ಬೆಂಗಳೂರು,ಅ.19-ರಾಜಧಾನಿ ಬೆಂಗಳೂರಿನಲ್ಲಿ ಬೆಚ್ಚಿಬೀಳುಸುವ ಘಟನೆ ನಡೆದಿದ್ದು, ಮನೆ ಮಾಲೀಕರೂ ಆಗಿರುವ ವಕೀಲರೊಬ್ಬರ ಮೇಲೆ ದುಷ್ಕರ್ಮಿಗಳು ಪಿಸ್ತೂಲ್‌ನಿಂದ ಗುಂಡು ಹಾರಿಸಿ ಕೊಲೆ ಮಾಡಿರುವ ಘಟನೆ ವೈಟ್‌ಫೀಲ್ಡ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಧ್ಯರಾತ್ರಿ ನಡೆದಿದೆ.
ಪಟ್ಟಂದೂರು ಅಗ್ರಹಾರದ ನಿವಾಸಿ, ಮಂಜುನಾಥ್ (42) ದುಷ್ಕರ್ಮಿಗಳ ಗುಂಡೇಟಿಗೆ ಬಲಿಯಾದ ವಕೀಲರು.ಇವರ ಜಮೀನಿನಲ್ಲಿ ಲೇಬರ್ ಶೆಡ್‌ನಲ್ಲಿ ಬಾಡಿಗೆಗೆ ಇದ್ದ ಬಿಹಾರ ಮೂಲದ ವ್ಯಕ್ತಿಗಳೇ ಇವರಿಗೆ ಗುಂಡಿಕ್ಕಿ ಕೊಲೆ ಮಾಡಿ ಪರಾರಿಯಾಗಿದ್ದಾರೆ ಎಂಬುವುದು ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.
ಮಂಜುನಾಥ್ ಅವರು ಪಟ್ಟಂದೂರು ಅಗ್ರಹಾರದಲ್ಲಿ ಹತ್ತಾರು ಎಕರೆ ಜಮೀನು ಹೊಂದಿದ್ದು, ಆ ಸ್ಥಳದಲ್ಲಿ 50 ಲೇಬರ್ ಶೆಡ್‌ಗಳನ್ನು ನಿರ್ಮಿಸಿದ್ದು, ಬಿಹಾರ ಸೇರಿದಂತೆ ಹೊರರಾಜ್ಯದವರಿಗೆ ಬಾಡಿಗೆಗೆ ಕೊಟ್ಟಿದ್ದಾರೆ. ಒಂದು ಶೆಡ್‌ನಲ್ಲಿ ವಾಸವಾಗಿದ್ದ ಬಾಡಿಗೆದಾರನೊಬ್ಬ ಕಳೆದ ಮೂರು ತಿಂಗಳಿನಿಂದ ಬಾಡಿಗೆ ಹಣ ಕೊಟ್ಟಿಲ್ಲ. ಈ ವಿಚಾರವಾಗಿ ಮಂಜುನಾಥ್ ಅವರು ಆತನಿಗೆ ಬಾಡಿಗೆ ಹಣ ಕೇಳಲು ಹೋದಾಗ ಮಾತಿಗೆ ಮಾತು ಬೆಳೆದಿದ್ದರಿಂದ ಬೈದು ಬಾಡಿಗೆ ಕೊಡುವಂತೆ ಹೇಳಿ ಹಿಂದಿರುಗಿದ್ದರು.
ಮನೆ ಮಾಲೀಕನ ವರ್ತನೆಯಿಂದ ಕೋಪಗೊಂಡ ಬಾಡಿಗೆದಾರ ಅವರನ್ನು ಕೊಲೆ ಮಾಡಲು ಸಂಚು ರೂಪಿಸಿದ್ದಾನೆ. ಅದರಂತೆ ಮಧ್ಯರಾತ್ರಿ 12 ಗಂಟೆ ಸುಮಾರಿನಲ್ಲಿ ಬಾಡಿಗೆದಾರ ಮತ್ತೊಬ್ಬನೊಂದಿಗೆ ಮಂಜುನಾಥ್ ಅವರ ಮನೆ ಬಳಿ ಹೋಗಿ ಕಾಲಿಂಗ್ ಬೆಲ್ ಒತ್ತಿದ್ದಾನೆ.
ಮಂಜುನಾಥ್ ಅವರು ಒಳಗಿನಿಂದ ಯಾರೆಂದು ಕೂಗಿ ಕೇಳಿದಾಗ ನಾನು ಬಾಡಿಗೆ ಹಣ ಕೊಡಲು ಬಂದಿರುವುದಾಗಿ ಹೇಳಿದ್ದರಿಂದ ಅವರು ಬಾಗಿಲು ತೆಗೆಯುತ್ತಿದ್ದಂತೆ ಒಬ್ಬ ಹಣ ಕೊಡುವಂತೆ ನಟಿಸುತ್ತಿದ್ದಂತೆ ಮತ್ತೊಬ್ಬ ಅವರ ಮೇಲೆ ಏಕಾಏಕಿ ಪಿಸ್ತೂಲ್‌ನಿಂದ ಗುಂಡುಗಳನ್ನು ಹಾರಿಸಿ ಪರಾರಿಯಾಗಿದ್ದಾರೆ.
ಒಂದು ಗುಂಡು ಸೀದ ಹಣೆಗೆ ಹೊಕ್ಕಿದರೆ, ಎರಡು ಗುಂಡುಗಳು ಎದೆಗೆ ಹೊಕ್ಕಿದ್ದು, ಮಂಜುನಾಥ್ ಅವರು ಸ್ಥಳದಲ್ಲೇ ಕುಸಿದಿದ್ದಾರೆ. ಗುಂಡಿನ ಶಬ್ದ ಕೇಳಿ ತಕ್ಷಣ ಅವರ ಪತ್ನಿ ಹೊರಗೆ ಬಂದಿದ್ದು, ರಕ್ತದ ಮಡುವಿನಲ್ಲಿ ಬಿದ್ದಿದ್ದ ಪತಿಯನ್ನು ನೋಡಿ ಗಾಬರಿಯಾಗಿ ನೆರೆಹೊರೆಯವರ ಸಹಾಯದಿಂದ ಅವರನ್ನು ಮಣಿಪಾಲ್ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
ವೈದ್ಯರು ಪರೀಕ್ಷಿಸಿ ಮಾರ್ಗಮಧ್ಯೆ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಬಾಡಿಗೆ ಹಣಕ್ಕಾಗಿ ಈ ಕೊಲೆ ನಡೆದಿರುವುದು ಸ್ಥಳೀಯರನ್ನು ಬೆಚ್ಚಿಬೀಳಿಸಿದೆ.ಸುದ್ದಿ ತಿಳಿಯುತ್ತಿದ್ದಂತೆ ವೈಟ್‌ಫೀಲ್‌್ಡ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.ಬೆರಳಚ್ಚು ತಜ್ಞರು ಹಾಗೂ ಶ್ವಾನದಳ ಘಟನಾ ಸ್ಥಳಕ್ಕೆ ಆಗಮಿಸಿದ್ದು, ಸಾಕ್ಷ್ಯಾಗಳನ್ನು ಸಂಗ್ರಹಿಸಿದೆ.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಪರಾರಿಯಾಗಿರುವ ಇಬ್ಬರು ಹಂತಕರಿಗಾಗಿ ಶೋಧ ನಡೆಸುತ್ತಿದ್ದಾರೆ.ಪೊಲೀಸ್ ಮೂಲಗಳ ಪ್ರಕಾರ ಇಬ್ಬರು ಬಾಡಿಗೆದಾರರಿಂದ ಕೃತ್ಯ ನಡೆದಿರುವ ಅನುಮಾನ ವ್ಯಕ್ತವಾಗಿದೆ. ಬಾಡಿಗೆ ಹಣ ಹಾಗೂ ಜಮೀನು ವ್ಯಾಜ್ಯಕ್ಕೆ ಕೊಲೆಯಾಗಿರುವ ಶಂಕೆ ವ್ಯಕ್ತವಾಗಿದ್ದು, ಎಲ್ಲಾ ಆಯಾಮಗಳಲ್ಲೂ ವೈಟ್‌ಫೀಲ್‌್ಡ ಉಪವಿಭಾಗದ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಮೊಬೈಲ್ ಕರೆ ಮಾಡಿ ಬಂದು ಕೃತ
ನನ್ನ ಸಹೋದರ ಮಂಜುನಾಥ್ ಅವರಿಗೆ ಬಾಡಿಗೆದಾರ ಕರೆ ಮಾಡಿ ಬಾಡಿಗೆ ದುಡ್ಡು ಕೊಡುವುದಾಗಿ ಹೇಳಿ ನಂತರ ಮನೆ ಬಳಿ ಬಂದು ಕೊಲೆ ಮಾಡಿ ಪರಾರಿಯಾಗಿದ್ದಾನೆಂದು ಮೃತರ ಅಣ್ಣ ಮುನಿರಾಜು ಅವರು ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಡೆಲಿವರಿ ಬಾಯ್ ಕೆಲಸ ಮಾಡಿಕೊಂಡಿದ್ದ ಅಂಕಿತ್‌ಕುಮಾರ್ ದುಬೆ ಎಂಬಾತ ತನ್ನ ಸ್ನೇಹಿತನೊಂದಿಗೆ ಬಂದು ಕೊಲೆ ಮಾಡಿದ್ದಾನೆಂದು ಶಂಕೆ ವ್ಯಕ್ತಪಡಿಸಿದ್ದಾರೆ.ದೇವಸ್ಥಾನಕ್ಕೆ ಹೋಗಿ ರಾತ್ರಿ 10.30 ರ ಸುಮಾರಿನಲ್ಲಿ ನಾವು ಮನೆಗೆ ಬಂದಾಗ ಬಾಡಿಗೆದಾರ ಅಂಕಿತ್ ಕುಮಾರ್ ದುಬೆ ಹಾಗೂ ಮತ್ತೊಬ್ಬ ರಾತ್ರಿ ಕರೆ ಮಾಡಿರುವ ಮೊಬೈಲ್ ಸಂಖ್ಯೆ ತಮನ ಮೊಬೈಲ್‌ನಲ್ಲಿ ಸೇವ್ ಆಗಿದೆ.
ಮೊದಲು ಕರೆ ಮಾಡಿ ದುಡ್ಡು ತೆಗೆದುಕೊಂಡು ಬರುತ್ತೀವಿ ಎಂದು ಹೇಳಿದ್ದು, ನಂತರ ಮತ್ತೆ ಕರೆ ಮಾಡಿದಾಗ ನನ್ನ ತಮ ಕರೆಯನ್ನು ಸ್ವೀಕರಿಸಿಲ್ಲ.ಬಳಿಕ ಮಧ್ಯರಾತ್ರಿ ಮನೆ ಬಳಿ ಇಬ್ಬರು ಬಂದಿದ್ದು, ಒಬ್ಬ ದುಡ್ಡು ಕೊಟ್ಟಿದ್ದು, ಅದನ್ನು ಎಣಿಸುತ್ತಿದ್ದಾಗ ಹಿಂದೆ ಇದ್ದ ಮತ್ತೊಬ್ಬ ನೇರವಾಗಿ ಗುಂಡು ಹಾರಿಸಿ ತಮನನ್ನು ಕೊಲೆ ಮಾಡಿದ್ದಾನೆ.
ಒಬ್ಬನ ಹೆಸರು ಅಂಕಿತ್ ಕುಮಾರ್ ದುಬೆ ಎಂಬುವುದು ಗೊತ್ತು. ಇನ್ನೊಬ್ಬನ ಹೆಸರು ತಿಳಿದು ಬಂದಿಲ್ಲ ಎಂದು ಅಣ್ಣ ಮುನಿರಾಜು ಅವರು ತಿಳಿಸಿದ್ದಾರೆ.ನಾವು ಐದು ಮಂದಿ ಅಣ್ಣತಮಂದಿರು. ನಮದು 50 ಮನೆಗಳಿವೆ, ಅವುಗಳನ್ನು ಬಾಡಿಗೆಗೆ ಕೊಟ್ಟಿದ್ದೇವೆ, ಶಿವು ಎಂಬಾತ ಬಾಡಿಗೆ ಕೊಡೋದು ತೆಗೆದುಕೊಳ್ಳೋದು ಮಾಡುತ್ತಿದ್ದ.
ಈತ ಊರಿಗೆ ಹೋಗಿದ್ದಾನೆ. ಹಾಗಾಗಿ ಬಾಡಿಗೆ ಹಣವನ್ನು ಮನೆ ಬಳಿ ತಂದು ಕೊಡುವುದಾಗಿ ಆರೋಪಿ ಬಂದು ಈ ಕೊಲೆ ಮಾಡಿದ್ದಾನೆ. ಮನೆಯವರೆಲ್ಲಾ ಗುಂಡಿನ ಶಬ್ದ ಕೇಳಿ ಹೊರಗೆ ಬರುವಷ್ಟರಲ್ಲಿ ಆರೋಪಿಗಳು ಓಡಿ ಹೋಗಿದ್ದಾರೆಂದು ಅಣ್ಣ ಮುನಿರಾಜು ಅವರು ತಿಳಿಸಿದ್ದಾರೆ. ಈ ಎಲ್ಲಾ ಘಟನೆಗಳು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಪೊಲೀಸರು ಅದನ್ನು ಪರಿಶೀಲಿಸಿ ಕ್ರಮಕೈಗೊಳ್ಳಲಿದ್ದಾರೆಂದು ಅವರು ಹೇಳಿದ್ದಾರೆ.
