ಇರಾನ್, ನ.3- ಅರಬ್ಬಿ ಸಮುದ್ರದಲ್ಲಿ ಸೊಮಾಲಿ ಕಡಲ್ಗಳ್ಳರ ಹಿಡಿತಕ್ಕೆ ಸಿಲುಕಿದ್ದ ಇರಾನ್ನ ಮೀನುಗಾರಿಕಾ ಹಡಗನ್ನು ಭಾರತೀಯ ನೌಕಾಪಡೆ ರಕ್ಷಿಸುವಲ್ಲಿ ಯಶಸ್ವಿಯಾಗಿದೆ.ಸತತ 48 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿದ ನೌಕಾಪಡೆ, ಹಡಗಿನಲ್ಲಿದ್ದ 20 ಸಿಬ್ಬಂದಿಯನ್ನು ಸುರಕ್ಷಿತವಾಗಿ ಬಿಡುಗಡೆ ಮಾಡಿದೆ. ಮುಂಬೈನಿಂದ ಸುಮಾರು 3,000 ಕಿಲೋಮೀಟರ್ ದೂರದಲ್ಲಿ ನಡೆದ ಈ ಕಾರ್ಯಾಚರಣೆ, ಹಿಂದೂ ಮಹಾಸಾಗರ ಪ್ರದೇಶದಲ್ಲಿ ಭಾರತದ ಕಡಲ ಭದ್ರತಾ ಸಾಮರ್ಥ್ಯವನ್ನು ಮತ್ತೊಮ್ಮೆ ಪ್ರದರ್ಶಿಸಿದೆ.
ಅಜಿನಿ ಎಂದು ಗುರುತಿಸಲಾದ ಇರಾನ್ನ ಮೀನುಗಾರಿಕಾ ಹಡಗನ್ನು ಅಕ್ಟೋಬರ್ 29ರಂದು ಸೊಮಾಲಿಯಾದ ಈಶಾನ್ಯ ಕರಾವಳಿಯ ಬಳಿ ಕಡಲ್ಗಳ್ಳರು ವಶಪಡಿಸಿಕೊಂಡಿದ್ದರು. ಬಂದರ್ ಬೇಲಾ ಮತ್ತು ಹಫುನ್ ಕರಾವಳಿ ಪಟ್ಟಣಗಳ ನಡುವಿನ ಸಮುದ್ರ ಪ್ರದೇಶದಲ್ಲಿ ಈ ಘಟನೆ ನಡೆದಿತ್ತು. ಹಡಗಿನಲ್ಲಿ 20 ಮಂದಿ ಸಿಬ್ಬಂದಿ ಇದ್ದರು. ಶಸ್ತ್ರಸಜ್ಜಿತ ಕಡಲ್ಗಳ್ಳರು ಹಡಗನ್ನು ತಮ್ಮ ವಶಕ್ಕೆ ಪಡೆದಿರುವ ಮಾಹಿತಿ ದೊರೆತ ತಕ್ಷಣ ಭಾರತೀಯ ನೌಕಾಪಡೆ ರಕ್ಷಣಾ ಕಾರ್ಯಾಚರಣೆಗೆ ಮುಂದಾಯಿತು.ನಿನ್ನೆ ನಡೆದ ಕಾರ್ಯಾಚರಣೆ ಯಶಸ್ವಿಯಾಗಿ ಪೂರ್ಣಗೊಂಡಿತು.
ಐಎನ್ಎಸ್ ಕೋಲ್ಕತ್ತಾ ನೇತೃತ್ವದಲ್ಲಿ ಕಾರ್ಯಾಚರಣೆ
ಈ ಕಾರ್ಯಾಚರಣೆಯಲ್ಲಿ ಭಾರತೀಯ ನೌಕಾಪಡೆಯ ಯುದ್ಧನೌಕೆ ಐಎನ್ಎಸ್ ಕೋಲ್ಕತ್ತಾ ಪ್ರಮುಖ ಪಾತ್ರ ವಹಿಸಿತು. ಸಮುದ್ರದಲ್ಲಿ ಹಡಗಿನ ಚಲನವಲನವನ್ನು ಪತ್ತೆಹಚ್ಚಿ, ಅದರ ಬಳಿ ತೆರಳಿ ಕಡಲ್ಗಳ್ಳರನ್ನು ಎದುರಿಸಿ ಸಿಬ್ಬಂದಿಯನ್ನು ಸುರಕ್ಷಿತವಾಗಿ ಬಿಡುಗಡೆ ಮಾಡಲಾಯಿತು.
ಭಾರತೀಯ ವಾಯುಪಡೆಯೂ ಕಾರ್ಯಾಚರಣೆಗೆ ಅಗತ್ಯ ಬೆಂಬಲ ನೀಡಿತು. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಈ ಕಾರ್ಯಾಚರಣೆಯನ್ನು ಶ್ಲಾಘಿಸಿದ್ದಾರೆ. ಶಸ್ತ್ರಸಜ್ಜಿತ ಕಡಲ್ಗಳ್ಳರಿಂದ ಹಡಗು ಮತ್ತು ಸಿಬ್ಬಂದಿಯನ್ನು ಸುರಕ್ಷಿತವಾಗಿ ಬಿಡುಗಡೆ ಮಾಡಿರುವುದು ನೌಕಾಪಡೆಯ ಉನ್ನತ ಕಾರ್ಯಾಚರಣಾ ಸನ್ನದ್ಧತೆಯನ್ನು ತೋರಿಸುತ್ತದೆ ಎಂದು ಅವರು ಹೇಳಿದ್ದಾರೆ.
ಸಮುದ್ರದಲ್ಲಿ ಮೀನುಗಾರಿಕಾ ಹಡಗುಗಳನ್ನು ಅಪಹರಿಸುವುದರ ಹಿಂದೆ ಕೇವಲ ಸಿಬ್ಬಂದಿಯನ್ನು ಒತ್ತೆಯಾಳಾಗಿ ಇಟ್ಟು ಹಣ ಪಡೆಯುವ ಉದ್ದೇಶ ಮಾತ್ರ ಇರುವುದಿಲ್ಲ. ಇಂತಹ ಹಡಗುಗಳನ್ನು ಕಡಲ್ಗಳ್ಳರು ದೊಡ್ಡ ಸರಕು ಹಡಗುಗಳ ಮೇಲೆ ದಾಳಿ ನಡೆಸಲು ತಾತ್ಕಾಲಿಕ ನೆಲೆಯಾಗಿ ಬಳಸುವ ಸಾಧ್ಯತೆಯೂ ಇರುತ್ತದೆ.
ಈ ಪ್ರಕರಣದಲ್ಲೂ ಅಜಿನಿ ಹಡಗು ಪ್ರಮುಖ ವಾಣಿಜ್ಯ ಹಡಗುಗಳ ಸಂಚಾರ ಮಾರ್ಗದತ್ತ ಸಾಗುತ್ತಿರುವುದನ್ನು ಕಡಲ ಭದ್ರತಾ ಸಂಸ್ಥೆಗಳು ಗಮನಿಸಿದ್ದವು. ಅದನ್ನು ಮದರ್ಶಿಪ್ ಆಗಿ ಬಳಸಿಕೊಂಡು ಇತರ ಹಡಗುಗಳ ಮೇಲೆ ದಾಳಿ ನಡೆಸುವ ಆತಂಕ ವ್ಯಕ್ತವಾಗಿತ್ತು. ಹೀಗಾಗಿ ಭಾರತೀಯ ನೌಕಾಪಡೆಯ ತ್ವರಿತ ಕಾರ್ಯಾಚರಣೆ ಕೇವಲ 20 ಮಂದಿಯ ರಕ್ಷಣೆಗೆ ಮಾತ್ರವಲ್ಲ, ಸಮುದ್ರ ಮಾರ್ಗಗಳ ಭದ್ರತೆಯ ದೃಷ್ಟಿಯಿಂದಲೂ ಮಹತ್ವ ಪಡೆದಿದೆ.
