ನವದೆಹಲಿ,ಜು.24- ದೇಶಾದ್ಯಂತ ನೀಟ್, ಜೆಇಇ ಸೇರಿದಂತೆ ಪ್ರಮುಖ ಸ್ಪರ್ಧಾತಕ ಮತ್ತು ಸಾರ್ವಜನಿಕ ಪರೀಕ್ಷೆಗಳಲ್ಲಿ ಪದೇ ಪದೇ ವರದಿಯಾಗುತ್ತಿರುವ ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಸಂಘಟಿತ ಪರೀಕ್ಷಾ ಅಕ್ರಮಗಳನ್ನು ತಡೆಯಲು ಕೇಂದ್ರ ಸರ್ಕಾರ ಬಿಗಿ ಕ್ರಮದ ಹೆಜ್ಜೆ ಇಟ್ಟಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇತ್ತೀಚೆಗೆ ವಿಡಿಯೋ ಸಂದೇಶದ ಮೂಲಕ ಯುವಜನತೆಗೆ ನೀಡಿದ ಭರವಸೆಯ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದ್ದು, ಇಂತಹ ಪ್ರಕರಣಗಳ ತ್ವರಿತಗತಿಯ ವಿಲೇವಾರಿಗಾಗಿ ಶೀಘ್ರ ಗತಿ ನ್ಯಾಯಾಲಯಗಳನ್ನು ಸ್ಥಾಪಿಸುವ ನಿಬಂಧನೆಯನ್ನೂ ಸೇರಿಸಲಾಗುತ್ತಿದೆ.
ಸಾರ್ವಜನಿಕ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ಕಾಯ್ದೆ, 2024 ಕ್ಕೆ (Public Examinations Act, 2024) ತಿದ್ದುಪಡಿ ತರಲು ಮೋದಿ ಸರ್ಕಾರ ಮುಂದಾಗಿದ್ದು, ಇಂದು ನಡೆಯಲಿರುವ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಈ ಪ್ರಸ್ತಾವನೆಗೆ ಅನುಮೋದನೆ ದೊರೆಯುವ ಸಾಧ್ಯತೆಯಿದೆ.
ಪ್ರಶ್ನೆಪತ್ರಿಕೆ ಸೋರಿಕೆ ಸಿಂಡಿಕೇಟ್ ಹಾಗೂ ಅಂತರರಾಜ್ಯ ವಂಚನೆ ಜಾಲವನ್ನು ಸಂಪೂರ್ಣವಾಗಿ ತೊಡೆದು ಹಾಕುವ ಉದ್ದೇಶದಿಂದ ಸರ್ಕಾರ ಕಾನೂನಿನಲ್ಲಿ ಹಲವು ಪ್ರಮುಖ ಬದಲಾವಣೆಗಳನ್ನು ಪರಿಗಣಿಸುತ್ತಿದೆ.
ಪ್ರಸ್ತುತ ಚಾಲ್ತಿಯಲ್ಲಿರುವ ನಿಯಮಗಳ ಪ್ರಕಾರ ಅಕ್ರಮ ಎಸಗುವ ವ್ಯಕ್ತಿಗಳಿಗೆ 3 ರಿಂದ 5 ವರ್ಷಗಳ ಜೈಲು ಶಿಕ್ಷೆ ಹಾಗೂ 10 ಲಕ್ಷ ರೂಪಾಯಿಯವರೆಗೆ ದಂಡ ವಿಧಿಸಲು ಅವಕಾಶವಿತ್ತು. ಆದರೆ, ಈಗ ಪ್ರಸ್ತಾವಿತ ಹೊಸ ತಿದ್ದುಪಡಿಯ ಪ್ರಕಾರ, ಜೈಲು ಶಿಕ್ಷೆ: ಶಿಕ್ಷೆಯ ಅವಧಿಯನ್ನು ಕನಿಷ್ಠ 5 ರಿಂದ 10 ವರ್ಷಗಳವರೆಗೆ ಹೆಚ್ಚಿಸಲಾಗುತ್ತಿದೆ. ದಂಡದ ಮೊತ್ತವನ್ನು ಗರಿಷ್ಠ 1 ಕೋಟಿ ರೂಪಾಯಿವರೆಗೆ ಏರಿಸಲು ಉದ್ದೇಶಿಸಲಾಗಿದೆ.
ಸಂಘಟಿತ ಅಪರಾಧಗಳಿಗೆ ಬಿಸಿ :
ಪ್ರಶ್ನೆಪತ್ರಿಕೆ ಲೀಕ್ ಮಾಫಿಯಾ, ಗ್ಯಾಂಗ್‌ಗಳು ಅಥವಾ ಖಾಸಗಿ ಏಜೆನ್ಸಿಗಳು ಭಾಗಿಯಾಗಿದ್ದರೆ, ಅವರ ಆಸ್ತಿ ಮುಟ್ಟುಗೋಲು ಹಾಗೂ ಭಾರೀ ದಂಡ ವಿಧಿಸಲು ಕಾನೂನಿನಲ್ಲಿ ಜಾಗ ನೀಡಲಾಗಿದೆ.
ಪ್ರಕರಣಗಳನ್ನು ವರ್ಷಗಟ್ಟಲೆ ಎಳೆಯದೆ, ಕೆಲವೇ ತಿಂಗಳುಗಳಲ್ಲಿ ಆರೋಪಿಗಳಿಗೆ ಶಿಕ್ಷೆ ಕಾಯ್ದಿರಿಸಲು ಪ್ರತ್ಯೇಕ ಫಾಸ್ಟ್ ಟ್ರ್ಯಾಕ್ ನ್ಯಾಯಾಲಯಗಳನ್ನು ಸ್ಥಾಪಿಸಲಾಗುತ್ತದೆ.
ವಿಶೇಷ ತ್ವರಿತ ನ್ಯಾಯಾಲಯಗಳು :
ಅಕ್ರಮ ಪ್ರಕರಣಗಳ ವಿಚಾರಣೆಗೆ ಪ್ರತ್ಯೇಕ ನ್ಯಾಯಾಲಯಗಳ ಸ್ಥಾಪನೆ. ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳ ತನಿಖೆ ಹಾಗೂ ವಿಚಾರಣೆಯನ್ನು ಒಂದು ವರ್ಷ ಅಥವಾ ಅದಕ್ಕಿಂತ ಕಡಿಮೆ ಅವಧಿಯಲ್ಲಿ ಪೂರ್ಣಗೊಳಿಸಿ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸುವುದನ್ನು ಕಡ್ಡಾಯಗೊಳಿಸುವುದು. ಹಾಲಿ ಇರುವ ಕಾಯ್ದೆಯ ಶಿಕ್ಷೆಯ ಪ್ರಮಾಣಕ್ಕಿಂತಲೂ ಹೆಚ್ಚಿನ ಜೈಲು ಶಿಕ್ಷೆ ಹಾಗೂ ಭಾರೀ ಪ್ರಮಾಣದ ಆರ್ಥಿಕ ದಂಡ ವಿಧಿಸುವ ನಿಬಂಧನೆ ಇದೆ.
ಪ್ರಸ್ತುತ ಪ್ರಸ್ತಾವನೆಯಲ್ಲಿ ಸಂಘಟಿತ ಸಿಂಡಿಕೇಟ್‌ಗಳಿಗೆ 10 ವರ್ಷಕ್ಕಿಂತಲೂ ಹೆಚ್ಚಿನ ದೀರ್ಘಾವಧಿ ಜೈಲು ಶಿಕ್ಷೆ ಹಾಗೂ ಕಠಿಣ ದಂಡದ ಶಿಕ್ಷೆಯನ್ನು ನಿಗದಿಪಡಿಸುವ ಸುಧಾರಿತ ಚೌಕಟ್ಟನ್ನು ಸಿದ್ಧಪಡಿಸಲಾಗುತ್ತಿದೆ.
ಸಚಿವ ಸಂಪುಟದ ಅನುಮೋದನೆ ದೊರೆತ ನಂತರ, ಚಾಲ್ತಿಯಲ್ಲಿರುವ ಸಂಸತ್ ಅಧಿವೇಶನದಲ್ಲೇ ಈ ತಿದ್ದುಪಡಿ ವಿಧೇಯಕವನ್ನು ಮಂಡಿಸಿ ಕಾಯ್ದೆಯಾಗಿ ಜಾರಿಗೆ ತರಲು ಸರ್ಕಾರ ಯೋಜನೆ ರೂಪಿಸಿದೆ. ಈ ಮೂಲಕ ಲಕ್ಷಾಂತರ ಅಭ್ಯರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟವಾಡುವ ವಂಚನೆ ಜಾಲಕ್ಕೆ ಶಾಶ್ವತ ತಡೆ ಒಡ್ಡಲು ಕೇಂದ್ರ ಸರ್ಕಾರ ಸಜ್ಜಾಗಿದೆ.
ಇತ್ತೀಚಿನ ವರ್ಷಗಳಲ್ಲಿ ದೇಶಾದ್ಯಂತ ನಡೆದ ಪರೀಕ್ಷಾ ಅಕ್ರಮಗಳು ದೇಶದ ಶೈಕ್ಷಣಿಕ ವ್ಯವಸ್ಥೆಯನ್ನೇ ತಲೆಕೆಳಗಾಗಿಸಿದ್ದವು.
NEET&UG ಮತ್ತು UGC&NET ಹಗರಣಗಳು:
ಇತ್ತೀಚೆಗೆ ನಡೆದ ದೇಶವ್ಯಾಪಿ ನೀಟ್ ವೈದ್ಯಕೀಯ ಪ್ರವೇಶ ಪರೀಕ್ಷೆ ಮತ್ತು UGC&NET ಪರೀಕ್ಷೆಗಳ ಪೇಪರ್ ಲೀಕ್ ಆರೋಪಗಳು ಲಕ್ಷಾಂತರ ವಿದ್ಯಾರ್ಥಿಗಳನ್ನು ರಸ್ತೆಗೆ ತಂದಿದ್ದವು.
ಕರ್ನಾಟಕದಲ್ಲಿ ನಡೆದ ಪಿಎಸ್‌ಐ ನೇಮಕಾತಿ ಅಕ್ರಮ ಹಾಗೂ ಬ್ಲೂಟೂತ್ ಬಳಸಿ ಪರೀಕ್ಷೆ ಬರೆದ ಪ್ರಕರಣಗಳು ರಾಜ್ಯಾದ್ಯಂತ ದೊಡ್ಡ ಸಂಚಲನ ಮೂಡಿಸಿದ್ದವು.
ರಾಜಸ್ಥಾನ, ಮಧ್ಯಪ್ರದೇಶ (ವ್ಯಾಪಂ ಹಗರಣದ ನೆರಳು), ಉತ್ತರ ಪ್ರದೇಶ ಮತ್ತು ಬಿಹಾರಗಳಲ್ಲಿ ಪೋಲಿಸ್, ಶಿಕ್ಷಕರ ನೇಮಕಾತಿ ಪರೀಕ್ಷೆಗಳ ಪೇಪರ್ ಲೀಕ್ನಿಂದಾಗಿ ಲಕ್ಷಾಂತರ ಅಭ್ಯರ್ಥಿಗಳ ವಯೋಮಿತಿ ಮೀರಿ ಭವಿಷ್ಯ ಕತ್ತಲಾಗಿತ್ತು.
ಈ ಎಲ್ಲಾ ಕಹಿ ಘಟನೆಗಳು ಹಾಗೂ ಸಂಘಟಿತ ಪೇಪರ್ ಲೀಕ್ ಗ್ಯಾಂಗ್‌ಗಳ ಜಾಲವನ್ನು ಸಂಪೂರ್ಣವಾಗಿ ಧ್ವಂಸಗೊಳಿಸಲು ಪ್ರಸ್ತುತ ಇರುವ ಶಿಕ್ಷೆ ಸಾಲದು ಎಂಬುದನ್ನು ಸರ್ಕಾರ ಮನಗಂಡಿದೆ. ಹೊಸ ತಿದ್ದುಪಡಿ ಕಾನೂನು ಜಾರಿಗೆ ಬಂದರೆ, ಕೇವಲ ಸಣ್ಣಪುಟ್ಟ ಮಧ್ಯವರ್ತಿಗಳಷ್ಟೇ ಅಲ್ಲದೆ, ಪರೀಕ್ಷೆ ನಡೆಸುವ ಖಾಸಗಿ ಸಂಸ್ಥೆಗಳು, ಪರೀಕ್ಷಾ ಕೇಂದ್ರಗಳ ಮಾಲೀಕರು ಮತ್ತು ಕೋಚಿಂಗ್ ಸೆಂಟರ್ ಮಾಫಿಯಾಗಳು ಬಲವಾದ ಕಾನೂನು ಬಲೆಗೆ ಬೀಳಲಿವೆ.
ಕಠಿಣ ಶಿಕ್ಷೆ ಮತ್ತು 1 ಕೋಟಿ ದಂಡದ ಭೀತಿಯು ಅಪರಾಧಿಗಳಲ್ಲಿ ನಡುಕ ಹುಟ್ಟಿಸಲಿದ್ದು, ಪ್ರಾಮಾಣಿಕವಾಗಿ ರಾತ್ರಿ-ಹಗಲು ಕಷ್ಟಪಟ್ಟು ಓದುವ ಕೋಟ್ಯಂತರ ವಿದ್ಯಾರ್ಥಿಗಳಿಗೆ ಹಾಗೂ ಯುವ ಉದ್ಯೋಗಾಕಾಂಕ್ಷಿಗಳಿಗೆ ಹೊಸ ಭರವಸೆ ನೀಡಲಿದೆ.
ಅಪರಾಧದ ಸ್ವರೂಪ -ಜೈಲು ಶಿಕ್ಷೆ-ದಂಡದ ಪ್ರಮಾಣ :
ವೈಯಕ್ತಿಕ ಅಕ್ರಮ / ಸೋರಿಕೆ -3 ರಿಂದ 5 ವರ್ಷಗಳು 10 ಲಕ್ಷದವರೆಗೆ
ಸಂಘಟಿತ ಪರೀಕ್ಷಾ ವಂಚನೆ ಜಾಲ
5 ರಿಂದ 10 ವರ್ಷಗಳು-ಕನಿಷ್ಠ 1 ಕೋಟಿ
