Homeರಾಷ್ಟ್ರೀಯಗೇಮ್ಸೌಕ್ರಾಫ್ಟ್ ಗೆ ಮತ್ತೊಂದು ಹೊಡೆತ : 1,906 ಕೋಟಿ ಮೌಲ್ಯದ ಆಸ್ತಿ ಜಪ್ತಿ ಮಾಡಿದ ಇಡಿ

ಗೇಮ್ಸೌಕ್ರಾಫ್ಟ್ ಗೆ ಮತ್ತೊಂದು ಹೊಡೆತ : 1,906 ಕೋಟಿ ಮೌಲ್ಯದ ಆಸ್ತಿ ಜಪ್ತಿ ಮಾಡಿದ ಇಡಿ

ED Attaches Fresh Rs.1,096 Cr Worth Assets of Gameskraft

ನವದೆಹಲಿ, ಜುಲೈ 24-ಆನ್‌ಲೈನ್‌‍ ಗೇಮಿಂಗ್‌ ಸಂಸ್ಥೆಯಾಗಿರುವ ಗೇಮ್ಸೌಕ್ರಾಫ್ಟ್‌‍ ವಿರುದ್ಧದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇಡಿ) 1,906 ಕೋಟಿ ಮೌಲ್ಯದ ಆಸ್ತಿಯನ್ನು ತಾತ್ಕಾಲಿಕವಾಗಿ ಜಪ್ತಿ ಮಾಡಿದೆ.

ಇಡಿ ಪ್ರಕಾರ, ಈ ಆನ್‌ಲೈನ್‌‍ ಗೇಮಿಂಗ್‌ ವೇದಿಕೆಯು ಆಟಗಾರರಲ್ಲಿ ವ್ಯಸನಕಾರಿ ವಾತಾವರಣ ಸೃಷ್ಟಿಸಿ, ಪದೇ ಪದೇ ಹಣ ಪಣಕ್ಕಿಟ್ಟು ಆಟವಾಡುವಂತೆ ಪ್ರೇರೇಪಿಸುತ್ತಿತ್ತು.ಜಪ್ತಿ ಮಾಡಲಾದ ಆಸ್ತಿಗಳಲ್ಲಿ ಬ್ಯಾಂಕ್‌ ಠೇವಣಿಗಳು, ಸ್ಥಿರ ಠೇವಣಿಗಳು (ಎಫ್‌ಡಿ), ಮ್ಯೂಚುವಲ್‌ ಫಂಡ್‌ಗಳು, ಕನ್ವರ್ಟಿಬಲ್‌ ನೋಟ್ಸ್‌‍, ಈಕ್ವಿಟಿ ಷೇರುಗಳು, ಫಾರ್ಮ್‌ಹೌಸ್‌‍, ವಸತಿ ಹಾಗೂ ವಾಣಿಜ್ಯ ಸ್ಥಿರಾಸ್ತಿಗಳು ಸೇರಿವೆ.

ಇವು ಗೇಮ್ಸೌಕ್ರಾಫ್ಟ್‌‍ ಟೆಕ್ನಾಲಜೀಸ್‌‍ ಪ್ರೈವೇಟ್‌ ಲಿಮಿಟೆಡ್‌ನ ಷೇರುದಾರರು, ಅವರ ಕುಟುಂಬ ಸದಸ್ಯರು, ಖಾಸಗಿ ಕುಟುಂಬ ಟ್ರಸ್ಟ್‌ಗಳು ಹಾಗೂ ಸಂಬಂಧಿತ ಸಂಸ್ಥೆಗಳ ಹೆಸರಿನಲ್ಲಿವೆ ಎಂದು ಇಡಿ ತಿಳಿಸಿದೆ.

ರಮ್ಮಿಕಲ್ಚರ್‌ , ರಮ್ಮಿಪ್ರೈಮ್‌ , ಪ್ಲೇಶಿಪ್‌ ಮತ್ತು ರಮ್ಮಿಟೈಮ್‌ ಆ್ಯಪ್‌ಗಳಿಗೆ ಸಂಬಂಧಿಸಿದ ಪ್ರಕರಣದಲ್ಲಿ, ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ ಅಡಿಯಲ್ಲಿ ಜುಲೈ 22ರಂದು ಈ ಜಪ್ತಿ ಕ್ರಮ ಕೈಗೊಳ್ಳಲಾಗಿದೆ ಎಂದು ಇಡಿ ಪ್ರಕಟಣೆಯಲ್ಲಿ ತಿಳಿಸಿದೆ.

ಗೇಮ್ಸೌಕ್ರಾಫ್ಟ್‌‍ ಮತ್ತು ರಮ್ಮಿಟೈಮ್‌ ಟೆಕ್ನಾಲಜೀಸ್‌‍ ಈ ಆ್ಯಪ್‌ಗಳ ಮೂಲಕ ರಿಯಲ್‌ ಮನಿ ಗೇಮ್ಸೌ ನಡೆಸುತ್ತಿದ್ದು, ತೆಲಂಗಾಣ, ಆಂಧ್ರ ಪ್ರದೇಶ ಮತ್ತು ತಮಿಳುನಾಡು ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಸುಮಾರು 3 ಕೋಟಿ ಬಳಕೆದಾರರನ್ನುಹೊಂದಿದ್ದವು ಎಂದು ಇಡಿ ಹೇಳಿದೆ. ಕೇಂದ್ರ ಸರ್ಕಾರವು 2025ರ ಆಗಸ್ಟ್‌ನಿಂದ ಭಾರತದಲ್ಲಿ ಆನ್‌ಲೈನ್‌‍ ಹಣ ಆಧಾರಿತ ಗೇಮಿಂಗ್‌ಗೆ ನಿಷೇಧ ಹೇರಿದೆ.

ಬಳಕೆದಾರರು ಪಣಕ್ಕಿಡುತ್ತಿದ್ದ ಹಣದ ಮೇಲೆ 10 ರಿಂದ 15 ಶೇಕಡಾ ವೇದಿಕೆ ಶುಲ್ಕ ವಸೂಲಿ ಮಾಡುವ ಮೂಲಕ ಈ ಕಂಪನಿಗಳು ಆದಾಯ ಗಳಿಸುತ್ತಿದ್ದವು ಎಂದು ಇಡಿ ಆರೋಪಿಸಿದೆ. ಇದಲ್ಲದೆ, ಆಟಗಾರರಿಗೆ ತಿಳಿಯದಂತೆ ಬಾಟ್‌ಗಳು (ಸ್ವಯಂಚಾಲಿತ ಸಾಫ್‌್ಟವೇರ್‌ ಮತ್ತು ಅಲ್ಗಾರಿದಮ್‌ಗಳು)ಅವರ ವಿರುದ್ಧ ಆಟವಾಡುವಂತೆ ವ್ಯವಸ್ಥೆ ಮಾಡಲಾಗಿತ್ತು ಎಂದು ಇಡಿ ತಿಳಿಸಿದೆ.

ಬೋನಸ್‌‍ಗಳು, ರೆಫರಲ್‌ ಪ್ರೋತ್ಸಾಹಧನ, ಉಚಿತ ಟೂರ್ನಮೆಂಟ್‌ ಪ್ರವೇಶ ಹಾಗೂ ವಿವಿಧ ಪ್ರಚಾರಾತಕ ಬಹುಮಾನಗಳ ಮೂಲಕ ಬಳಕೆದಾರರನ್ನು ಸೆಳೆದು, ನಿರಂತರವಾಗಿ ಆಟವಾಡಲು ಮತ್ತು ಹೆಚ್ಚು ಹಣ ಠೇವಣಿ ಮಾಡಲು ಪ್ರೇರೇಪಿಸಲಾಗುತ್ತಿತ್ತು ಎಂದು ಸಂಸ್ಥೆ ಆರೋಪಿಸಿದೆ.

ಈ ಅನೈತಿಕ ವಿಧಾನಗಳ ಮೂಲಕ ಕಂಪನಿಗಳು ವ್ಯಸನಕಾರಿ ಗೇಮಿಂಗ್‌ ವಾತಾವರಣ ಸೃಷ್ಟಿಸಿ, ಪದೇ ಪದೇ ಪಣಕ್ಕಿಡುವಂತೆ ಪ್ರೇರೇಪಿಸಿ, ವೇದಿಕೆ ಶುಲ್ಕದ ರೂಪದಲ್ಲಿ ಭಾರಿ ಪ್ರಮಾಣದ ಅಕ್ರಮ ಆದಾಯ ಗಳಿಸಿವೆ ಎಂದು ಇಡಿ ಹೇಳಿದೆ.

ಈ ಅಕ್ರಮ ಆದಾಯವನ್ನು ನಂತರ ಲಾಭಾಂಶ (ಡಿವಿಡೆಂಡ್‌‍) ಪಾವತಿ ಹಾಗೂ ಷೇರುಗಳ ಮರುಖರೀದಿ ಮೂಲಕ ವಿವಿಧ ಹಂತಗಳಲ್ಲಿ ವರ್ಗಾಯಿಸಿ ಕಾನೂನುಬದ್ಧ ಹಣದಂತೆ ತೋರಿಸಲಾಗಿದೆ ಎಂದು ಇಡಿ ಆರೋಪಿಸಿದೆ.ಇತ್ತೀಚಿನ ಕ್ರಮದೊಂದಿಗೆ ಈ ಪ್ರಕರಣದಲ್ಲಿ ಇದುವರೆಗೆ ಜಪ್ತಿ, ವಶಪಡಿಸಿಕೊಳ್ಳಲಾದ ಹಾಗೂ ಸ್ಥಗಿತಗೊಳಿಸಲಾದ ಒಟ್ಟು ಆಸ್ತಿಯ ಮೌಲ್ಯ 2,401 ಕೋಟಿಗೆ ಏರಿಕೆಯಾಗಿದೆ.

RELATED ARTICLES

Latest News