Sunday, May 19, 2024
Homeಇದೀಗ ಬಂದ ಸುದ್ದಿಮಹಿಳೆಯರ ಮೇಲಿನ ದೌರ್ಜನ್ಯ ಕಂಡರೂ ಮೋದಿ ಮೌನ : ರಾಹುಲ್‌ ವಾಗ್ದಾಳಿ

ಮಹಿಳೆಯರ ಮೇಲಿನ ದೌರ್ಜನ್ಯ ಕಂಡರೂ ಮೋದಿ ಮೌನ : ರಾಹುಲ್‌ ವಾಗ್ದಾಳಿ

ಬೆಂಗಳೂರು,ಮೇ.4- ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯ ಪ್ರಕರಣಗಳನ್ನು ಕಂಡೂ ಹಿರಿಯ ಚುನಾಯಿತ ಪ್ರತಿನಿಧಿ ಮೌನಕ್ಕೆ ಶರಣಾಗಿದ್ದಾರೆ ಎಂದು ಕಾಂಗ್ರೆಸ್‌ನ ವರಿಷ್ಠ ನಾಯಕ ರಾಹುಲ್‌ಗಾಂಧಿ ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರುವ ಅವರು, ಹಾಸನದಲ್ಲಿ ನಡೆದಿದೆ ಎನ್ನಲಾದ ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ಸಂತ್ರಸ್ತರಿಗೆ ಸಾಧ್ಯವಿರುವ ಎಲ್ಲಾ ಬೆಂಬಲವನ್ನೂ ನೀಡಬೇಕು. ನ್ಯಾಯಕ್ಕಾಗಿ ಹೋರಾಟ ನಡೆಸುವ ಅವರಿಗೆ ನಮ್ಮ ಸಹಾನುಭೂತಿ ಮತ್ತು ಬೆಂಬಲದ ಅಗತ್ಯವಿದೆ. ಪಕ್ಷಭೇದ ಮರೆತು ಘೋರ ಅಪರಾಧ ಪ್ರಕರಣದಲ್ಲಿ ತಪ್ಪಿತಸ್ಥರನ್ನು ಶಿಕ್ಷೆಗೆ ಗುರಿಪಡಿಸಿ ಸಂತ್ರಸ್ತರಿಗೆ ನ್ಯಾಯ ದೊರಕಿಸುವುದು ಎಲ್ಲರ ಸಂಘಟನಾತ್ಮಕ ಜವಾಬ್ದಾರಿ ಎಂದು ಹೇಳಿದ್ದಾರೆ.

ಹಾಸನದ ಲೋಕಸಭಾ ಸದಸ್ಯರಿಂದ ನಡೆದಿದೆ ಎನ್ನಲಾದ ಭೀಕರ ಲೈಂಗಿಕ ದೌರ್ಜನ್ಯ ಪ್ರಕರಣ ನನ್ನನ್ನು ಆಘಾತಕ್ಕೊಳಪಡಿಸಿದೆ. ತಾಯಿ, ಸಹೋದರಿ ಸಮಾನರಾದ ನೂರಾರು ಮಹಿಳೆಯರ ಮೇಲೆ ಪ್ರಜ್ವಲ್‌ ರೇವಣ್ಣ ಲೈಂಗಿಕ ದೌರ್ಜನ್ಯ ನಡೆಸಿ, ಅದನ್ನು ವಿಡಿಯೋ ಚಿತ್ರೀಕರಣ ಮಾಡಿಕೊಂಡಿರುವುದು ಕಂಡುಬಂದಿದೆ. ಈ ಮೂಲಕ ಮಹಿಳೆಯರ ಘನತೆಯನ್ನು ಕಸಿದುಕೊಳ್ಳಲಾಗಿದೆ. ಈ ಪ್ರಕರಣದಲ್ಲಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.

ನನಗೆ ಮತ್ತೊಂದು ಆಘಾತವೆಂದರೆ 2023 ರ ಡಿಸೆಂಬರ್‌ನಲ್ಲೇ ಹಾಸನದ ಬಿಜೆಪಿ ಮುಖಂಡ ಜಿ.ದೇವರಾಜೇಗೌಡ, ಕೇಂದ್ರ ಗೃಹಸಚಿವ ಅಮಿತ್‌ ಶಾ ಅವರಿಗೆ ಪ್ರಜ್ವಲ್‌ ರೇವಣ್ಣ ಅವರ ಪೂರ್ವಾಪರ ಲೈಂಗಿಕ ದೌರ್ಜನ್ಯದ ಇತಿಹಾಸ ಮತ್ತು ಆತ ಚಿತ್ರೀಕರಿಸಿರುವ ವಿಡಿಯೋಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ್ದಾರೆ. ಅದರ ಹೊರತಾಗಿಯೂ ಬಿಜೆಪಿಯ ಹಿರಿಯ ನಾಯಕರು ಹಾಗೂ ಪ್ರಧಾನಮಂತ್ರಿಯವರು ಸಮೂಹ ಅತ್ಯಾಚಾರಿಯ ಪರವಾಗಿ ಚುನಾವಣಾ ಪ್ರಚಾರ ನಡೆಸಿದ್ದಾರೆ ಎಂದು ರಾಹುಲ್‌ ವಾಗ್ದಾಳಿ ನಡೆಸಿದ್ದಾರೆ.

ಕೇಂದ್ರ ಸರ್ಕಾರ ಉದ್ದೇಶಪೂರ್ವಕವಾಗಿಯೇ ಆರೋಪಿ ದೇಶಬಿಟ್ಟು ಪರಾರಿಯಾಗಲು ಅವಕಾಶ ನೀಡಿದೆ. ಈ ಮೂಲಕ ತನಿಖೆಯನ್ನು ಅರ್ಥಹೀನಗೊಳಿಸುವ ಯತ್ನ ನಡೆದಿದೆ. ಆರೋಪಕ್ಕೆ ಗುರಿಯಾಗಿರುವ ಪ್ರಜ್ವಲ್‌ ರೇವಣ್ಣ ಅವರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹಸಚಿವ ಅಮಿತ್‌ ಶಾ ಅವರ ಆಶೀರ್ವಾದ ಇರುವುದು ಖಂಡನೀಯ ಎಂದು ಹೇಳಿದ್ದಾರೆ.

ಕುಸ್ತಿಯಲ್ಲಿ ಒಲಿಂಪಿಕ್‌ ಸೇರಿದಂತೆ ಅಂತಾರಾಷ್ಟ್ರೀಯ ಕ್ರೀಡೆಯಲ್ಲಿ ಪದಕ ಗೆದ್ದಂತಹ ಹರಿಯಾಣದ ಸಹೋದರಿಯರ ಮೇಲಾದ ದೌರ್ಜನ್ಯ, ಮಣಿಪುರದ ಸಹೋದರಿಯರ ಮೇಲಿನ ಕಿರುಕುಳ, ಈಗ ಹಾಸನದ ಪ್ರಕರಣ ಸೇರಿದಂತೆ ಹಲವಾರು ಸಂದರ್ಭಗಳಲ್ಲಿ ಮಹಿಳೆಯರ ಮೇಲೆ ದೌರ್ಜನ್ಯವಾದಾಗ ಪ್ರಧಾನಮಂತ್ರಿಯವರು ವೌನಕ್ಕೆ ಶರಣಾಗುವ ಮೂಲಕ ಆರೋಪಿಗಳಿಗೆ ಪರೋಕ್ಷವಾಗಿ ಬೆಂಬಲ ನೀಡುತ್ತಿದ್ದಾರೆ ಎಂದು ರಾಹುಲ್‌ಗಾಂಧಿ ಕಿಡಿ ಕಾರಿದ್ದಾರೆ.

ಸಂಕಷ್ಟಕ್ಕೊಳಗಾದ ಮಹಿಳೆಯರ ನ್ಯಾಯಕ್ಕಾಗಿ ಹೋರಾಡುವುದು ಕಾಂಗ್ರೆಸ್‌ನ ನೈತಿಕ ಕರ್ತವ್ಯ. ಕರ್ನಾಟಕ ಸರ್ಕಾರ ಪ್ರಕರಣದ ತನಿಖೆಗೆ ಎಸ್‌ಐಟಿ ರಚನೆ ಮಾಡಿದೆ. ಜೊತೆಗೆ ಪ್ರಜ್ವಲ್‌ ರೇವಣ್ಣ ಅವರ ರಾಜತಾಂತ್ರಿಕ ಪಾಸ್‌ಪೋರ್ಟ್‌ ಅನ್ನು ರದ್ದುಗೊಳಿಸಿ ಭಾರತಕ್ಕೆ ಶೀಘ್ರವೇ ಹಸ್ತಾಂತರಿಸಲು ಸಹಕರಿಸುವಂತೆ ಮುಖ್ಯಮಂತ್ರಿಯವರು ಪ್ರಧಾನಿಯವರಿಗೆ ಪತ್ರ ಬರೆದಿದ್ದಾರೆ ಎಂದು ವಿವರಿಸಿದ್ದಾರೆ.

ರಾಹುಲ್‌ಗಾಂಧಿಯವರ ಪತ್ರಕ್ಕೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂಸದ ಪ್ರಜ್ವಲ್‌ ರೇವಣ್ಣ ಅವರಿಂದ ಅತ್ಯಾಚಾರ ಅನ್ಯಾಯಕ್ಕೆ ಒಳಗಾದ ಸಂತ್ರಸ್ತರ ರಕ್ಷಣೆಗೆ ನಮ್ಮ ಸರ್ಕಾರ ಬದ್ಧವಾಗಿದೆ. ನಿಷ್ಪಕ್ಷಪಾತ ತನಿಖೆ ನಡೆಸಿ ಪ್ರಕರಣದಲ್ಲಿ ಎಷ್ಟೇ ಪ್ರಭಾವಿಗಳು ಶಾಮೀಲಾಗಿದ್ದರೂ ಅವರನ್ನು ಕಾನೂನಿನ ಕೈಗೆ ಒಪ್ಪಿಸಲಾಗುವುದು. ನೊಂದವರ ಕಣ್ಣೀರು ಒರೆಸುವ ಜೊತೆಗೆ ಅವರ ನ್ಯಾಯದ ಹೋರಾಟದಲ್ಲಿ ನಮ್ಮ ಸರ್ಕಾರ ಜೊತೆಗೆ ನಿಲ್ಲಲಿದೆ ಎಂಬ ವಾಗ್ದಾನವನ್ನು ರಾಹುಲ್‌ಗಾಂಧಿಯವರಿಗೆ ನೀಡುವುದಾಗಿ ತಿಳಿಸಿದ್ದಾರೆ.

RELATED ARTICLES

Latest News