Homeರಾಜ್ಯಆನ್‌ಲೈನ್‌ನಲ್ಲೇ ಶಾಸಕರ ಆಸ್ತಿ–ದಾಯಿತ್ವ ವಿವರ ಸಲ್ಲಿಸಲು ಲೋಕಾಯುಕ್ತ ಅವಕಾಶ

ಆನ್‌ಲೈನ್‌ನಲ್ಲೇ ಶಾಸಕರ ಆಸ್ತಿ–ದಾಯಿತ್ವ ವಿವರ ಸಲ್ಲಿಸಲು ಲೋಕಾಯುಕ್ತ ಅವಕಾಶ

ಬೆಂಗಳೂರು, ಸೆ.8- ಹದಿನಾರನೇ ವಿಧಾನಸಭೆಗೆ ಆಯ್ಕೆಯಾಗಿರುವ ಶಾಸಕರು 2025-26ನೇ ಸಾಲಿನ ನಂತರದ ಆರ್ಥಿಕ ವರ್ಷಗಳಲ್ಲಿ ತಮ್ಮ ಹಾಗೂ ಕುಟುಂಬದ ಸದಸ್ಯರ ಆಸ್ತಿ ಮತ್ತು ದಾಯಿತ್ವಗಳ ವಿವರಗಳನ್ನು ಕರ್ನಾಟಕ ಲೋಕಾಯುಕ್ತದ ಜಾಲತಾಣದ ಮೂಲಕವೇ ಸಲ್ಲಿಸಬೇಕಾಗಿದೆ.

ಲೋಕಾಯುಕ್ತ ಸಂಸ್ಥೆಯ ಜಾಲತಾಣದ ಮೂಲಕ ಆಸ್ತಿ ಮತ್ತು ದಾಯಿತ್ವಗಳ ಪಟ್ಟಿಯನ್ನು ಸಲ್ಲಿಸಿ, ಅದರ ಮಾಹಿತಿಯನ್ನು ವಿಧಾನಸಭೆ ಸಚಿವಾಲಯಕ್ಕೆ ನೀಡಬೇಕು ಎಂದು ವಿಧಾನಸಭೆ ಕಾರ್ಯದರ್ಶಿ ಎಂ.ಕೆ. ವಿಶಾಲಾಕ್ಷಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

2025-26ನೇ ಸಾಲಿನಲ್ಲಿ ಮಾತ್ರ ಶಾಸಕರ ಆಸ್ತಿ ಮತ್ತು ದಾಯಿತ್ವಗಳ ಪಟ್ಟಿಗಳನ್ನು ಭೌತಿಕವಾಗಿ ಹಾಗೂ ಲೋಕಾಯುಕ್ತದ ಜಾಲತಾಣದ ಮೂಲಕ ಸಲ್ಲಿಸಲು ಅವಕಾಶ ನೀಡಲಾಗಿದೆ. ಆದರೆ, ಮುಂದಿನ ಆರ್ಥಿಕ ವರ್ಷಗಳಲ್ಲಿ ಜಾಲತಾಣದ ಮೂಲಕ ಮಾತ್ರ ವಿವರಗಳನ್ನು ಸ್ವೀಕರಿಸಲಾಗುವುದು ಎಂದು ಲೋಕಾಯುಕ್ತದ ನಿಬಂಧಕರು ವಿಧಾನಸಭೆ ಸಚಿವಾಲಯಕ್ಕೆ ಪತ್ರದ ಮೂಲಕ ತಿಳಿಸಿದ್ದಾರೆ ಎಂದು ಅವರು ಹೇಳಿದ್ದಾರೆ.

ಕರ್ನಾಟಕ ಲೋಕಾಯುಕ್ತ ಕಾಯ್ದೆಯ ಕಲಂ 22ರ ಪ್ರಕಾರ, ಚುನಾಯಿತ ಜನಪ್ರತಿನಿಧಿಗಳು ಪ್ರತಿ ವರ್ಷ ಮಾರ್ಚ್‌ 31ಕ್ಕೆ ಹೊಂದಿರುವ ತಮ್ಮ ಆಸ್ತಿ ಮತ್ತು ದಾಯಿತ್ವಗಳ ವಿವರಗಳನ್ನು ಜೂನ್‌ 30ರೊಳಗಾಗಿ ಲೋಕಾಯುಕ್ತಕ್ಕೆ ಸಲ್ಲಿಸಬೇಕು.

ಲೋಕಾಯುಕ್ತ ಕಾಯ್ದೆಯ ನಿಯಮ 7ಕ್ಕೆ ತಿದ್ದುಪಡಿ ಮಾಡಿ ಆದೇಶ ಹೊರಡಿಸಿರುವ ಹಿನ್ನೆಲೆಯಲ್ಲಿ ಶಾಸಕರು ಇನ್ನು ಮುಂದೆ ಆಸ್ತಿ ಮತ್ತು ದಾಯಿತ್ವಗಳ ಮಾಹಿತಿಯನ್ನು ಆನ್‌ಲೈನ್‌ ಮೂಲಕವೇ ಸಲ್ಲಿಸಬೇಕಾಗಿದೆ ಎಂದು ವಿಧಾನಸಭೆ ಕಾರ್ಯದರ್ಶಿ ತಿಳಿಸಿದ್ದಾರೆ.

RELATED ARTICLES
spot_img

Latest News