ತುಮಕೂರು,ಸೆ.10– ರಸ್ತೆಯಲ್ಲಿ ನಡೆದುಹೋಗುತ್ತಿದ್ದ ತಾಯಿ-ಮಗಳ ಮೇಲೆ ಗಾರ್ಮೆಂಟ್ಸ್ ಬಸ್ ಹರಿದ ಪರಿಣಾಮ ಇಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ತಿಪಟೂರು ತಾಲೂಕಿನ ಹುಚ್ಚನಹಟ್ಟಿ ರಾಮಶೆಟ್ಟಿಹಳ್ಳಿ ಬಳಿಯ ಬೈಪಾಸ್ ರಸ್ತೆಯಲ್ಲಿ ನಡೆದಿದೆ.ರಾಮಶೆಟ್ಟಿಹಳ್ಳಿ ಗ್ರಾಮದ ಕಮಲಮ(45), ವೀಣಾ(16) ಮೃತಪಟ್ಟ ತಾಯಿ-ಮಗಳು ಎನ್ನಲಾಗಿದೆ.
10ನೇ ತರಗತಿ ಓದುತ್ತಿದ್ದ ಮಗಳನ್ನು ಶಾಲೆಗೆ ಬಿಡಲು ಕಮಲಮ ಗ್ರಾಮದ ರಾಷ್ಟ್ರೀಯ ಹೆದ್ದಾರಿ 206 ರಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ವೇಗವಾಗಿ ಬಂದ ಗಾರ್ಮೆಂಟ್ಸ್ ಬಸ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರೂ ಸ್ಥಳದಲ್ಲಿಯೇ ಮೃತಪಟ್ಟರೆ, ಮತ್ತೊಬ್ಬ ಪಾದಚಾರಿ ಮುದ್ದಯ್ಯ ಎಂಬುವವರಿಗೆ ಬಸ್ ಡಿಕ್ಕಿ ಹೊಡೆದಿದ್ದು, ಆತನನ್ನು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪದೇಪದೇ ಅಪಘಾತಗಳು ಸಂಭವಿಸುತ್ತಿರುವುದನ್ನು ಖಂಡಿಸಿ ಗ್ರಾಮಸ್ಥರು ರಾಷ್ಟ್ರೀಯ ಹೆದ್ದಾರಿಯ ಅಧಿಕಾರಿಗಳು ಸ್ಥಳಕ್ಕೆ ಬರುವವರೆಗೂ ಮೃತ ದೇಹವನ್ನು ತೆಗೆಯಲು ಬಿಡುವುದಿಲ್ಲ ಎಂದು ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಸ್ಥಳಕ್ಕೆ ರಾಷ್ಟ್ರೀಯ ಹೆದ್ದಾರಿಯ ಇಂಜಿನಿಯರ್, ಉಪವಿಭಾಗಧಿಕಾರಿ ಸಪ್ತಶ್ರೀ, ಡಿವೈಎಸ್ಪಿ ವಿನಾಯಕ್ ಶೆಟಗೇರಿ, ತಾಲ್ಲೂಕು ದಂಡಾಧಿಕಾರಿ ಪವನ್‌ಕುಮಾರ್, ಬಿಇಒ ಚಂದ್ರಯ್ಯ ಭೇಟಿ ನೀಡಿ ತದನಂತರ ಸಾರ್ವಜನಿಕರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಚರ್ಚಿಸಿದಾಗ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಸಾರ್ವಜನಿಕ ಆಸ್ವತ್ರೆಗೆ ಕಳುಹಿಸಿಕೊಡಲಾಯಿತು.ಈ ಪ್ರಕರಣವನ್ನು ತಿಪಟೂರು ಗ್ರಾಮಾಂತರ ಪೊಲೀಸ್ ಠಾಣೆ ಪೊಲೀಸರು ದಾಖಲಿಸಿಕೊಂಡಿದ್ದಾರೆ.