ಬೆಂಗಳೂರು, ಸೆ.8- ಬಿಜೆಪಿ ಮುಖಂಡ ಹಾಗೂ ಬಿಬಿಎಂಪಿ ಮಾಜಿ ಸದಸ್ಯ ಎನ್.ಆರ್. ರಮೇಶ್ ಅವರು ರಚಿಸಿರುವ ‘ಲೀಲಮ್ಮ ನಿನ್ನ ಗಂಡ ಯಾರಮ’ ಕೃತಿ ಕನ್ನಡ ಸಾರಸ್ವತ ಲೋಕದಲ್ಲಿ ಹೊಸ ದಾಖಲೆ ನಿರ್ಮಿಸಿದೆ.
ಐತಿಹಾಸಿಕ ಸಾಕ್ಷ್ಯಗಳು ಹಾಗೂ ಅಧಿಕೃತ ಸರ್ಕಾರಿ ದಾಖಲೆಗಳನ್ನು ಒಳಗೊಂಡಿರುವ ಈ ಕೃತಿ, ಮೊದಲ ಮುದ್ರಣ ಬಿಡುಗಡೆಯಾದ ಕೇವಲ 28 ದಿನಗಳಲ್ಲೇ 10ನೇ ಮುದ್ರಣ ಕಂಡಿದೆ. ದಕ್ಷಿಣ ಭಾರತದಲ್ಲೇ ಇಷ್ಟು ಕಡಿಮೆ ಅವಧಿಯಲ್ಲಿ 10ನೇ ಮುದ್ರಣ ಕಂಡ ಮೊದಲ ಕೃತಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಕೃತಿಯ ಪ್ರಕಾಶಕರು ತಿಳಿಸಿದ್ದಾರೆ.
ನಿನ್ನೆ ನಡೆದ ಕಾರ್ಯಕ್ರಮದಲ್ಲಿ ಕೃತಿಯ 10ನೇ ಮುದ್ರಣದ ಪ್ರತಿಗಳನ್ನು ಬಿಡುಗಡೆ ಮಾಡಲಾಯಿತು. ಈ ಸಂದರ್ಭದಲ್ಲಿ ಮಾಗಡಿ ರಸ್ತೆಯ ಡಾ. ರಾಜ್ಕುಮಾರ್ ಅಭಿಮಾನಿ ಸಂಘ ಹಾಗೂ ಕೃಷ್ಣರಾಜಪುರದ ಡಾ. ರಾಜ್ಕುಮಾರ್ ಅಭಿಮಾನಿ ಸಂಘದ ಸದಸ್ಯರು ಸ್ಥಳದಲ್ಲೇ 10ನೇ ಮುದ್ರಣದ ಎಲ್ಲಾ ಪ್ರತಿಗಳನ್ನು ಖರೀದಿಸಿದರು. ಇದರೊಂದಿಗೆ ಕೃತಿ ಇದೀಗ 11ನೇ ಹಾಗೂ 12ನೇ ಮುದ್ರಣದತ್ತ ಸಾಗುತ್ತಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ವಿಶ್ವವಿಖ್ಯಾತ ನಟಸಾರ್ವಭೌಮ ಹಾಗೂ ಕನ್ನಡಿಗರ ಸಾಂಸ್ಕೃತಿಕ ರಾಯಭಾರಿ ಡಾ. ರಾಜ್ಕುಮಾರ್ ಅವರ ಕುರಿತು ಹಲವು ವರ್ಷಗಳಿಂದ ಸೃಷ್ಟಿಯಾಗಿರುವ ವಿವಾದಗಳು ಹಾಗೂ ಗೊಂದಲಗಳಿಗೆ ಅಧಿಕೃತ ಸರ್ಕಾರಿ ದಾಖಲೆಗಳ ಮೂಲಕ ತೆರೆ ಎಳೆಯುವ ಉದ್ದೇಶದಿಂದ ಕೃತಿಯನ್ನು ರಚಿಸಲಾಗಿದೆ ಎಂದು ಲೇಖಕ ಎನ್.ಆರ್. ರಮೇಶ್ ತಿಳಿಸಿದ್ದಾರೆ.
ಕೃತಿಯ ಕೊನೆಯ 20 ಪುಟಗಳಲ್ಲಿ ದಿವಂಗತ ನಟಿ ಲೀಲಾವತಿ ಹಾಗೂ ನಟ ವಿನೋದ್ ಕುಮಾರ್ ಅವರ ಆಸ್ತಿಗಳಿಗೆ ಸಂಬಂಧಿಸಿದ ಅಧಿಕೃತ ಸರ್ಕಾರಿ ದಾಖಲೆಗಳನ್ನು ಸೇರಿಸಲಾಗಿದೆ ಎಂದು ಪ್ರಕಾಶಕರು ತಿಳಿಸಿದ್ದಾರೆ.
ಕೃತಿಯ 10ನೇ ಮುದ್ರಣದ ಪ್ರತಿಗಳನ್ನು ಖ್ಯಾತ ಪತ್ರಕರ್ತ ಬಿ. ಗಣಪತಿ ಹಾಗೂ ಕೃತಿಯ ಲೇಖಕ ಮತ್ತು ಅಖಿಲ ಕರ್ನಾಟಕ ಡಾ. ರಾಜ್ಕುಮಾರ್ ಅಭಿಮಾನಿ ಸಂಘಗಳ ಒಕ್ಕೂಟದ ಗೌರವಾಧ್ಯಕ್ಷ ಎನ್.ಆರ್. ರಮೇಶ್ ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಒಕ್ಕೂಟದ ಪದಾಧಿಕಾರಿಗಳಾದ ಪ್ರಕಾಶ್, ಸೋಮಣ್ಣ, ಹೊನ್ನೇಗೌಡ, ಉಮೇಶ್, ಡಾ. ರಾಜ್ಕುಮಾರ್ ಸೇನೆಯ ತ್ಯಾಗರಾಜ್ ಸೇರಿದಂತೆ ಹಲವು ಅಭಿಮಾನಿಗಳು ಉಪಸ್ಥಿತರಿದ್ದರು.
