Homeರಾಷ್ಟ್ರೀಯವಿದ್ಯಾರ್ಥಿಗಳ ಮೇಲೆ ಲಾಠಿಚಾರ್ಜ್‌ ಆರೋಪ : ಸಂಸತ್‌ನ ಉಭಯ ಸದನಗಳಲ್ಲಿ ಗದ್ದಲ, ಕಲಾಪ ಮುಂದೂಡಿಕೆ

ವಿದ್ಯಾರ್ಥಿಗಳ ಮೇಲೆ ಲಾಠಿಚಾರ್ಜ್‌ ಆರೋಪ : ಸಂಸತ್‌ನ ಉಭಯ ಸದನಗಳಲ್ಲಿ ಗದ್ದಲ, ಕಲಾಪ ಮುಂದೂಡಿಕೆ

Lathi-charge on students: Uproar in both houses of Parliament, adjournment

ನವದೆಹಲಿ, ಜು. 21- ನೀಟ್‌ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಪೊಲೀಸರು ಲಾಠಿಚಾರ್ಜ್‌ ನಡೆಸಿ, ಅಶ್ರುವಾಯು ಪ್ರಯೋಗ ಮಾಡಿದ ವಿಚಾರವನ್ನು ಪ್ರತಿಪಕ್ಷಗಳು ಪ್ರಸ್ತಾಪಿಸಲು ಮುಂದಾದ ಹಿನ್ನೆಲೆಯಲ್ಲಿ ಸಂಸತ್‌ನ ಉಭಯ ಸದನಗಳಲ್ಲಿ ಕಲಾಪ ಅಸ್ತವ್ಯಸ್ಥಗೊಂಡು ಮುಂದೂಡಿಕೆಯಾಗಿದೆ.

ರಾಜ್ಯಸಭೆಯಲ್ಲಿ ಭಾರೀ ಗದ್ದಲ ಉಂಟಾಗಿ, ಕಲಾಪವನ್ನು ಸುಮಾರು ಪದೇ ಪದೇ ಮುಂದೂಡಲಾಯಿತು. ಕಲಾಪ ಆರಂಭವಾಗಿ ಸದನದಲ್ಲಿ ಅಧಿಕೃತ ದಾಖಲೆಗಳನ್ನು ಮಂಡಿಸಿದ ಬಳಿಕ, ಪ್ರತಿಪಕ್ಷದ ನಾಯಕ ಹಾಗೂ ಕಾಂಗ್ರೆಸ್‌‍ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿಷಯ ಪ್ರಸ್ತಾಪಿಸಲು ಎದ್ದುನಿಂತರು.

ನೀಟ್‌ ವೈದ್ಯಕೀಯ ಪ್ರವೇಶ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಆರೋಪದ ವಿರುದ್ಧ ಸೋಮವಾರ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಪೊಲೀಸರು ಲಾಠಿಚಾರ್ಜ್‌ ನಡೆಸಿದ್ದು ಮಾತ್ರವಲ್ಲದೆ, ಅಶ್ರುವಾಯುವನ್ನೂ ಪ್ರಯೋಗಿಸಿದ್ದಾರೆ ಎಂದು ಏರಿದ ಧ್ವನಿಯಲ್ಲಿ ಆಕ್ರೋಶ ವ್ಯಕ್ತ ಪಡಿಸಿದರು.

ಖರ್ಗೆ ಅವರ ಮಾತುಗಳಿಗೆ ಅಡ್ಡಿ ಪಡಿಸಲು ಆಡಳಿತ ಪಕ್ಷದ ಸದಸ್ಯರು ಘೋಷಣೆಗಳನ್ನು ಕೂಗಲು ಆರಂಭಿಸಿದರು. ಪ್ರತಿಪಕ್ಷ ಸದಸ್ಯರು ಪ್ರತಿಯಾಗಿ ಘೋಷಣೆ ಕೂಗಲು ಮುಂದಾದರು. ಇದರಿಂದ ಸದನದಲ್ಲಿ ಗದ್ದಲದ ವಾತಾವರಣ ನಿರ್ಮಾಣವಾಯಿತು. ರಾಜ್ಯಸಭೆಯ ಸಭಾಪತಿ ಸಿ. ಪಿ. ರಾಧಾಕೃಷ್ಣನ್‌ ಅವರು ಕಲಾಪವನ್ನು ಮಧ್ಯಾಹ್ನ 12 ಗಂಟೆಯವರೆಗೆ ಮುಂದೂಡಿದರು.

ಒಂದು ಘಂಟೆ ಬಳಿಕ ಮತ್ತೆ ಕಲಾಪ ಆರಂಭವಾಗುತ್ತಿದ್ದಂತೆ ಗದ್ದಲ ಮುಂದುವರೆಯಿತು. ಸಭಾಪತಿಯವರು ಕಲಾಪವನ್ನು ಮಧ್ಯಾಹ್ನ 2 ಗಂಟೆಗೆ ಮುಂದೂಡಿದರು.ನಿನ್ನೆ ಕೂಡ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಗದ್ದಲವಾಗಿ ಕಲಾಪ ಅಸ್ತವ್ಯಸ್ತವಾಗಿತ್ತು. ಇಂದೂ ಕೂಡ ಕಲಾಪಕ್ಕೆ ಅಡಚಣೆ ಎದುರಾಗಿದೆ.

ಅತ್ತ ಲೋಕಸಭೆಯಲ್ಲೂ ವಿರೋಧ ಪಕ್ಷಗಳು ವಿವಿಧ ವಿಷಯಗಳನ್ನು ಪ್ರಸ್ತಾಪಿಸಿ ಪ್ರತಿಪಕ್ಷ ಸದಸ್ಯರು ಘೋಷಣೆಗಳನ್ನು ಕೂಗಿದ ಹಿನ್ನೆಲೆಯಲ್ಲಿ ಕಲಾಪವನ್ನು ಮಧ್ಯಾಹ್ನ 12 ಗಂಟೆಯವರೆಗೆ ಮುಂದೂಡಲಾಯಿತು.

ಪ್ರಶ್ನೋತ್ತರ ಅವಧಿಯ ಮೊದಲ ಪ್ರಶ್ನೆಯನ್ನು ಕೈಗೆತ್ತಿಕೊಳ್ಳುತ್ತಿದ್ದಂತೆಯೇ ಪ್ರತಿಪಕ್ಷ ಸದಸ್ಯರು ನೀಟ್‌ ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಪ್ರತಿಭಟನಾನಿರತ ವಿದ್ಯಾರ್ಥಿಗಳ ಮೇಲೆ ನಡೆದ ಪೊಲೀಸ್‌‍ ಲಾಠಿಚಾರ್ಜ್‌ ವಿರುದ್ಧ ಘೋಷಣೆಗಳನ್ನು ಕೂಗಲು ಆರಂಭಿಸಿದರು.

ಈ ವೇಳೆ ಲೋಕಸಭಾಧ್ಯಕ್ಷ ಓಂ ಬಿರ್ಲಾ ಅವರು, ಸದನದ ನಿಯಮಗಳ ಪ್ರಕಾರ ಸದಸ್ಯರಿಗೆ ತಮ ವಿಷಯಗಳನ್ನು ಪ್ರಸ್ತಾಪಿಸಲು ಅವಕಾಶ ನೀಡಲಾಗುವುದು ಎಂದು ಭರವಸೆ ನೀಡಿದರು.
ಆದಾಗ್ಯೂ, ಪ್ರತಿಭಟನಾನಿರತ ಸದಸ್ಯರು ಘೋಷಣೆಗಳನ್ನು ಮುಂದುವರಿಸಿದ ಹಿನ್ನೆಲೆಯಲ್ಲಿ ಸ್ಪೀಕರ್‌ ಓಂ ಬಿರ್ಲಾ ಅವರು ಲೋಕಸಭೆಯ ಕಲಾಪವನ್ನು ಮಧ್ಯಾಹ್ನ 12 ಗಂಟೆಯವರೆಗೆ ಮುಂದೂಡಿದರು.

RELATED ARTICLES

Latest News