Friday, October 11, 2024
Homeರಾಜ್ಯಸಿದ್ದರಾಮಯ್ಯ ಪ್ರಕರಣ ದಾಖಲಿಸಲು ಅಧಿಕಾರಿಗಳು ಹಿಂದೇಟು..

ಸಿದ್ದರಾಮಯ್ಯ ಪ್ರಕರಣ ದಾಖಲಿಸಲು ಅಧಿಕಾರಿಗಳು ಹಿಂದೇಟು..

ಬೆಂಗಳೂರು, ಸೆ.26- ಮುಡಾ ಪ್ರಕರಣದಲ್ಲಿ ಜನಪ್ರತಿನಿಧಿಗಳ ನ್ಯಾಯಾಲಯದ ತೀರ್ಪಿನ ಹೊರತಾಗಿಯೂ ಪ್ರಕರಣ ದಾಖಲಿಸಲು ಸಂಬಂಧ ಪಟ್ಟ ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ ಎಂದು ದೂರುದಾರ ಸ್ನೇಹಮಯಿ ಕೃಷ್ಣ ಆರೋಪಿಸಿದ್ದಾರೆ. ಈ ಸಂಜೆಯೊಂದಿಗೆ ಮಾತನಾಡಿದ ಅವರು, ನ್ಯಾಯಾಲಯದ ತೀರ್ಪಿನ ಪ್ರತಿಯನ್ನು ತಾವು ಮೈಸೂರು ಲೋಕಾಯುಕ್ತ ಪೊಲೀಸರಿಗೆ ತಲುಪಿಸಿದ್ದು, ಪ್ರಕರಣ ದಾಖಲಿಸಲು ಮೀನಾಮೇಷ ಎಣಿಸಲಾಗುತ್ತಿದೆ ಎಂದು ಅಸಮಾದಾನ ವ್ಯಕ್ತಪಡಿಸಿದರು.

ಮೈಸೂರು ಲೋಕಾಯುಕ್ತದ ಎಸ್‌‍ಪಿ ಅವರು ಕೈಗೆ ಸಿಗುತ್ತಿಲ್ಲ. ಜೊತೆಗೆ ಯಾವ ಸಿಬ್ಬಂದಿಗಳು ಸರಿಯಾಗಿ ಸ್ಪಂದಿಸುತ್ತಿಲ್ಲ. ಈ ಬಗ್ಗೆ ಲೋಕಾಯುಕ್ತದ ಹಿರಿಯ ಅಧಿಕಾರಿಗಳಿಗೂ ತಾವು ಕರೆ ಮಾಡಿ ಮಾಹಿತಿ ನೀಡಿದ್ದೇನೆ. ಆದರೂ ಪ್ರಯೋಜನವಾಗಿಲ್ಲ ಎಂದು ದೂರಿದರು.
ಇನ್ನೂ ಅರ್ಧಗಂಟೆ ಕಾಲ ಕಾಯುತ್ತೇನೆ ಅನಂತರವೂ ಅಧಿಕಾರಿಗಳು ಸ್ಪಂದಿಸದೆ ಇದ್ದರೆ, ಸಂಬಂಧ ಪಟ್ಟ ಪೊಲೀಸ್‌‍ ಠಾಣೆಗೆ ಲೋಕಾಯುಕ್ತ ಎಸ್‌‍ಪಿ ಕಾಣೆಯಾಗಿದ್ದಾರೆ ಎಂದು ದೂರು ನೀಡುತ್ತೇನೆ ಹಾಗೂ ನ್ಯಾಯಾಲಯದ ಗಮನಕ್ಕೆ ತರುತ್ತೇನೆ ಎಂದು ಹೇಳಿದರು.

ಸ್ನೇಹಮಯಿ ಕೃಷ್ಣ ಅವರು ಇಂದು ಮೈಸೂರು ಲೋಕಾಯುಕ್ತ ಪೊಲೀಸ್‌‍ ಠಾಣೆ ಭೇಟಿ ನೀಡುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿ, ನ್ಯಾಯಾಲಯದ ಆದೇಶದ ಪ್ರಕಾರ ಇಂದು ನಾಲ್ಕು ಪ್ರತ್ಯೇಕ ಕಾಯ್ದೆಗಳ ವಿವಿಧ ಕಲಂಗಳಡಿಯಲ್ಲಿ ಪ್ರಕರಣ ದಾಖಲಿಸಬೇಕಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಅವರ ಪತ್ನಿ ಪಾರ್ವತಿ, ಬಾಮೈದ ಮಲ್ಲಿಕಾರ್ಜುನಸ್ವಾಮಿ, ಹಾಗೂ ಜಮೀನಿನ ಮಾಲೀಕ ದೇವರಾಜು ಹಾಗೂ ಇತರ ಅಧಿಕಾರಿ ವಿರುದ್ಧ ನಾವು ದೂರು ನೀಡಿದ್ದೇವೆ. ಅದರ ಪ್ರಕಾರವೇ ಪ್ರಕರಣ ದಾಖಲಿಸಬೇಕಿದೆ ಎಂದರು.

ಲೋಕಾಯುಕ್ತ ರಾಜ್ಯಸರ್ಕಾರದ ವ್ಯಾಪ್ತಿಯಲ್ಲಿದೆ. ಹಿಗಾಗಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾದಾಗ ನಿಷ್ಪಕ್ಷಪಾತ ತನಿಖೆ ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ಸಿಬಿಐ ತನಿಖೆೆಗೆ ಒಪ್ಪಿಸಬೇಕೆಂದು ಒಂದೆರೆಡು ದಿನಗಳಲ್ಲಿ ಹೈಕೋರ್ಟ್‌ ಮೆಟ್ಟಿಲೇರುವುದಾಗಿ ತಿಳಿಸಿದರು.

RELATED ARTICLES

Latest News