Homeರಾಷ್ಟ್ರೀಯದೆಹಲಿಯಲ್ಲಿ ಮತ್ತೊಂದು ಕಟ್ಟಡ ಕುಸಿತ : ತಂದೆ-ಮಗ ಸಾವು

ದೆಹಲಿಯಲ್ಲಿ ಮತ್ತೊಂದು ಕಟ್ಟಡ ಕುಸಿತ : ತಂದೆ-ಮಗ ಸಾವು

ನವದೆಹಲಿ, ಅ.26- ಈಶಾನ್ಯ ದೆಹಲಿಯ ಹರ್ಷ್‌ ವಿಹಾರ್‌ನಲ್ಲಿರುವ ಮಿಲನ್‌ ಗಾರ್ಡನ್‌ ಬಳಿ ಐದು ಅಂತಸ್ತಿನ ಕಟ್ಟಡದ ಭಾಗವೊಂದು ಕುಸಿದುಬಿದ್ದ ಪರಿಣಾಮ ಇಬ್ಬರು ಕಾರ್ಮಿಕರು (ತಂದೆ ಮತ್ತು ಮಗ) ಮೃತಪಟ್ಟಿದ್ದಾರೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ, ಪೊಲೀಸರು ಹಾಗೂ ಎನ್‌ಡಿಆರ್‌ಎಫ್‌ ತಂಡಗಳು ಧಾವಿಸಿದ್ದು, ಕಳೆದ 12 ಗಂಟೆಗಳಿಗೂ ಹೆಚ್ಚು ಕಾಲದಿಂದ ತೀವ್ರ ರಕ್ಷಣಾ ಹಾಗೂ ಅವಶೇಷ ತೆರವು ಕಾರ್ಯಾಚರಣೆ ಮುಂದುವರಿದಿದೆ.

ಕಟ್ಟಡದಲ್ಲಿ ಹೊಸದಾಗಿ ಲಿಂಟೆಲ್‌ ಸ್ಲ್ಯಾಬ್‌ ಅಳವಡಿಸಲು ಯತ್ನಿಸುತ್ತಿದ್ದಾಗ ಅದು ದಿಢೀರ್‌ ಕುಸಿದುಬಿದ್ದಿದೆ. ಇದರಿಂದಾಗಿ ಕೆಳಗಿನ ನೆಲವೂ ಕುಸಿದಿದ್ದು, ಅಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ಅವಶೇಷಗಳಡಿ ಸಿಲುಕಿಕೊಂಡಿದ್ದಾರೆ. ಅಪಘಾತದ ಮಾಹಿತಿ ತಿಳಿದ ತಕ್ಷಣವೇ ದೆಹಲಿ ಅಗ್ನಿಶಾಮಕ ದಳ, ದೆಹಲಿ ಪೊಲೀಸರು, ರಾಷ್ಟ್ರೀಯ ವಿಪತ್ತು ಪರಿಹಾರ ಪಡೆ ಹಾಗೂ ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರದ ತಂಡಗಳು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಮುಂದುವರಿಸಿವೆ.

ಘಟನಾ ಸ್ಥಳಕ್ಕೆ ದೆಹಲಿ ಸಚಿವರಾದ ಆಶಿಷ್‌ ಸೂದ್‌ ಹಾಗೂ ಕಪಿಲ್‌ ಮಿಶ್ರಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದೊಂದು ಅತ್ಯಂತ ದುರದೃಷ್ಟಕರ ಘಟನೆ. ದುರಂತಕ್ಕೆ ಕಾರಣವಾದ ಸಂದರ್ಭಗಳ ಬಗ್ಗೆ ಸಮಗ್ರ ತನಿಖೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.

ಈ ವಿಪತ್ತಿನಿಂದ ಸಂಕಷ್ಟಕ್ಕೆ ಈಡಾದ ಕುಟುಂಬದೊಂದಿಗೆ ಸರ್ಕಾರ ಸಂಪೂರ್ಣವಾಗಿ ನಿಲ್ಲಲಿದೆ. ಮಹಾನಗರ ಪಾಲಿಕೆ ಅಥವಾ ದೆಹಲಿ ಸರ್ಕಾರದ ಯಾವುದೇ ಹಂತದಲ್ಲಿ ನಿರ್ಲಕ್ಷ್ಯ ಅಥವಾ ತಪ್ಪು ಕಂಡುಬಂದರೂ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು. ರಾಜಧಾನಿಯಲ್ಲಿ ಅಕ್ರಮ ನಿರ್ಮಾಣ ತಡೆಯಲು ಎಂಸಿಡಿಗೆ ಸೂಚಿಸಲಾಗಿದೆ ಎಂದು ಹೇಳಿದ್ದಾರೆ.

ದೆಹಲಿಯ ಸತ್ಯ ನಿಕೇತನ ಪ್ರದೇಶದಲ್ಲಿ ಐದು ಅಂತಸ್ತಿನ ಕಟ್ಟಡ ಕುಸಿದು ಏಳು ಮಂದಿ ಮೃತಪಟ್ಟ ಘಟನೆ ನಡೆದ ಸುಮಾರು ಒಂದೂವರೆ ತಿಂಗಳಲ್ಲೇ ಮತ್ತೊಂದು ಕಟ್ಟಡ ಕುಸಿತ ಸಂಭವಿಸಿರುವುದು ಕಟ್ಟಡಗಳ ಸುರಕ್ಷತೆ ಮತ್ತು ನಿರ್ಮಾಣ ನಿಯಮಗಳ ಪಾಲನೆಯ ಕುರಿತು ಮತ್ತೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಹರ್ಷ್‌ ವಿಹಾರ್‌ ಘಟನೆಯಲ್ಲಿ ಕಟ್ಟಡದ ಸ್ಥಿತಿ, ನಿರ್ಮಾಣ ಕಾಮಗಾರಿಗೆ ಅಗತ್ಯ ಅನುಮತಿ ಪಡೆಯಲಾಗಿತ್ತೇ ಮತ್ತು ಸುರಕ್ಷತಾ ಕ್ರಮಗಳನ್ನು ಪಾಲಿಸಲಾಗಿತ್ತೇ ಎಂಬ ಅಂಶಗಳು ತನಿಖೆಯಿಂದ ಸ್ಪಷ್ಟವಾಗಬೇಕಿದೆ. ಸದ್ಯ ರಕ್ಷಣಾ ಕಾರ್ಯಾಚರಣೆ ಹಾಗೂ ಘಟನೆಯ ಕಾರಣ ಪತ್ತೆಹಚ್ಚುವ ಪ್ರಕ್ರಿಯೆಯಲ್ಲಿ ಅಧಿಕಾರಿಗಳು ತೊಡಗಿದ್ದಾರೆ.

RELATED ARTICLES

Latest News