ಆ26ರಂದು ಅರಮನೆಗೆ ಪ್ರವೇಶಿಸಲಿವೆ ಜಂಬೂ ಸವಾರಿ ಆನೆಗಳ ಟೀಮ್

ಮೈಸೂರು, ಆ.23- ಕಾಡಿನಿಂದ ನಾಡಿಗೆ ಆಗಮಿಸಿರುವ ಕ್ಯಾಪ್ಟನ್ ಅರ್ಜುನ್ ನೇತೃತ್ವದ ಗಜಪಡೆಯನ್ನು ಆಗಸ್ಟ್ 26ರಂದು ಅರಮನೆಗೆ ಬರಮಾಡಿಕೊಳ್ಳಲಾಗುತ್ತದೆ. ಹುಣಸೂರಿನ ವೀರನಹೊಸಹಳ್ಳಿಯಿಂದ ನಿನ್ನೆ ನಗರಕ್ಕೆ ಆಗಮಿಸಿದ ಚಿನ್ನದ ಅಂಬಾರಿ ಹೊರುವ ಅರ್ಜುನ, ವಿಜಯ, ಅಭಿಮನ್ಯು, ವರಲಕ್ಷ್ಮಿ, ಧನಂಜಯ ಮತ್ತು ಈಶ್ವರ ಆನೆಗಳು ನಗರದ ಅರಣ್ಯ ಭವನದಲ್ಲಿ ವಿಶ್ರಾಂತಿ ಪಡೆಯುತ್ತಿವೆ. ಎಲ್ಲ ಆನೆಗಳು ಆರೋಗ್ಯವಾಗಿವೆ ಎಂದು ಆನೆಗಳ ವೈದ್ಯರಾದ ಡಾ.ನಾಗರಾಜ್ ತಿಳಿಸಿದ್ದಾರೆ.

ಅರಣ್ಯ ಭವನಕ್ಕೆ ನಿನ್ನೆ ಸಂಜೆ ಆನೆಗಳು ಆಗಮಿಸುತ್ತಿದ್ದಂತೆ ಸುತ್ತಮುತ್ತಲಿನ ನಿವಾಸಿಗಳು ದಾವಿಸಿ ಆನೆಗಳೊಂದಿಗೆ ಸೆಲ್ಫಿ ತೆಗೆಸಿಕೊಳ್ಳಲು ಮುಗಿಬಿದ್ದರು.
ಇದೇ ಸೋಮವಾರ ಅಧಿಕಾರಿಗಳು ಹಾಗೂ ಸಿಬ್ಬಂದಿ ಆನೆಗಳಿಗೆ ಪೂಜೆ ಸಲ್ಲಿಸಿ ಬೀಳ್ಕೊಡುತ್ತಾರೆ.

ನಂತರ ಅಶೋಕಪುರಂ ರಸ್ತೆ ಮೂಲಕ ಹಾದು ರಾಮಸ್ವಾಮಿ ವೃತ್ತ, ಚಾಮರಾಜ ಜೋಡಿ ರಸ್ತೆಯಲ್ಲಿ ಸಾಗಿ ಅರಮನೆಯ ಜಯಮಾರ್ತಾಂಡ ದ್ವಾರದ ಬಳಿ ಆನೆಗಳಿಗೆ ಪೂಜೆ ಸಲ್ಲಿಸಿ ಮಂಗಳವಾದ್ಯದೊಂದಿಗೆ ಅರಮನೆಗೆ ಜನಪ್ರತಿನಿಧಿಗಳು, ಅಧಿಕಾರಿಗಳು ಬರಮಾಡಿಕೊಳ್ಳಲಿದ್ದಾರೆ.

ಆನಂತರ ಪ್ರತಿದಿನ ಬೆಳಗ್ಗೆ ಹಾಗೂ ಸಂಜೆ ವೇಳೆ ಆನೆಗಳನ್ನು ಅರಮನೆಯಿಂದ ಬನ್ನಿಮಂಟಪದವರೆಗೆ ವಾಕಿಂಗ್ ಮಾಡಿಸಿ ನಗರದ ಪರಿಸರಕ್ಕೆ ಹೊಂದಿಕೊಳ್ಳುವಂತೆ ಮಾಡಲಾಗುತ್ತದೆ.