ಥಾಣೆ, ಸೆ.8- ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ಪರೀಕ್ಷೆಯಲ್ಲಿ ಶೇ.95.7ರಷ್ಟು ಅಂಕ ಗಳಿಸಿದ್ದ 17 ವರ್ಷದ ವಿದ್ಯಾರ್ಥಿಯೊಬ್ಬ ತಾನು ಬಯಸಿದ್ದ ಕಾಲೇಜಿನಲ್ಲಿ ಪ್ರವೇಶ ಸಿಗದ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಮಹಾರಾಷ್ಟ್ರದ ಥಾಣೆ ನಗರದಲ್ಲಿ ನಡೆದಿದೆ.
ಘೋಡ್ಬಂದರ್ ರಸ್ತೆಯ ಹಿರಾನಂದಾನಿ ಎಸ್ಟೇಟ್ನ ಪ್ರತಿಷ್ಠಿತ ವಸತಿ ಸಮುಚ್ಚಯದಲ್ಲಿ ವಿದ್ಯಾರ್ಥಿಯ ಕುಟುಂಬ ವಾಸವಾಗಿತ್ತು. ಸೆ.4ರ ಸಂಜೆ ವಿದ್ಯಾರ್ಥಿ ತನ್ನ ಕುಟುಂಬದ ವಾಟ್ಸ್ಆ್ಯಪ್ ಗುಂಪಿಗೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಸಂದೇಶ ಕಳುಹಿಸಿದ್ದ. ಕುಟುಂಬದವರು ಮಧ್ಯಪ್ರವೇಶಿಸುವಷ್ಟರಲ್ಲಿ ಆತ ಕಟ್ಟಡದಿಂದ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ವಿದ್ಯಾರ್ಥಿಯ ಸಾವಿನ ಹಿಂದೆ ಯಾವುದೇ ದುರುದ್ದೇಶ ಅಥವಾ ಇತರರ ಕೈವಾಡವಿದೆ ಎಂದು ಕುಟುಂಬದವರು ಶಂಕಿಸಿಲ್ಲ. ಶೈಕ್ಷಣಿಕ ಒತ್ತಡದಿಂದಾಗಿ ಆತ ತೀವ್ರ ನಿರ್ಧಾರ ಕೈಗೊಂಡಿರುವ ಸಾಧ್ಯತೆ ಇದೆ ಎಂದು ಕುಟುಂಬದವರು ತಿಳಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಇತ್ತೀಚೆಗೆ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ಪರೀಕ್ಷೆಯಲ್ಲಿ ಶೇ.95.7ರಷ್ಟು ಅಂಕ ಗಳಿಸಿದ್ದ ವಿದ್ಯಾರ್ಥಿ, ಕೊಲ್ಕತ್ತಾದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಎಂಜಿನಿಯರಿಂಗ್ ಸೈನ್ಸ್ ಆ್ಯಂಡ್ ಟೆಕ್ನಾಲಜಿ, ಶಿಬ್ಪುರದಲ್ಲಿ ಬಿಎಸ್-ಎಂಎಸ್ ದ್ವಿಪದವಿ ಪಡೆಯುವ ಆಸೆ ಹೊಂದಿದ್ದ. ಆದರೆ, ಸಂಸ್ಥೆಯ ಪ್ರವೇಶ ಪರೀಕ್ಷೆಯಲ್ಲಿ 10,474ನೇ ರ್ಯಾಂಕ್ ಪಡೆದಿದ್ದರಿಂದ ಪ್ರವೇಶ ಪಡೆಯಲು ಸಾಧ್ಯವಾಗಿರಲಿಲ್ಲ. ಪ್ರತಿಷ್ಠಿತ ಸಂಸ್ಥೆಯಲ್ಲಿ ಸೀಟು ದೊರೆಯದಿರುವುದು ಆತನ ನಿರಾಸೆಯನ್ನು ಮತ್ತಷ್ಟು ಹೆಚ್ಚಿಸಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಸೆ.4ರಂದು ಸಂಜೆ ಸುಮಾರು 7.30ಕ್ಕೆ ಸೈಕ್ಲಿಂಗ್ಗೆ ತೆರಳುವುದಾಗಿ ಕುಟುಂಬದವರಿಗೆ ತಿಳಿಸಿ ವಿದ್ಯಾರ್ಥಿ ಮನೆಯಿಂದ ಹೊರಟಿದ್ದ. ರಾತ್ರಿ 8.15ರ ಸುಮಾರಿಗೆ ಕುಟುಂಬದ ವಾಟ್ಸ್ಆ್ಯಪ್ ಗುಂಪಿಗೆ ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶದ ಸಂದೇಶ ಕಳುಹಿಸಿದ್ದಾನೆ.
ಸಂದೇಶ ಗಮನಿಸಿದ ಕುಟುಂಬದವರು ಆತನ ಮೊಬೈಲ್ ಸ್ವಿಚ್ ಆಫ್ ಆಗಿರುವುದನ್ನು ಗಮನಿಸಿ ಕೂಡಲೇ ಕಾಸರ್ವಡವಲಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಹಾಗೂ ಕುಟುಂಬದವರು ಹುಡುಕಾಟ ನಡೆಸಿದಾಗ, ಅಪಾರ್ಟ್ಮೆಂಟ್ ಸಮೀಪ ವಿದ್ಯಾರ್ಥಿ ಗಂಭೀರವಾಗಿ ಗಾಯಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದ. ತಕ್ಷಣ ಥಾಣೆ ಸಿವಿಲ್ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಆತ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು. ಮೃತ ವಿದ್ಯಾರ್ಥಿಯ ತಂದೆ ನೀಡಿದ ಹೇಳಿಕೆಯ ಆಧಾರದ ಮೇಲೆ ಪೊಲೀಸರು ಆಕಸ್ಮಿಕ ಸಾವು ವರದಿ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
