ಬೆಂಗಳೂರು,ಮೇ.16- ನಗರದ ಜನರ ಆರೋಗ್ಯ ಸುಧಾರಣೆ ದೃಷ್ಟಿಯಿಂದ ಬಿಬಿಎಂಪಿ ಆರಂಭಿಸಿರುವ ನಮ್ಮ ಕ್ಲಿನಿಕ್‌ಗೆ ಬಿಗ ಜಡಿಯುವ ಕಾಲ ಬಂದಿದ್ಯಾ ಅಂತ ಅನುಮಾನ ಕಾಡತೊಡಗಿದೆ. ಕಳೆದ ಮೂರ್ನಾಲ್ಕು ತಿಂಗಳುಗಳಿಂದ ನಮ್ಮ ಕ್ಲಿನಿಕ್ ಸಿಬ್ಬಂದಿಗಳಿಗೆ ವೇತನ ಪಾವತಿಸದಿರುವ ಹಿನ್ನೆಲೆಯಲ್ಲಿ ಕ್ಲಿನಿಕ್‌ಗಳು ಬಂದ್ ಆಗುವ ಸಾಧ್ಯತೆಗಳಿವೆ.
ಬಾಕಿ ಇರುವ ವೇತನ ಬಿಡುಗಡೆ ಮಾಡದಿದ್ದರೆ ಮುಂದಿನ ತಿಂಗಳಿನಿಂದ ನಾವು ಕ್ಲಿನಿಕ್ ಕೆಲಸಕ್ಕೆ ಹಾಜರಾಗುವುದಿಲ್ಲ ಎಂದು ಸಿಬ್ಬಂದಿಗಳು ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಮನವಿ ಮಾಡಿಕೊಂಡಿದ್ದಾರೆ. ಅದರೆ, ಸರ್ಕಾರ ಅನುದಾನ ಬಿಡುಗಡೆ ಮಾಡಲು ಮೀನಾಮೇಷ ಎಣಿಸುತ್ತಿರುವುದರಿಂದ ವೇತನ ಬಿಡುಗಡೆ ಅಸಾಧ್ಯ ಎಂಬ ಮಾತು ಕೇಳಿಬರುತ್ತಿದೆ.
ಕಾಂಗ್ರೆಸ್‌ನವರು ಆರಂಭಿಸಿದ್ದ ಇಂದಿರಾ ಕ್ಯಾಂಟಿನ್‌ಗಳಿಗೆ ಬಿಜೆಪಿ ಸರ್ಕಾರ ಅನುದಾನ ಬಿಡುಗಡೆ ಮಾಡಲು ಹಿಂದೇಟು ಹಾಕಿದ್ದಂತೆ ಬಿಜೆಪಿ ಸರ್ಕಾರದ ನಮ್ಮ ಕ್ಲಿನಿಕ್ ಯೋಜನೆಗೆ ಕಾಂಗ್ರೆಸ್‌ನವರು ಅನುದಾನ ನೀಡಲು ವಿಳಂಬ ಮಾಡುತ್ತಿರಬಹುದು ಎಂಬ ಅನುಮಾನ ಕಾಡತೊಡಗಿದೆ.
ನಗರದಲ್ಲಿರುವ 140ಕ್ಕೂ ಹೆಚ್ಚು ನಮ ಕ್ಲಿನಿಕ್‌ಗಳಲ್ಲಿ ವೈದ್ಯರು ಸೇರಿದಂತೆ ಒಂದು ಸಾವಿರಕ್ಕೂ ಹೆಚ್ಚು ಮಂದಿ ಕೆಲಸ ಮಾಡುತ್ತಿದ್ದಾರೆ. ಇದೀಗ ಅವರಿಗೆ ಮೂರು ತಿಂಗಳುಗಳಿಂದ ವೇತನ ಬಿಡುಗಡೆಯಾಗದ ಹಿನ್ನೆಲೆಯಲ್ಲಿ ಕ್ಲಿನಿಕ್‌ಗಳಿಗೆ ಬೀಗ ಜಡಿಯುವ ಸನ್ನಿವೇಶ ಎದುರಾಗಿದೆ.
ದಿನ ಒಂದಿಲ್ಲೊಂದು ರೋಗ ಕಾಣಿಸಿಕೊಳ್ಳುತ್ತಿರುವ ಈ ದಿನಗಳಲ್ಲಿ ಬಡವರು ಮತ್ತು ಕೂಲಿ ಕಾರ್ಮಿಕರಿಗೆ ವರದಾನವಾಗಿದ್ದ ನಮ್ಮ ಕ್ಲಿನಿಕ್‌ಗಳಿಗೆ ಬೀಗ ಜಡಿದರೆ ಖಾಸಗಿ ವೈದ್ಯರು ರೋಗಿಗಳಿಂದ ಮನಸ್ಸೋಇಚ್ಚೆ ಶುಲ್ಕ ಪಡೆಯುವ ಸಾಧ್ಯತೆ ಇರುವುದರಿಂದ ಸರ್ಕಾರ ಕೂಡಲೆ ಎಚ್ಚೆತ್ತು ಕ್ಲಿನಿಕ್‌ಗಳನ್ನು ಮುಚ್ಚದಂತೆ ನೋಡಿಕೊಳ್ಳುವ ಅವಶ್ಯಕತೆ ಇದೆ.
ಆದರೆ ಈ ಆರೋಪಗಳನ್ನು ನಿರಾಕರಿಸಿರುವ ಬಿಬಿಎಂಪಿ ವಿಶೇಷ ಆಯುಕ್ತ ಕಿಶೋರ್ ವಿಕಾಸ್ ಸೂರಳ್ಕರ್ ಅವರು ಮುಂದಿನ ವಾರ ಅನುದಾನ ಬರುತ್ತೆ ಬಾಕಿ ಇರುವ ಮೂರು ತಿಂಗಳ ವೇತನ ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದ್ದಾರೆ.