Saturday, November 2, 2024
Homeರಾಜ್ಯಮುಡಾ ಹಗರಣ : ಬೆಂಗಳೂರು, ಮೈಸೂರು ಸೇರಿದಂತೆ ಒಟ್ಟು 9 ಕಡೆ ಇಡಿ ದಾಳಿ

ಮುಡಾ ಹಗರಣ : ಬೆಂಗಳೂರು, ಮೈಸೂರು ಸೇರಿದಂತೆ ಒಟ್ಟು 9 ಕಡೆ ಇಡಿ ದಾಳಿ

Muda Scam: ED Raid9 locations including Bangalore, Mysore

ಬೆಂಗಳೂರು,ಅ.28- ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕುರ್ಚಿಯನ್ನೇ ಅಲುಗಾಡಿಸುತ್ತಿರುವ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ) ಅಕ್ರಮ ನಿವೇಶನ ಹಂಚಿಕೆ ಸಂಬಂಧ ಜಾರಿ ನಿರ್ದೇಶನಾಲಯ(ಇಡಿ)ದ ಅಧಿಕಾರಿಗಳು ಇಂದು ಬೆಂಗಳೂರು, ಮೈಸೂರು ಸೇರಿದಂತೆ ಒಟ್ಟು 9 ಕಡೆ ದಾಳಿ ನಡೆಸಿದ್ದಾರೆ. ಇದೇ ವೇಳೆ ಮೈಸೂರಿನ ದಟ್ಟಗಳ್ಳಿ, ಶ್ರೀರಾಮಪುರ, ಮೇಟಗಳ್ಳಿಗಳಲ್ಲಿ ದಾಳಿ ನಡೆಸಲಾಗಿದೆ. ಮೇಟಗಳ್ಳಿಯ ಮುಡಾ ಅಧಿಕಾರಿ ಮಂಜುನಾಥ್ ಅವರ ಮನೆ ಮೇಲೆ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸಿದ್ದಾರೆ.ಬೆಂಗಳೂರಿನ ಜೆಪಿನಗರದಲ್ಲಿರುವ ಬಿಲ್ಡರ್ ಎನ್.ಮಂಜುನಾಥ್ ಮನೆ ಮೇಲೆ ಬೆಳಗ್ಗೆ 7 ಗಂಟೆಗೆ ಆರು ಅಧಿಕಾರಿಗಳ ತಂಡ ಏಕಾಏಕಿ ದಾಳಿ ನಡೆಸಿತು.

ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿರುವ ಎನ್.ಕೆ.ಕಾರ್ತಿಕ್ ಡೆವಲಪರ್ರಸ ಮೂಲಕ ಮೈಸೂರಿನ ಮುಡಾದಲ್ಲಿಕಾರ್ತಿಕ್ ಬಡಾವಣೆ ನಿರ್ಮಿಸಿ 50:50ರ ಅನುಪಾತದಲ್ಲಿ ನಿವೇಶನ ಹಂಚಿಕೆ ಮಾಡಿದ್ದರು. ನಿವೇಶನ ಮಂಜೂರಾತಿ ಮಾಡುವಾಗ ಮುಡಾ ಅಧಿಕಾರಿಗಳಿಗೆ ಭಾರೀ ಪ್ರಮಾಣದ ಲಂಚ ನೀಡಿದ ಆರೋಪದ ಹಿನ್ನಲೆಯಲ್ಲಿ ದಾಳಿ ನಡೆಸಲಾಗಿದೆ ಎಂದು ತಿಳಿದುಬಂದಿದೆ.

ಈ ವೇಳೆ ಮನೆಯಲ್ಲೇ ಇದ್ದ ಮಂಜುನಾಥ್ ಇ.ಡಿ ಅಧಿಕಾರಿಗಳ ದಾಳಿ ಕಂಡು ಒಂದು ಕ್ಷಣ ದಿಗ್ಬ್ರಾಂತರಾದರು. ಮತ್ತೊಂದು ತಂಡ ಸದಾಶವಿನಗರದ ಬಿಲ್ಡರ್ ಒಬ್ಬರ ನಿವಾಸ, ಕಚೇರಿ ಮೇಲೆ ದಾಳಿ ನಡೆಸಿ ಕೆಲವು ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.

ಬಿಲ್ಡರ್ ಮಂಜುನಾಥ್ ಅವರ ಪಿಎ ಕಾರಿನಲ್ಲಿ 30 ಲಕ್ಷ ದುಡ್ಡು ಎಣಿಸುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ಲಾಗಿತ್ತು. ಮಂಜುನಾಥ್ 40ಕ್ಕೂ ಹೆಚ್ಚು ನಿವೇಶನ ಪಡೆದಿದ್ದಾರೆ ಎಂದು ಆರೋಪಿಸಲಾಗಿತ್ತು. ಸ್ನೇಹಮಯಿ ಕೃಷ್ಣ ಅವರು ಮೈಸೂರಿನ ಲೋಕಾಯುಕ್ತ ಕಚೇರಿಗೆ ತೆರಳಿ ಬಿಲ್ಡರ್ ಮಂಜುನಾಥ್ ವಿರುದ್ಧ ದೂರು ಸಲ್ಲಿಸಿದ್ದರು. ಲೋಕಾಯುಕ್ತ ಎಸ್ಪಿ ಟಿ.ಜೆ.ಉದೇಶ್ಗೆ ದೂರು ಸಲ್ಲಿಕೆ ಮಾಡಿ ಮಂಜುನಾಥ್ಗೆ ಈ ಹಿಂದೆ ಆಯುಕ್ತರಾಗಿದ್ದ ನಟೇಶ್ ದಿನೇಶ್ ಅಕ್ರಮವಾಗಿ ಸೈಟುಗಳನ್ನು ನೀಡಿದ್ದಾರೆ ಎಂದು ಆರೋಪಿಸಿದ್ದರು.ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪ ಅವರ ಅಣ್ಣನ ಪುತ್ರ ನವೀನ್ ಬೋಸ್, ಮುಡಾದ ಮಾಜಿ ಅಧ್ಯಕ್ಷ ಮರಿಗೌಡ, ಸಂಬಂಧಿಗೂ ನಿವೇಶನ ನೀಡಲಾಗಿದೆ.

ನಿವೇಶನಗಳಲೆಲ್ಲವೂ ಅಕ್ರಮವಾಗಿ ಪಡೆದಿರುವುದರಿಂದ ಬಿಲ್ಡರ್ ಮಂಜುನಾಥ್ ಸೇರಿ ಹಲವಾರ ವಿರುದ್ಧ ಕ್ರಮ ಆಗಬೇಕು ಎದು ಮೈಸೂರಿನಲ್ಲಿ ಸ್ನೇಹಮಯಿ ಕೃಷ್ಣ ಆಗ್ರಹಿಸಿದ್ದರು. ವಿಶೇಷವೆಂದರೆ ಮೂರು ದಿನಗಳ ಹಿಂದಷ್ಟೇ ಲೋಕಾಯುಕ್ತ ಅಧಿಕಾರಿಗಳು ಇದೇ ಪ್ರಕರಣ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪತ್ನಿ ಪಾರ್ವತಿ ಅವರನ್ನು ವಿಚಾರಣೆ ನಡೆಸಿದ್ದರು.

ರಾಜ್ಯದಲ್ಲಿ ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ನಡೆಯುತ್ತಿರುವ ಬೆನ್ನಲ್ಲೇ ಇಡಿ ಅಧಿಕಾರಿಗಳ ದಾಳಿ ಮಹತ್ವ ಪಡೆದುಕೊಂಡಿದೆ. ಮತ್ತೊಂದು ವಿಶೇಷವೆಂದರೆ ಶನಿವಾರವಷ್ಟೇ ಮುಡಾದ ಆರು ಅಧಿಕಾರಿಗಳನ್ನು ವಿಚಾರಣೆ ನಡೆಸಿ ಮಾಹಿತಿ ಪಡೆದಿದ್ದರು. ಅವರ ಹೇಳಿಕೆ ಆಧಾರದ ಮೇಲೆ ದಾಳಿ ನಡೆದಿರುವ ಸಾಧ್ಯತೆ ಇದೆ ಎಂದು ವಿಶ್ವಾಸನೀಯ ಮೂಲಗಳು ತಿಳಿಸಿವೆ.

ಬೆಂಗಳೂರಿನಲ್ಲಿ ಬಿಲ್ಡರ್ ಮನೆ ಮೇಲೆ ನಡೆದಿರುವ ದಾಳಿಯ ವಿವರಗಳು ಸಂಪುರ್ಣವಾಗಿ ಲಭ್ಯವಾಗಿಲ್ಲ. ಬೆಳಗ್ಗೆಯೇ ಅಧಿಕಾರಿಗಳ ತಂಡ ಏಕಕಾಲಕ್ಕೆ ಎರಡು ಕಡೆ ದಾಳಿ ನಡೆಸಿದ್ದಾರೆ. ಸಣ್ಣ ವಿಷಯವೂ ಕೂಡ ಹೊರ ಹೋಗದಂತೆ ಗೌಪ್ಯತೆ ಕಾಪಾಡಿಕೊಳ್ಳಲಾಗಿತ್ತು.ಕಳೆದ ಅ.18ರಂದು ಇ.ಡಿ ಅಧಿಕಾರಿಗಳು ಮೈಸೂರಿನ ಮುಡಾ ಕಚೇರಿ ಮತ್ತು ಇತರ ಕೆಲವು ಸ್ಥಳಗಳಲ್ಲಿ ದಾಳಿ ನಡೆಸಿದ್ದರು. ಕಳೆದ ವಾರ ಬೆಂಗಳೂರಿನ ವಲಯ ಕಚೇರಿಯಲ್ಲಿ ಮುಡಾದ ಕೆಲವು ಕೆಳಹಂತದ ಅಧಿಕಾರಿಗಳನ್ನು ವಿಚಾರಣೆಗೊಳಪಡಿಸಿದ್ದರು.

ಈ ಪ್ರಕರಣದಲ್ಲಿ ಇಡಿ ಅಧಿಕಾರಿಗಳು ಲೋಕಾಯುಕ್ತ ಎಫ್ಐಆರ್ಗೆ ಒಳಪಟ್ಟು ಸಿಎಂ ಮತ್ತು ಇತರರನ್ನು ದಾಖಲಿಸಲು ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್ಎ)ಯಡಿ ಇಸಿಐಆರ್ ದಾಖಲಿಸಿಕೊಂಡಿದ್ದಾರೆ.ಸಿಎಂ ಪತ್ನಿ ಪಾರ್ವತಿ ಅವರಿಗೆ ಸೋದರ ಮಲ್ಲಿಕಾರ್ಜುನ ಸ್ವಾಮಿ, ಜಮೀನು ಮಾಲೀಕ ದೇವರಾಜು ಅವರಿಂದ ಜಮೀನು ಖರೀದಿಸಿ ಉಡುಗೊರೆಯಾಗಿ ನೀಡಿದ್ದರ ಕುರಿತು ವಿವಾದ ಉಂಟಾಗಿತ್ತು.

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ 50:50 ಅನುಪಾತದಲ್ಲಿ ನಿವೇಶನ ಹಂಚಿಕೆಯಲ್ಲಿನ ಹಗರಣಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಅವರಿಗೆ ಸಂಕಷ್ಟದ ಮೇಲೆ ಸಂಕಷ್ಟ ಎದುರಾಗಿದೆ. ಎರಡೆರಡು ಸಂಸ್ಥೆಗಳಿಂದ ತನಿಖೆ ಚುರುಕುಗೊಂಡಿದೆ.

ಪಾರ್ವತಿ ಅವರ ಸೋದರ ಮಲ್ಲಿಕಾರ್ಜುನ ಸ್ವಾಮಿ ಅವರಿಗೆ ಜಮೀನು ಮಾರಾಟ ಮಾಡಿದ್ದ ದೇವರಾಜು ಅವರ ಕೆಂಗೇರಿ ನಿವಾಸದಲ್ಲೂ ಇ.ಡಿ ಅಧಿಕಾರಿಗಳು ಶೋಧ ಕಾರ್ಯ ನಡೆಸಿದ್ದರು. ವಿಚಾರಣೆ ಪೂರ್ಣಗೊಳಿಸಿದ್ದ ಇ.ಡಿ ಅಧಿಕಾರಿಗಳು ನಿವೇಶನ ಹಂಚಿಕೆ ಹಗರಣಕ್ಕೆ ಸಂಬಂಧಿಸಿದ ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದಿದ್ದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಬಿ.ಎಂ.ಪಾರ್ವತಿ ಅವರಿಗೆ ನಿವೇಶನ ಹಂಚಿಕೆ ಮಾಡಿದ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯವು (ಇ.ಡಿ) ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಆರು ಅಧಿಕಾರಿಗಳನ್ನು ವಿಚಾರಣೆ ನಡೆಸಿತ್ತು.

ಪ್ರಕರಣಕ್ಕೆ ಸಂಬಂಧಿಸಿದಂತೆ ಮುಡಾದ ವಿವಿಧ ವಿಭಾಗಗಳ ಆರು ಸಿಬ್ಬಂದಿಗೆ, ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆಯ 11(1ಸಿ) ಮತ್ತು 11(1ಇ) ಅಡಿಯಲ್ಲಿ ಸಮನ್‌್ಸ ನೀಡಲಾಗಿತ್ತು. ಮುಡಾ ಕಚೇರಿಯಲ್ಲಿ ನಡೆಸಿದ ಶೋಧ ಕಾರ್ಯದ ವೇಳೆ ಸಂಗ್ರಹಿಸಲಾದ ದಾಖಲೆಗಳನ್ನು ಕಾಲಾನುಕ್ರಮದಲ್ಲಿ ಪರಿಷ್ಕರಿಸಲು ಮತ್ತು ಕೆಲವು ದಾಖಲೆಗಳನ್ನು ವಿವರಿಸಲು ಸೂಚಿಸಲಾಗಿತ್ತು.

ವಿಶೇಷ ತಹಸೀಲ್ದಾರ್ ರಾಜಶೇಖರ್, ಈ ಹಿಂದಿನ ಮುಡಾ ಆಯುಕ್ತರ ಆಪ್ತ ಸಹಾಯಕಿ ಹುದ್ದೆಯಲ್ಲಿದ್ದ ಶ್ರುತಿ, ಎಫ್ಡಿಎಗಳಾದ ಪ್ರಶಾಂತ್, ರವಿ ಕುಮಾರ್ ಮತ್ತು ಇನ್ನೂ ಇಬ್ಬರು ಸಿಬ್ಬಂದಿಗೆ ಸಮನ್‌್ಸ ನೀಡಲಾಗಿತ್ತು. ಮುಡಾ ನಿವೇಶನ ಹಂಚಿಕೆ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ತನಿಖೆ ನಡೆಸಲು ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಅನುಮತಿ ನೀಡಿದ್ದರು. ಹೈಕೋರ್ಟ್ ಏಕಸದಸ್ಯ ಪೀಠವು ರಾಜ್ಯಪಾಲರ ಆದೇಶವನ್ನು ಎತ್ತಿಹಿಡಿದಿತ್ತು. ಪರಿಣಾಮವಾಗಿ ಲೋಕಾಯುಕ್ತ ಪೊಲೀಸರು ಪ್ರಕರಣ ದಾಖಲಿಸಿದ್ದರು.

ಸಿದ್ದರಾಮಯ್ಯ ವಿರುದ್ಧ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅವರು ಇ.ಡಿಗೆ ದೂರು ನೀಡಿದ್ದರು. ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡಿರುವ ಇ.ಡಿ ತನಿಖೆ ನಡೆಸುತ್ತಿದೆ. ಅ.18 ಮತ್ತು 19ರಂದು ಮುಡಾ ಕಚೇರಿ ಮತ್ತು ಮೈಸೂರು ತಾಲ್ಲೂಕು ಕಚೇರಿಯಲ್ಲಿ ಇ.ಡಿ ಅಧಿಕಾರಿಗಳು ಶೋಧಕಾರ್ಯ ನಡೆಸಿದ್ದರು. ಸಾವಿರಾರು ಪುಟಗಳಷ್ಟು ದಾಖಲೆ ಪ್ರತಿಗಳನ್ನು ಕೊಂಡೊಯ್ದಿದ್ದರು.

ಬ್ಯಾಂಕ್ ಖಾತೆ, ಪಾನ್ಕಾರ್ಡ್, ಆಸ್ತಿ ಸೇರಿದಂತೆ ಹಲವು ಮಾಹಿತಿ ತರುವಂತೆ ಸೂಚಿಸಲಾಗಿದೆ. ಇಡಿ ನೋಟಿಸ್ ಹಿನ್ನೆಲೆಯಲ್ಲಿ ಇಂದು ಬೆಂಗಳೂರು ಇಡಿ ಕಚೇರಿ ಪ್ರವೇಶಿಸಲಿರುವ ಮುಡಾ ಸಿಬ್ಬಂದಿ ವಿಚಾರಣೆಗೆ ಒಳಪಡಲಿದ್ದಾರೆ. ಮುಡಾದಲ್ಲಿ ನಡೆದಿರುವ ಅಕ್ರಮ ಪತ್ತೆಗೆ ಇಡಿಯಿಂದ ಸ್ಪೆಷಲ್ ಸಾಫ್‌್ಟವೇರ್ ಬಳಸಲಾಗಿದೆ. 5ರಿಂದ 6 ಸಾವಿರ ನಿವೇಶನಗಳ ಡಿಜಿಟಲೈಸ್ ದಾಖಲೆಗಳು, 8 ಸಾವಿರ ದಾಖಲಾತಿ ಪುಟಗಳನ್ನು ಆಧರಿಸಿ ತನಿಖೆ ನಡೆಸಲಾಗುತ್ತಿದೆ.

ಕಳೆದ ವಾರ 2 ದಿನಗಳ ಇಡಿ ದಾಳಿ ನಡೆಸಿ 8,000 ಪುಟಗಳ ದಾಖಲೆ ವಶಪಡಿಸಿಕೊಂಡಿತ್ತು. ಇದರ ಬೆನ್ನಲ್ಲೇ ರಾಜಕಾರಣಿಗಳು, ಅಧಿಕಾರಿಗಳು, ಆಡಳಿತ ಮಂಡಳಿ ಸದಸ್ಯರು, ನೌಕರರು ಹಾಗೂ ಕುಟುಂಬಸ್ಥರ ಎದೆಯಲ್ಲಿ ಢವ-ಢವ ಸೃಷ್ಟಿಯಾಗಿದೆ. ಯಾರ ಹೆಸರಿನಲ್ಲಿ ಸ್ಥಿರಾಸ್ತಿ ನೋಂದಣಿಯಾಗಿದೆ? ನಿವೇಶನಗಳ ಖರೀದಿ, ಹಣಕಾಸು ವ್ಯವಹಾರ, ಮಾರಾಟ, ವರ್ಗಾವಣೆ ಕುರಿತು ಇ.ಡಿ.ಯಿಂದ ಶೋಧ ನಡೆಯುತ್ತಿದೆ.

ಆಪ್ತರು ಬೇನಾಮಿ ಹೆಸರಲ್ಲಿ ಆಸ್ತಿ ಮಾಡಿಕೊಂಡಿರುವ ಪತ್ತೆ ಕಾರ್ಯ ಮುಂದುವರೆದಿದ್ದು, 2020ರಿಂದ ಈಚೆಗೆ ನೋಂದಣಿ ಆಗಿರುವ ಆಸ್ತಿಗಳು ಪತ್ತೆಯಾಗಿವೆ. ಮೊಬೈಲ್ ನಂಬರ್, ಆಧಾರ್ ನಂಬರ್ಗಳ ಮೂಲಕ ಪತ್ತೆ ಕಾರ್ಯ ನಡೆಯುತ್ತಿದೆ. ದಾಖಲಾತಿಗಳ ಮೂಲಕ ವಂಶವೃಕ್ಷ ಕೂಡ ಶೋಧ ನಡೆದಿದೆ.

ಎಲ್ಲರ ಮೊಬೈಲ್ ನಂಬರ್ ಸಂಗ್ರಹ:
ಮುಡಾದ ಮಾಜಿ ಅಧ್ಯಕ್ಷರು, ಮಾಜಿ ಹಾಗೂ ಹಾಲಿ ಆಯುಕ್ತರು, ಆಡಳಿತ ಮಂಡಳಿ ಸದಸ್ಯರು, ಮಾಜಿ ಸದಸ್ಯರು, ಕಾರ್ಯದರ್ಶಿ, ಮಾಜಿ ಕಾರ್ಯದರ್ಶಿಗಳು, ವಿಶೇಷ ಭೂ ಸ್ವಾಧೀನ ಅಧಿಕಾರಿಗಳು, ನಗರ ಯೋಜಕ ಸಿಬ್ಬಂದಿಗಳು, ವಿಶೇಷ ತಹಸೀಲ್ದಾರ್ಗಳು, ವಲಯಾಧಿಕಾರಿಗಳು, ಮುಖ್ಯ ಲೆಕ್ಕಾಧಿಕಾರಿಗಳು, ಸೈಟ್ ಸೆಕ್ಷನ್ ಅಧಿಕಾರಿಗಳು, ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುವ ನೌಕರರು , ಡಿ ಗ್ರೂಪ್ಗೆ ಸೇರಿದ ಮುಡಾದ ಎಲ್ಲಾ ಸಿಬ್ಬಂದಿ ಮತ್ತು ಅವರ ಸಂಬಂಧಿಕರ ಫೋನ್ ನಂಬರ್ಗಳನ್ನು ಸಂಗ್ರಹಿಸಲಾಗಿದೆ. ಇದರ ಜೊತೆಗೆ ಡೀಲರ್ಗಳು, ಮಧ್ಯವರ್ತಿಗಳ ನಂಬರ್ ಕೂಡ ಸಂಗ್ರಹ ಮಾಡಲಾಗಿದ್ದು, 2020 ರಿಂದ 2023ರರೆಗೆ ಯಾರ ಯಾರ ಸಂಪರ್ಕದಲ್ಲಿದ್ದರು ಎಂಬುದರ ತನಿಖೆ ನಡೆಯುತ್ತಿದೆ.

RELATED ARTICLES

Latest News