೀಶ್‌ ಶೆಟ್ಟರ್‌ ರಾಜೀನಾಮೆ ನೀಡಿದ್ದರಿಂದ ಆ ಸ್ಥಾನ ಸದ್ಯಕ್ಕೆ ಖಾಲಿ ಇದೆ. ಈಗ ಚುನಾವಣೆ ನಡೆಯುತ್ತಿಲ್ಲ. ಈಗ ನಡೆಯುತ್ತಿರುವ ಚುನಾವಣೆಯ ಸ್ಥಾನಗಳನ್ನು ಕಳೆದು ಚುನಾವಣೆಯಲ್ಲಿ ಗಳಿಸುವ ಸ್ಥಾನಗಳ ಆಧಾರದಲ್ಲಿ ಸಭಾಪತಿ ಸ್ಥಾನದ ಭವಿಷ್ಯವೂ ನಿರ್ಧಾರವಾಗಲಿದೆ.

ಸಭಾಪತಿ ಬಸವರಾಜ ಹೊರಟ್ಟಿ ಅವರು ಮುಂದುವರೆಯುತ್ತಾರಾ ಅಥವಾ ಆಡಳಿತ ಪಕ್ಷಕ್ಕೆ ಸಭಾಪತಿ ಸ್ಥಾನ ಸಿಗಲಿದೆಯಾ ಎನ್ನುವುದೂ ಫಲಿತಾಂಶದ ಮೇಲೆ ಅವಲಂಭಿತವಾಗಿದೆ. ಆಯನೂರು ಮಂಜುನಾಥ್‌‍, ತೇಜಸ್ವಿನಿಗೌಡ, ಮರಿತಿಬ್ಬೇಗೌಡರು ಪರಿಷತ್‌ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರೂ ಆ ಸ್ಥಾನಗಳಿಗೂ ಈ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಆ ಸ್ಥಾನಗಳಲ್ಲಿ ಖಾಲಿ ಎಂದು ಈಗ ಪರಿಗಣಿಸುವ ಅಗತ್ಯವಿಲ್ಲ. ಚುನಾವಣೆ ನಡೆಯದೇ ಇರುವುದು ಜಗದೀಶ್‌ ಶೆಟ್ಟರ್‌ ಸ್ಥಾನಕ್ಕೆ ಮಾತ್ರ. ಹಾಗಾಗಿ ಒಂದು ಸ್ಥಾನ ಖಾಲಿ ಇದೆ ಎನ್ನಬಹುದಾಗಿದೆ.

75 ಸದಸ್ಯ ಬಲ ಈಗ 74 ಆಗಲಿದೆ. ಸಂಖ್ಯಾಬಲದ ಆಧಾರದಲ್ಲಿ ಬಿಜೆಪಿ ವಿಚಾರದಲ್ಲಿ ಬರುವುದಾದರೆ ಈಗಿರುವ 35 ಸ್ಥಾನಗಳಲ್ಲಿ ಶಿಕ್ಷಕರ ಪದವೀಧರ ಕ್ಷೇತ್ರದಲ್ಲಿ ಬಿಜೆಪಿ ಪಾಲಿನ ಮೂರು ಸ್ಥಾನಕ್ಕೆ ಚುನಾವಣೆ ಎದುರಾಗಿದೆ. ಹಾಗಾಗಿ 35 ಸದಸ್ಯ ಬಲ 32 ಆಗಲಿದೆ. ಜೊತೆಗೆ ವಿಧಾನಸಭೆಯಿಂದ ವಿಧಾನ ಪರಿಷತ್‌‍ಗೆ ನಡೆಯುವ 11 ಸ್ಥಾನಗಳ ಚುನಾವಣೆಯಲ್ಲಿ ಬಿಜೆಪಿಯ 6 ಸದಸ್ಯರಿದ್ದರು. ಅವರ ಸಂಖ್ಯೆ ಕಳೆದರೆ ಸದಸ್ಯ ಬಲ 26 ಆಗಲಿದೆ. ವಿಧಾನಸಭೆಯಿಂದ ವಿಧಾನ ಪರಿಷತ್‌‍ಗೆ ನಡೆಯುವ ಚುನಾವಣೆಯಲ್ಲಿ ಬಿಜೆಪಿ ಮೂರು ಸ್ಥಾನಗಳನ್ನು ಸಂಖ್ಯಾಬಲದ ಆಧಾರದಲ್ಲಿ ದಕ್ಕಿಸಿಕೊಳ್ಳಲಿದೆ.

ಹಾಗಾಗಿ ಬಿಜೆಪಿ ಸಂಖ್ಯೆ 29 ಆಗಲಿದೆ. ಶಿಕ್ಷಕರು ಮತ್ತು ಪದವೀಧರ ಕ್ಷೇತ್ರದಲ್ಲಿ ಎಷ್ಟು ಸ್ಥಾನ ಬರಲಿವೆ ಎನ್ನುವುದನ್ನು ಕಾದು ನೋಡಬೇಕಿದೆ.ಇನ್ನು, ಮಿತ್ರ ಪಕ್ಷ ಜೆಡಿಎಸ್‌‍ ವಿಚಾರಕ್ಕೆ ಬರುವುದಾದಲ್ಲಿ 8 ಜನರ ಸದಸ್ಯ ಬಲವನ್ನು ಹೊಂದಿದೆ. ಶಿಕ್ಷಕರ ಮತ್ತು ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಜೆಡಿಎಸ್‌‍ನ ಎರಡು ಸ್ಥಾನ ಇದ್ದು, ಅವುಗಳನ್ನು ಕಳೆದರೆ ಜೆಡಿಎಸ್‌‍ ಬಲ 6 ಆಗಲಿದೆ. ವಿಧಾನಸಭೆಯಿಂದ ವಿಧಾನ ಪರಿಷತ್‌‍ಗೆ ನಡೆಯುವ ಚುನಾವಣೆಯಲ್ಲಿ ಜೆಡಿಎಸ್‌‍ನ ಒಂದು ಸ್ಥಾನ ತೆರವಾದರೂ ಒಂದು ಸ್ಥಾನ ಸಂಖ್ಯಾಬಲದ ಆಧಾರದಲ್ಲಿ ಬರಲಿದೆ. ಹಾಗಾಗಿ ಸಂಖ್ಯೆ 6 ಆಗಿಯೇ ಉಳಿಯಲಿದೆ.

ಶಿಕ್ಷಕರ ಮತ್ತು ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಎಷ್ಟು ಸ್ಥಾನ ಬರಲಿವೆ ಎನ್ನುವುದರ ಮೇಲೆ ಅಂತಿಮವಾಗಿ ಜೆಡಿಎಸ್‌‍ ಬಲ ಎಷ್ಟು ಎಂದು ಗೊತ್ತಾಗಲಿದೆ.ಜೂನ್‌ 3ರಂದು ನಡೆಯುವ ಶಿಕ್ಷಕರ ಮತ್ತು ಪದವೀಧರ ಕ್ಷೇತ್ರದ ಚುನಾವಣೆಯನ್ನು ಬಿಟ್ಟು ಪಕ್ಷದ ಬಲಾಬಲ ಬಿಜೆಪಿ-ಜೆಡಿಎಸ್‌‍ ಮೈತ್ರಿಗೆ 35 ಸ್ಥಾನ ಆಗಲಿದೆ. ಸಭಾಪತಿ ಸ್ಥಾನ ಸೇರಿದಲ್ಲಿ 36 ಆಗಲಿದೆ.

ಶಿಕ್ಷಕರು ಮತ್ತು ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಕನಿಷ್ಠ ಎರಡು ಸ್ಥಾನವನ್ನಾದರೂ ಬಿಜೆಪಿ ಮತ್ತು ಜೆಡಿಎಸ್‌‍ ಮೈತ್ರಿ ಗೆದ್ದರೆ ಸದ್ಯದ ಮಟ್ಟಿಗೆ ಮಿತ್ರಪಕ್ಷದ ಬಳಿಯೇ ಸಭಾಪತಿ ಸ್ಥಾನ ಇರಲಿದೆ. ಒಂದು ವೇಳೆ ಯಾವುದೇ ಸ್ಥಾನ ಗೆಲ್ಲದೇ ಹೋದಲ್ಲಿ, ಈಗಲೇ ಸಭಾಪತಿ ಸ್ಥಾನವನ್ನು ಬಸವರಾಜ ಹೊರಟ್ಟಿ ಕಳೆದಕೊಳ್ಳಬೇಕಾಗಲಿದೆ.

ಶ್ರೀಮಂತ ದೇವಾಲಯಗಳ ದೇಣಿಗೆ ಹಣವನ್ನು ಕಡಿಮೆ ಆದಾಯದ ದೇವಾಲಯಗಳಿಗೆ ಹಂಚಲು ಅವಕಾಶ ಕಲ್ಪಿಸುವ ಹಿಂದೂ ಧಾರ್ಮಿಕ ತಿದ್ದುಪಡಿ ವಿಧೇಯಕ ಒಳಗೊಂಡು ಹಲವು ಪ್ರಮುಖ ಶಾಸನಗಳ ರಚನೆಗೆ ಕಾಂಗ್ರೆಸ್‌‍ ಸರಕಾರಕ್ಕೆ ಮೇಲನೆಯಲ್ಲಿ ಹಿನ್ನಡೆಯಾಗಿತ್ತು.

ಕಳೆದ ಬಜೆಟ್‌ ಅಧಿವೇಶನದಲ್ಲಿ ಪ್ರಮುಖ ವಿಧೇಯಕಗಳಿಗೆ ಪರಿಷತ್‌‍ನಲ್ಲಿ ಸೋಲಾಗಿತ್ತು. ಮತ್ತೆ ಕೆಲವು ಸೆಲೆಕ್ಟ್‌ ಕಮಿಟಿಗೆ ಶಿಫಾರಸ್ಸಾಗಿದ್ದವು. ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಪ್ರತಿಪಕ್ಷಗಳಿಗೆ ಇರುವ ಅಸ್ತ್ರವೇ ಪರಿಷತ್‌ನಲ್ಲಿನ ಬಹುಮತವಾಗಿದೆ.

ಹಾಗಾಗಿ ಶಿಕ್ಷಕರ ಮತ್ತು ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಹಾಲಿ ಸ್ಥಾನಗಳನ್ನು ಉಳಿಸಿಕೊಳ್ಳಬೇಕು ಎನ್ನುವ ಟಾರ್ಗೆಟ್‌ ಇದ್ದರೂ ಬಿಜೆಪಿ ಕನಿಷ್ಠ 3 ಸ್ಥಾನ ಮತ್ತು ಒಂದು ಸ್ಥಾನವನ್ನು ಜೆಡಿಎಸ್‌‍ ಗೆಲ್ಲಬೇಕು ಎನ್ನುವ ಗುರಿ ಹಾಕಿಕೊಳ್ಳಲಾಗಿದೆ. ಅದಕ್ಕೆ ಬೇಕಾದ ಸಿದ್ಧತೆಗಳ ಕುರಿತು ಬಿಜೆಪಿ ನಾಯಕರು ಸಭೆ ನಡೆಸಿ ಕಾರ್ಯತಂತ್ರಗಳನ್ನು ರೂಪಿಸಿದ್ದಾರೆ

RELATED ARTICLES

Latest News