ಬೆಂಗಳೂರು,ಅ.28- ಮುಡಾ ಅಕ್ರಮ ನಿವೇಶನ ಹಂಚಿಕೆ ಸಂಬಂಧ ಮಾಹಿತಿ ಹಕ್ಕುದಾರ ಗಂಗರಾಜು ಅವರು ಜಾರಿ ನಿರ್ದೇಶನಾಲಯ(ಇ.ಡಿ) ಅಧಿಕಾರಿಗಳಿಗೆ 1200 ಪುಟಗಳ ದಾಖಲೆಗಳನ್ನು ನೀಡಿದ್ದಾರೆ. ವಿಚಾರಣೆಗೆ ಹಾಜರಾಗಬೇಕೆಂದು ಇ.ಡಿ ಸಮನ್ಸ್ ಜಾರಿ ಮಾಡಿದ ಹಿನ್ನಲೆಯಲ್ಲಿ ಇಂದು ಬೆಳಗ್ಗೆ 10 ಗಂಟೆಗೆ ನಗರದ ಶಾಂತಿನಗರದಲ್ಲಿರುವ ಕಚೇರಿಗೆ ಆಗಮಿಸಿದ ಅವರು ಸುಮಾರು ಮೂರು ಗಂಟೆಗಳ ಕಾಲ ವಿಚಾರಣೆ ಎದುರಿಸಿದರು. ಈ ವೇಳೆ ಗಂಗಾರಾಜು ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಸಂಬಂಧಿಕರು ಮುಡಾ ಪ್ರಕರಣದಲ್ಲಿ ಭಾಗಿಯಾಗಿದ್ದರ ಕುರಿತು ಸುಮಾರು 1200 ಪುಟಗಳ ದಾಖಲೆಗಳನ್ನು ಹಸ್ತಾಂತರ ಮಾಡಿದ್ದಾರೆ.
ಸಿದ್ದರಾಮಯ್ಯ, ಪತ್ನಿ ಪಾವರ್ತಿ, ಪುತ್ರ ಯತೀಂದ್ರ, ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಹಾಗೂ ಮುಡಾದಲ್ಲಿರುವ ಕೆಲವು ಅಧಿಕಾರಿಗಳು ಈ ಪ್ರಕರಣದಲ್ಲಿ ಶಾಮೀಲಾಗಿ ಸಾವಿರಾರು ಕೋಟಿ ಅಕ್ರಮ ಎಸಗಿದ್ದಾರೆಂದು ದೂರು ಕೊಟ್ಟಿದ್ದಾರೆ. ಮಾಹಿತಿ ಹಕ್ಕು ಆಯೋಗ ಹಾಗೂ ವಿವಿಧ ಮೂಲಗಳಿಂದ ಸಂಗ್ರಹಿಸಿದ್ದ ಮೂಲ ದಾಖಲೆಗಳನ್ನು ಇ.ಡಿ ಅಧಿಕಾರಿಗಳಿಗೆ ಗಂಗರಾಜು ತಲುಪಿಸಿರುವುದರಿಂದ ಸಿದ್ದರಾಮಯ್ಯನವರಿಗೆ ಇನ್ನಷ್ಟು ಕಾನೂನಿನ ಕುಣಿಕೆ ಬಿಗಿಯಾಗುವ ಸಾಧ್ಯತೆ ಇದೆ.
ವಿಚಾರಣೆ ಎದುರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಗಂಗರಾಜು ನಾನು ಇ.ಡಿ ಅಧಿಕಾರಿಗಳು ಕೇಳಿದ ದಾಖಲೆಗಳನ್ನು ಹಸ್ತಾಂತರ ಮಾಡಿದ್ದೇನೆ. ಇದರ ಮೇಲೆ ಹಲವರನ್ನು ಬಂಧಿಸಬಹುದೆಂದು ಹೇಳಿದರು. ನಗರಾಭಿವೃದ್ದಿ ಸಚಿವ ಭೈರತಿ ಸುರೇಶ್ ಅವರ ಕಚೇರಿಯಲ್ಲಿ ಡಿಟಿಪಿ ಆಪರೇಟರ್ ಆಗಿ ಕೆಲಸ ಮಾಡುತ್ತಿರುವವರು ಹಾಗೂ ಇನ್ನಿತರರನ್ನು ಇ.ಡಿ ಅಧಿಕಾರಿಗಳು ತಕ್ಷಣವೇ ಬಂಧಿಸಬೇಕು. ಇವರು ಹೊರಗೆ ಇದ್ದಷ್ಟು ದಾಖಲೆಗಳನ್ನು ಮುಚ್ಚಿ ಹಾಕುತ್ತಾರೆ ಎಂದು ಆತಂಕ ವ್ಯಕ್ತಪಡಿಸಿದರು.
ದೇವರಾಜು ವಿಚಾರಣೆ:
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಜಮೀನು ಮಾಲೀಕ ಹಾಗೂ ಪ್ರಕರಣದ 4ನೇ ಆರೋಪಿ ದೇವರಾಜು ಅವರನ್ನು ಸಹ ಇ.ಡಿ ಅಧಿಕಾರಿಗಳು ವಿಚಾರಣೆ ನಡೆಸಿ ಮಾಹಿತಿ ಪಡೆದರು. ವಿಚಾರಣೆಗೆ ಹಾಜರಾಗಬೇಕೆಂದು ಸೂಚನೆ ನೀಡಿದ ಹಿನ್ನಲೆಯಲ್ಲಿ ಶಾಂತಿನಗರದ ಕಚೇರಿಗೆ ಆಗಮಿಸಿದ ದೇವರಾಜು ಪ್ರಕರಣ ಕುರಿತು ಮಾಹಿತಿ ನೀಡಿದ್ದಾರೆ. ಜಮೀನನ್ನು ಯಾವಾಗ ಮಾರಾಟ ಮಾಡಲಾಗಿತ್ತು. ಎಷ್ಟು ದರದಲ್ಲಿ ಮಲ್ಲಿಕಾರ್ಜುನಸ್ವಾಮಿಗೆ ಮಾರಾಟ ಮಾಡಿದ್ದೀರಿ? ಎಂಬುದು ಸೇರಿದಂತೆ ಹಲವಾರು ಪ್ರಶ್ನೆಗಳನ್ನು ಕೇಳಿದ್ದಾರೆಂದು ತಿಳಿದುಬಂದಿದೆ.