Homeರಾಷ್ಟ್ರೀಯಖರ್ಗೆಜಿಯ 'ಮೋದಿ ಬಾಪ್‌' ಹೇಳಿಕೆಗೆ ಕಾಂಗ್ರೆಸ್‌‍ ಸಮರ್ಥನೆ, ದೇಶಾದ್ಯಂತ ಬಿಜೆಪಿ ಪ್ರತಿಭಟನೆ

ಖರ್ಗೆಜಿಯ ‘ಮೋದಿ ಬಾಪ್‌’ ಹೇಳಿಕೆಗೆ ಕಾಂಗ್ರೆಸ್‌‍ ಸಮರ್ಥನೆ, ದೇಶಾದ್ಯಂತ ಬಿಜೆಪಿ ಪ್ರತಿಭಟನೆ

ನವದೆಹಲಿ, ಅ.26- ಪ್ರಧಾನಿ ನರೇಂದ್ರ ಮೋದಿ ಅವರನ್ನು ಉಲ್ಲೇಖಿಸಿ ಕಾಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೀಡಿರುವ ‘ಬಾಪ್‌’ ಹೇಳಿಕೆ ದೇಶದ ರಾಜಕೀಯ ವಲಯದಲ್ಲಿ ಭಾರಿ ವಿವಾದಕ್ಕೆ ಕಾರಣವಾಗಿದೆ. ಖರ್ಗೆ ಹೇಳಿಕೆಯನ್ನು ಖಂಡಿಸಿರುವ ಬಿಜೆಪಿ, ಕಾಂಗ್ರೆಸ್‌ ವಿರುದ್ಧ ದೇಶಾದ್ಯಂತ ಪ್ರತಿಭಟನೆ ನಡೆಸಲು ಸಿದ್ಧತೆ ನಡೆಸಿದೆ.ಮತ್ತೊಂದೆಡೆ, ಕಾಂಗ್ರೆಸ್‌ ತನ್ನ ಅಧ್ಯಕ್ಷರ ಬೆಂಬಲಕ್ಕೆ ನಿಂತಿದ್ದು, ಬಿಜೆಪಿ ನಿರಂತರವಾಗಿ ಖರ್ಗೆ ಅವರನ್ನು ಅಗೌರವಿಸುತ್ತಿರುವುದೇ ಇಂತಹ ಹೇಳಿಕೆಗಳಿಗೆ ಕಾರಣ ಎಂದು ಸಮರ್ಥಿಸಿಕೊಂಡಿದೆ.

ಮುಂಬರುವ ದಿನಗಳಲ್ಲಿ ಈ ವಿವಾದ ರಾಜಕೀಯ ಸಂಘರ್ಷವಾಗಿ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆ ವ್ಯಕ್ತವಾಗಿದೆ. ಕೇಂದ್ರ ಸಚಿವರು, ಬಿಜೆಪಿ ಮುಖ್ಯಮಂತ್ರಿಗಳು, ಸಂಸದರು ಸೇರಿದಂತೆ ಹಲವು ನಾಯಕರು ಖರ್ಗೆ ಅವರ ಹೇಳಿಕೆಯನ್ನು ಆಕ್ಷೇಪಿಸಿದ್ದು, ಕಾಂಗ್ರೆಸ್‌ ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.

ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆಯನ್ನು ಅವಹೇಳನಕಾರಿ ಮತ್ತು ರಾಜಕೀಯ ಭಾಷೆಯ ಘನತೆಗೆ ವಿರುದ್ಧವಾದದ್ದು ಎಂದು ಬಿಜೆಪಿ ನಾಯಕರು ಟೀಕಿಸಿದ್ದಾರೆ. ಇಂತಹ ಮಾತುಗಳು ಭಾರತದ ರಾಜಕೀಯ ಸಂಸ್ಕೃತಿ, ಮೂಲ ಮೌಲ್ಯಗಳು ಮತ್ತು ಸಾರ್ವಜನಿಕ ಜೀವನದಲ್ಲಿ ಪಾಲಿಸಬೇಕಾದ ಸಂಪ್ರದಾಯಗಳಿಗೆ ವಿರುದ್ಧವಾಗಿವೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಖರ್ಗೆ ವಿರುದ್ಧ ವಾಗ್ದಾಳಿ ನಡೆಸಿದ್ದು, ಇಂತಹ ಹೇಳಿಕೆಗಳನ್ನು ನೀಡುತ್ತಿರುವುದು ಇದೇ ಮೊದಲಲ್ಲ ಎಂದು ಆರೋಪಿಸಿದ್ದಾರೆ. ಕಾಂಗ್ರೆಸ್‌ ನಾಯಕರು ಚುನಾವಣಾ ಸೋಲುಗಳಿಂದ ಹತಾಶರಾಗಿ ಸಾರ್ವಜನಿಕವಾಗಿ ಬಳಸುವ ಭಾಷೆಯ ಮಟ್ಟವನ್ನು ಕುಗ್ಗಿಸುತ್ತಿದ್ದಾರೆ ಎಂಬುದು ಬಿಜೆಪಿ ನಾಯಕರ ಪ್ರಮುಖ ಟೀಕೆಯಾಗಿದೆ.

ಕೇಂದ್ರ ಕೃಷಿ ಸಚಿವ ಶಿವರಾಜ್‌ ಸಿಂಗ್‌ ಚೌಹಾಣ್‌ ಕೂಡ ಖರ್ಗೆ ಅವರ ಹೇಳಿಕೆಯನ್ನು ಖಂಡಿಸಿದ್ದಾರೆ. ಕಾಂಗ್ರೆಸ್‌ನ ಚುನಾವಣಾ ವೈಫಲ್ಯಗಳು ಪಕ್ಷದ ನಾಯಕರನ್ನು ಕೆರಳಿಸಿವೆ ಎಂದು ಟೀಕಿಸಿದ ಅವರು, ರಾಷ್ಟ್ರೀಯ ಅಧ್ಯಕ್ಷ ಸ್ಥಾನದಲ್ಲಿರುವ ವ್ಯಕ್ತಿ ಇಂತಹ ಭಾಷೆ ಬಳಸುವುದು ಸರಿಯೇ ಎಂಬುದನ್ನು ಕಾಂಗ್ರೆಸ್‌ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ. ಖರ್ಗೆ ಅವರನ್ನು ಅಧ್ಯಕ್ಷ ಸ್ಥಾನದಿಂದ ತೆಗೆದುಹಾಕಬೇಕೇ ಎಂಬ ಪ್ರಶ್ನೆಯನ್ನೂ ಅವರು ಮುಂದಿಟ್ಟಿದ್ದು, ಈ ಹೇಳಿಕೆಗೆ ಕಾಂಗ್ರೆಸ್‌ ಪಕ್ಷವೇ ಹೊಣೆ ಹೊತ್ತು ಉತ್ತರ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಖರ್ಗೆ ಅವರ ಹೇಳಿಕೆಯನ್ನು ರಾಜಕೀಯವಾಗಿ ಗಂಭೀರವಾಗಿ ಪರಿಗಣಿಸಿರುವ ಬಿಜೆಪಿ, ಸೋಮವಾರ ದೇಶಾದ್ಯಂತ ತನ್ನ ಪ್ರಮುಖ ಪಕ್ಷದ ಕಚೇರಿಗಳ ಎದುರು ಪ್ರತಿಭಟನೆ ನಡೆಸಲು ಯೋಜಿಸಿದೆ. ಕಾಂಗ್ರೆಸ್‌ ನಾಯಕತ್ವದ ವಿರುದ್ಧ ಜನಾಭಿಪ್ರಾಯ ರೂಪಿಸುವುದು ಮತ್ತು ಖರ್ಗೆ ಅವರ ಹೇಳಿಕೆಗೆ ಕ್ಷಮೆಯಾಚನೆ ಪಡೆಯುವುದು ಈ ಪ್ರತಿಭಟನೆಯ ಪ್ರಮುಖ ಉದ್ದೇಶಗಳಾಗಿವೆ.

RELATED ARTICLES

Latest News