Thursday, November 21, 2024
Homeರಾಜ್ಯಯಾವುದೇ ಕ್ಷಣದಲ್ಲಿ ಸಿಎಂ, ಕುಟುಂಬದ ವಿರುದ್ಧ ಎಫ್‌ಐಆರ್‌ ಸಾಧ್ಯತೆ

ಯಾವುದೇ ಕ್ಷಣದಲ್ಲಿ ಸಿಎಂ, ಕುಟುಂಬದ ವಿರುದ್ಧ ಎಫ್‌ಐಆರ್‌ ಸಾಧ್ಯತೆ

ಬೆಂಗಳೂರು, ಸೆ.26- ಮುಡಾ ಅಕ್ರಮ ನಿವೇಶನ ಹಂಚಿಕೆ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ತನಿಖೆಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶಿಸಿರುವುದರಿಂದ ಯಾವುದೇ ಸಂದರ್ಭದಲ್ಲಿ ಸಿಎಂ ಮತ್ತು ಕುಟುಂಬದವರ ವಿರುದ್ಧ ಮೈಸೂರು ಲೋಕಾಯುಕ್ತದಲ್ಲಿ ಎಫ್‌ಐಆರ್‌ ದಾಖಲಾಗುವ ಸಾಧ್ಯತೆ ಇದೆ.

ಈಗಾಗಲೇ ವಿಶೇಷ ಜನಪ್ರತಿನಿಧಿಗಳ ನ್ಯಾಯಾಲಯ ನೀಡಿರುವ ಆದೇಶದ ಪ್ರತಿ ಲೋಕಾಯುಕ್ತ ಎಡಿಜಿಪಿಗೆ ತಲುಪಿದ್ದು, ಅಲ್ಲಿಂದ ಮೈಸೂರು ಎಸ್‌‍ಪಿಯವರಿಗೆ ರವಾನೆಯಾಗಿದ್ದು, ಅಧಿಕೃತವಾಗಿ ತನಿಖೆ ಆರಂಭವಾಗಲಿದೆ. ನ್ಯಾಯಾಲಯದ ಆದೇಶದ ಪ್ರತಿ ಬುಧವಾರ ವಿಳಂಬವಾಗಿ ತಲು ಪಿದ್ದರಿಂದ ಲೋಕಾಯುಕ್ತ ಎಡಿಜಿಪಿಯವರು ಗುರುವಾರ ಅದನ್ನು ಮೈಸೂರು ಲೋಕಾಯುಕ್ತ ಎಸ್‌‍ಪಿ ಉದೇಶ್‌ ಅವರಿಗೆ ಹಸ್ತಾಂತರ ಮಾಡಿದ್ದಾರೆ.

ಮೈಸೂರಿನಿಂದ ಬೆಂಗಳೂರಿಗೆ ಆಗಮಿಸಿದ ಅವರು ಹಿರಿಯ ಅಧಿಕಾರಿಗಳ ಜೊತೆ ಚರ್ಚಿಸಿ ಪ್ರತಿಯನ್ನು ತೆಗೆದುಕೊಂಡು ತೆರಳಿದ್ದಾರೆ. ಮೊದಲು ಇನ್‌ಸ್ಪೆಕ್ಟರ್‌ ಒಬ್ಬರನ್ನು ಕಳುಹಿಸಿದ್ದರಾದರೂ ನಂತರ ಅವರೇ ಬಂದು ಪಡೆದುಕೊಂಡಿದ್ದಾರೆ. ನ್ಯಾಯಾಲಯದ ಸೂಚನೆಯಂತೆ ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ, ಬಾಮೈದುನ, ಮಲ್ಲಿಕಾರ್ಜುನ ಸ್ವಾಮಿ ಜಮೀನು ಮಾಲೀಕ ದೇವರಾಜ್‌ ಹಾಗೂ ಇತರರ ವಿರುದ್ಧ ಎಫ್‌ಐಆರ್‌ ದಾಖಲಿಸಲಿದ್ದಾರೆ.

ಪ್ರಕರಣದಲ್ಲಿ ಸಿದ್ದರಾಮಯ್ಯ ಮೊದಲನೇ ಆರೋಪಿಯಾದರೆ ಪತ್ನಿ ಪಾರ್ವತಮ 2ನೇ ಆರೋಪಿಯಾಗಲಿದ್ದಾರೆ. ಸಿಆರ್‌ಪಿಸಿ ಸೆಕ್ಷನ್‌ 156(3)ರಡಿ ದೂರು ದಾಖಲಿಸಲು ನ್ಯಾಯಾಲಯ ಆದೇಶ ನೀಡಿದೆ. ಇದರ ಪ್ರಕಾರವೇ ಲೋಕಾಯುಕ್ತ ಎಸ್‌‍ಪಿ ಎಫ್‌ಐಆರ್‌ ದಾಖಲಿಸಲಿದ್ದಾರೆ. ನ್ಯಾಯಾಲಯವು ಐಪಿಸಿ ಹಾಗೂ ಭ್ರಷ್ಟಾಚಾರ ನಿಗ್ರಹ ಕಾಯ್ದೆ, ಬೇನಾಮಿ ಪ್ರಾಪರ್ಟಿ ಟ್ರಾನ್ಸಕ್ಷನ್‌ ಕಾಯ್ದೆ ಹಾಗೂ ಕರ್ನಾಟಕ ಭೂ ಕಬಳಿಕೆ ನಿಷೇಧ ಕಾಯ್ದೆಯಡಿ ತನಿಖೆ ನಡೆಸಲಿದ್ದಾರೆ.

ಸಿದ್ದರಾಮಯ್ಯ ಹಾಗೂ ಇತರರ ವಿರುದ್ಧ ಲೋಕಾಯುಕ್ತ ಅಧಿಕಾರಿಗಳು 120ಬಿ 120ಬಿ – ಅಪರಾಧಿಕ ಒಳಸಂಚು, 166 – ಯಾವುದೇ ವ್ಯಕ್ತಿಗೆ ಹಾನಿ ಉಂಟು ಮಾಡುವ ಉದ್ದೇಶದಿಂದ ಸಾರ್ವಜನಿಕನೌಕರನು ಕಾನೂನು ಬದ್ದ ಆದೇಶ ಪಾಲಿಸದಿರುವುದು, 403 – ಸ್ವತ್ತಿನ ಅಪ್ರಮಾಣಿಕ ದುರುಪಯೋಗ, 406 – ಅಪರಾಧಿಕ ನಂಬಿಕೆದ್ರೋಹ, 420 – ವಂಚನೆ ಮಾಡುವುದು ಮತ್ತು ಸ್ವತ್ತನ್ನ ನೀಡಲು ಅಪ್ರಾಮಾಣಿಕವಾಗಿ ಪ್ರೇರೇಪಿಸುವುದು, 426 – ಕೇಡಿನ ಅಪರಾಧಕ್ಕಾಗಿ ದಂಡನೆ, 465 – ಖೋಟಾ ತಯಾರಿಕೆಗೆ ದಂಡನೆ, 468 – ವಂಚನೆಯ ಉದ್ದೇಶಕ್ಕಾಗಿ ಖೋಟಾ ತಯಾರಿಕೆ, 340 – ಅಕ್ರಮ ಬಂಧನ, 351 – ಹಲ್ಲೆ ಕಾನೂನುನಡಿ ತನಿಖೆ ನಡೆಯಲಿದೆ.
ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ 1988, ಪಿಸಿ ಆಕ್ಟ್‌ 9 – ಸಾರ್ವಜನಿಕ ಸೇವಕನ ಮೇಲೆ ಪ್ರಭಾವ ಬೀರುವ ಮೂಲಕ ಅನುಕೂಲತೆ ಸ್ವೀಕಾರದ ಅಪರಾಧದ ಬಗ್ಗೆ ತಿಳಿಸುತ್ತದೆ.

ಪಿಸಿ ಆಕ್ಟ್‌ 13 – ಸಾರ್ವಜನಿಕ ಸೇವಕನಿಂದ ಕ್ರಿಮಿನಲ್‌ ದುರ್ನಡತೆಯ ಬಗ್ಗೆ ವ್ಯವಹರಿಸುತ್ತದೆ, ಬೇನಾಮಿ ಪ್ರಾಪರ್ಟಿ ಟ್ರಾನ್ಸಾಕ್ಷನ್‌ ಆ್ಯಕ್ಟ್‌ -1988 ಸೆಕ್ಷನ್‌ 3 – ಬೇನಾಮಿ ವಹಿವಾಟುಗಳ ನಿಷೇಧ ಮತ್ತು ಪ್ರವೇಶಕ್ಕೆ ಶಿಕ್ಷೆ, ಸೆಕ್ಷನ್‌ 53 – ಬೇನಾಮಿ ದಂಡದ ಬಗ್ಗೆ ಹಾಗೂ ಸೆಕ್ಷನ್‌ 54 – ಸುಳ್ಳು ಮಾಹಿತಿ ನೀಡುವುದಕ್ಕೆ ದಂಡದ ಬಗ್ಗೆ ತಿಳಿಸುತ್ತದೆ. ಕರ್ನಾಟಕ ಭೂ ಕಬಳಿಕೆ ನಿಷೇಧ ಕಾಯ್ದೆ – 2011, ಸೆಕ್ಷನ್‌ 3 – ಎಲ್ಲಾ ರೀತಿಯ ಭೂಕಬಳಿಕೆ ನಿಷೇಧ ಮತ್ತು ಕಾನೂನು ಬಾಹಿರ, ಸೆಕ್ಷನ್‌ 4- ಯಾವುದೇ ವ್ಯಕ್ತಿ ಸ್ವತಃ ಅಥವಾ ಇನ್ನೊಬ್ಬ ವ್ಯಕ್ತಿಯ ಮೂಲಕ ಭೂ ಕಬಳಿಕೆ ಮಾಡುವಂತಿಲ್ಲ.

RELATED ARTICLES

Latest News