ಲಕ್ನೋ, ಅ.19: ಅಯೋಧ್ಯೆಯ ರಾಮಮಂದಿರದಲ್ಲಿ ಪ್ರತಿಷ್ಠಾಪಿಸಲಾಗಿರುವ ರಾಮಲಲ್ಲಾನ ದರ್ಶನದ ವ್ಯವಸ್ಥೆಯಲ್ಲಿ ಭಾರಿ ಬದಲಾವಣೆ ಮಾಡಲಾಗಿದೆ. ಇನ್ನು ಮುಂದೆ ಭಕ್ತರು 90 ದಿನಗಳ ಮುಂಚಿತವಾಗಿಯೇ ಸುಗಮ ದರ್ಶನ ಪಾಸ್‌ಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ತಿಳಿಸಿದೆ.
ಈ ಹಿಂದೆ ಕೇವಲ 15 ದಿನಗಳ ಮುಂಚಿತವಾಗಿ ಮಾತ್ರ ಪಾಸ್ ಪಡೆಯಲು ಅವಕಾಶವಿತ್ತು. ಆನ್‌ಲೈನ್ ಮೂಲಕ ವಿತರಿಸುವ ಪಾಸ್‌ಗಳ ಸಂಖ್ಯೆಯನ್ನು 975 ರಿಂದ 2,000ಕ್ಕೆ ಹೆಚ್ಚಿಸಲಾಗಿದೆ. 90, 62, 30, 14, 7, 3 ಮತ್ತು 1 ದಿನಗಳ ಮುಂಚಿತವಾಗಿ ಒಟ್ಟು 7 ಹಂತಗಳಲ್ಲಿ ಪಾಸ್‌ಗಳನ್ನು ಬಿಡುಗಡೆ ಮಾಡಲಾಗುತ್ತದೆ. ಅಲ್ಲದೆ, ದರ್ಶನದ ದಿನವೇ ತುರ್ತು ಪಾಸ್ ಪಡೆಯುವ ಸೌಲಭ್ಯವೂ ಲಭ್ಯವಿರಲಿದೆ.
ಮುಂಗಡ ಅರ್ಜಿಗಳ ಪರಿಶೀಲನೆ ಬಳಿಕ 24 ರಿಂದ 48 ಗಂಟೆಗಳ ಒಳಗಾಗಿ ಪಾಸ್ ದೃಢೀಕರಣದ ಮಾಹಿತಿ ನೀಡಲಾಗುತ್ತದೆ. ಸುಗಮ ದರ್ಶನ ಪಾಸ್ ಸಂಪೂರ್ಣ ಉಚಿತವಾಗಿದ್ದು, ಇದಕ್ಕಾಗಿ ಯಾವುದೇ ಹಣ ಪಾವತಿಸುವ ಅಗತ್ಯವಿಲ್ಲ ಎಂದು ಟ್ರಸ್ಟ್ ಸ್ಪಷ್ಟಪಡಿಸಿದೆ.
