ಕೋಲ್ಕತ್ತಾ, ಆ.19 (ಪಿಟಿಐ)- ಮಧ್ಯ ಕೋಲ್ಕತ್ತಾದ ಮಿರ್ಜಾ ಗಾಲಿಬ್ ಸ್ಟ್ರೀಟ್‌ನಲ್ಲಿರುವ ಐದು ಅಂತಸ್ತಿನ ಕಟ್ಟಡದಲ್ಲಿ ಇಂದು ಮುಂಜಾನೆ ಸಂಭವಿಸಿದ ಬೆಂಕಿ ಅವಘಡದಲ್ಲಿ ನಾಲ್ಕು ವರ್ಷದ ಮಗು ಸೇರಿದಂತೆ ಕನಿಷ್ಠ ಒಂಬತ್ತು ಮಂದಿ ಸಾವನ್ನಪ್ಪಿದ್ದು, ಆರು ಜನರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಬೆಳಗಿನ ಜಾವ 1.45ರ ಸುಮಾರಿಗೆ ಸಂಭವಿಸಿದ ಬೆಂಕಿಯನ್ನು ನಂದಿಸಲು ಐದು ಅಗ್ನಿಶಾಮಕ ವಾಹನಗಳನ್ನು ನಿಯೋಜಿಸಲಾಗಿತ್ತು. ರಕ್ಷಣಾ ಕಾರ್ಯಾಚರಣೆಗಾಗಿ ಪೊಲೀಸ್ ಮತ್ತು ವಿಪತ್ತು ನಿರ್ವಹಣಾ ಇಲಾಖೆಯ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದಾರೆ. ಹಿರಿಯ ಅಧಿಕಾರಿಯೊಬ್ಬರ ಪ್ರಕಾರ, ಐದು ಅಂತಸ್ತಿನ ಕಟ್ಟಡದಿಂದ 80 ಜನರನ್ನು ರಕ್ಷಿಸಲಾಗಿದೆ.
ಪಿಟಿಐ ಜೊತೆ ಮಾತನಾಡಿದ ಅಗ್ನಿಶಾಮಕ ಇಲಾಖೆಯ ಸಚಿವ ಕೌಶಿಕ್ ಚೌಧರಿ, ಮೃತರ ಗುರುತುಗಳನ್ನು ಇನ್ನೂ ಪತ್ತೆಹಚ್ಚಲಾಗಿಲ್ಲ ಎಂದು ಹೇಳಿದರು. ಮೃತರಲ್ಲಿ ಭಾರತೀಯರು ಹಾಗೂ ಬಾಂಗ್ಲಾದೇಶಿ ಪ್ರಜೆಗಳು ಸೇರಿದ್ದಾರೆ ಎಂದು ಸ್ಥಳಕ್ಕೆ ಭೇಟಿ ನೀಡಿದ ಬಳಿಕ ಅವರು ತಿಳಿಸಿದರು.
“ಮೃತರ ಗುರುತು ಪತ್ತೆಹಚ್ಚಲು ನಾವು ಪ್ರಯತ್ನಿಸುತ್ತಿದ್ದೇವೆ. ಕಟ್ಟಡದೊಳಗಿನ ಪರಿಸ್ಥಿತಿ ತುಂಬಾ ಕೆಟ್ಟದಾಗಿದೆ. ಈ ಕಟ್ಟಡದೊಳಗೆ ಹಲವು ಹೋಟೆಲ್‌ಗಳು ಕಾರ್ಯನಿರ್ವಹಿಸುತ್ತಿವೆ. ಇಲ್ಲಿ ನಡೆಯುತ್ತಿರುವುದನ್ನು ನೋಡಿ ನನಗೆ ಆಘಾತವಾಗಿದೆ” ಎಂದು ಚೌಧರಿ ಹೇಳಿದರು.
ಬೆಂಕಿಗೆ ಶಾರ್ಟ್ ಸರ್ಕ್ಯೂಟ್ ಕಾರಣವಾಗಿರಬಹುದು ಎಂದು ಸಚಿವರು ಶಂಕಿಸಿದ್ದಾರೆ. ಆದರೆ ವಿಧಿವಿಜ್ಞಾನ ಪರೀಕ್ಷೆಯ ಬಳಿಕವೇ ಬೆಂಕಿ ಅವಘಡಕ್ಕೆ ನಿಖರ ಕಾರಣ ತಿಳಿದುಬರಲಿದೆ ಎಂದು ಅವರು ಹೇಳಿದರು. ಕಟ್ಟಡದ ಆಡಳಿತ ಮಂಡಳಿ ಮೂಲಭೂತ ಸುರಕ್ಷತಾ ಹಾಗೂ ನಿರ್ಮಾಣ ನಿಯಮಗಳನ್ನು ಪಾಲಿಸಿಲ್ಲ. ಹೋಟೆಲ್‌ಗಳ ಕಾರ್ಯಾಚರಣೆಯಲ್ಲಿ ಹಲವಾರು ಅಕ್ರಮಗಳು ನಡೆದಿರುವ ಆರೋಪಗಳಿವೆ ಎಂದು ಸಚಿವರು ತಿಳಿಸಿದರು.
ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ದಟ್ಟವಾದ ಹೊಗೆಯಿಂದಾಗಿ ಅಗ್ನಿಶಾಮಕ ಸಿಬ್ಬಂದಿಗೆ ಮೆಟ್ಟಿಲುಗಳ ಮೂಲಕ ಮೇಲಿನ ಮಹಡಿಗಳನ್ನು ತಲುಪಲು ತೀವ್ರ ತೊಂದರೆಯಾಯಿತು. ಒಂಬತ್ತು ಮಂದಿ ಮೃತಪಟ್ಟಿರುವುದು ದೃಢಪಟ್ಟಿದ್ದರೂ, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.
