ಕಲಬುರಗಿ,ಸೆ.17- ನಾಗಮಂಗಲದ ಗಲಭೆ ಪ್ರಕರಣವನ್ನು ಎನ್‌ಐಎ ತನಿಖೆಗೆ ವಹಿಸಬೇಕೆಂದು ಬಿಜೆಪಿಯ ಆಗ್ರಹವನ್ನು ಗೃಹಸಚಿವ ಡಾ.ಜಿ.ಪರಮೇಶ್ವರ್ ತಳ್ಳಿಹಾಕಿದ್ದಾರೆ.ಕಲಬುರಗಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ತನಿಖೆ ನಡೆಯುತ್ತಿದೆ. ಕರ್ತವ್ಯಲೋಪಕ್ಕೆ ಹೊಣೆ ಮಾಡಿ ಡಿವೈಎಸ್ಪಿ ಹಾಗೂ ಇನ್ಸ್ ಪೆಕ್ಟರ್‌ರನ್ನು ಅಮಾನತುಪಡಿಸಲಾಗಿದೆ ಎಂದರು.
ಘಟನೆಯಲ್ಲಿ ಭಾಗಿಯಾಗಿದ್ದರೆ ಯಾರನ್ನೂ ರಕ್ಷಣೆ ಮಾಡುವುದಿಲ್ಲ. ಹಾಗೆಯೇ ಅನಗತ್ಯವಾಗಿ ಯಾರನ್ನೂ ಹೊಣೆ ಮಾಡುವುದಿಲ್ಲ. ತನಿಖೆಯ ವರದಿ ಬಂದ ಬಳಿಕ ಮತ್ತಷ್ಟು ಕಠಿಣ ಕ್ರಮ ಜರುಗಿಸಲಾಗುವುದು ಎಂದರು.ಘಟನೆ ನಡೆದ ತಕ್ಷಣವೇ ರಾಜ್ಯಸರ್ಕಾರ ತುರ್ತು ಕ್ರಮಗಳನ್ನು ಕೈಗೊಂಡಿದೆ.
ಇದ್ಯಾವುದನ್ನೂ ಲಘುವಾಗಿ ಪರಿಗಣಿಸಿಲ್ಲ. ಹೊರಗಿನಿಂದ ಬಂದವರು ಘಟನೆಯಲ್ಲಿ ಭಾಗಿಯಾಗಿದ್ದರೆ ಅವರ ವಿರುದ್ಧವೂ ಕ್ರಮ ಜರುಗಿಸಲಾಗುವುದು. ತನಿಖೆ ನಡೆದು, ಸ್ಪಷ್ಟ ಮಾಹಿತಿ ತಿಳಿಯುವವರೆಗೂ ಏನನ್ನೂ ಹೇಳಲು ಸಾಧ್ಯವಿಲ್ಲ ಎಂದು ಹೇಳಿದರು.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ವಿಫಲವಾಗಿದೆ. ನಾಗಮಂಗಲದ ಘಟನೆಯನ್ನು ಎನ್‌ಐಎ ತನಿಖೆಗೆ ವಹಿಸಬೇಕೆಂದು ಬಿಜೆಪಿಯವರು ಹೇಳಿದ್ದಾರೆ. ಅವರು ಹೇಳುವುದಕ್ಕಾಗಿಯೇ ಇದ್ದಾರೆ. ನಾವು ಸೂಕ್ತ ಕ್ರಮಗಳನ್ನು ಕೈಗೊಳ್ಳುತ್ತೇವೆ ಎಂದರು.
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್ ಅವರಿದ್ದ ಜೈಲಿನಲ್ಲಿ ಮೊಬೈಲ್ ಪತ್ತೆಯಾದ ಬಗ್ಗೆ ಪ್ರತಿಕ್ರಿಯಿಸಿದ ಪರಮೇಶ್ವರ್, ಈ ಹಿಂದೆ ಬೆಂಗಳೂರಿನ ಪರಪ್ಪನ ಅಗ್ರಹಾರದ ಜೈಲಿನಲ್ಲಿದ್ದಾಗ ಅನಪೇಕ್ಷಿತ ಆತಿಥ್ಯಕ್ಕೆ ಸಂಬಂಧಪಟ್ಟಂತೆ ಕಠಿಣ ಕ್ರಮ ಕೈಗೊಳ್ಳಲಾಗಿದೆ. 11 ಮಂದಿ ಹಿರಿಯ ಅಧಿಕಾರಿಗಳನ್ನು ಅಮಾನತುಗೊಳಿಸಿದ್ದೇವೆ. ದರ್ಶನ್ ಮತ್ತು ಸಂಗಡಿಗರನ್ನು ಬೇರೆಬೇರೆ ಜೈಲುಗಳಿಗೆ ಸ್ಥಳಾಂತರಿಸಲಾಗಿದೆ ಎಂದರು.
ಬಳ್ಳಾರಿ ಜೈಲಿನಲ್ಲಿ ಮೊಬೈಲ್ ಪತ್ತೆಯಾದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಯಾರು ಭಾಗಿಯಾಗಿದ್ದಾರೆ ಎಂದು ಪರಿಶೀಲಿಸಲಾಗುವುದು ಎಂದು ತಿಳಿಸಿದರು.ಶಾಸಕ ಮುನಿರತ್ನ ಪ್ರಕರಣದಲ್ಲಿ ಸರ್ಕಾರ ತುರ್ತು ಕ್ರಮಗಳನ್ನು ಕೈಗೊಂಡಿದೆ. ಅದೇ ಕಾಂಗ್ರೆಸ್ ಶಾಸಕ ಚೆನ್ನಾರೆಡ್ಡಿ ಪಾಟೀಲ್ ಅವರ ಪ್ರಕರಣದಲ್ಲಿ ವಿಳಂಬ ಧೋರಣೆ ಅನುಸರಿಸಲಾಗಿದೆ ಎಂಬ ವ್ಯಾಖ್ಯಾನ ಸರಿಯಲ್ಲ. ಮುನಿರತ್ನ ಪ್ರಕರಣದಲ್ಲಿ ದೂರು ದಾಖಲಾಗಿದೆ. ತಕ್ಷಣವೇ ಕ್ರಮ ಕೈಗೊಂಡಿದ್ದೇವೆ ಎಂದರು.