Homeರಾಷ್ಟ್ರೀಯಉಗ್ರ ದಾಳಿ ಭೀತಿ : ದೆಹಲಿ, ಉತ್ತರಾಖಂಡದಲ್ಲಿ ಹೈ ಅಲರ್ಟ್‌ ಘೋಷಣೆ

ಉಗ್ರ ದಾಳಿ ಭೀತಿ : ದೆಹಲಿ, ಉತ್ತರಾಖಂಡದಲ್ಲಿ ಹೈ ಅಲರ್ಟ್‌ ಘೋಷಣೆ

Intel alert issued over possible terror threat to Delhi

ನವದೆಹಲಿ, ಜೂ.28- ಭಯೋತ್ಪಾದಕರ ದಾಳಿ ಭೀತಿ ಹಿನ್ನೆಲೆಯಲ್ಲಿ ರಾಷ್ಟ್ರ ರಾಜಧಾನಿ ದೆಹಲಿ ಹಾಗೂ ಉತ್ತರಾಖಂಡ ರಾಜ್ಯಗಳಲ್ಲಿ ಭದ್ರತೆಯನ್ನು ತೀವ್ರಗೊಳಿಸಲಾಗಿದ್ದು, ಗುಪ್ತಚರ ಸಂಸ್ಥೆಗಳು ಹೈ ಅಲರ್ಟ್‌ ಘೋಷಿಸಿವೆ. ಮುಂಬರುವ ದಿನಗಳಲ್ಲಿ ಉಗ್ರರು ದಾಳಿ ನಡೆಸುವ ಸಾಧ್ಯತೆಯಿದೆ ಎಂದು ಎಚ್ಚರಿಸುವ ಇ-ಮೇಲ್‌ ಸಂದೇಶ ಬಂದ ಬಳಿಕ ಬಿಗಿ ಭದ್ರತೆ ನಿಯೋಜಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಈ ಬೆಳವಣಿಗೆ ಉತ್ತರಾ ಖಂಡದ ರುದ್ರಪ್ರಯಾಗ ಜಿಲ್ಲೆಯ ನಾಗ್ರಾಸು ಗುರುದ್ವಾರದಲ್ಲಿ ನಿಹಾಂಗ್‌ ಸಿಖ್ಖರು ಮತ್ತು ಆಡಳಿತದ ನಡುವೆ ಉಂಟಾಗಿದ್ದ ಉದ್ವಿಗ್ನತೆಯ ಬೆನ್ನಲ್ಲೇ ನಡೆದಿದೆ. ಜೂನ್‌ 16ರಂದು ಕರ್ಣಪ್ರಯಾಗ ಮಾರುಕಟ್ಟೆಯಲ್ಲಿ ಸ್ಥಳೀಯರೊಂದಿಗೆ ನಡೆದ ಘರ್ಷಣೆಗೆ ಸಂಬಂಧಿಸಿದಂತೆ ಬಂಧಿಸಲಾಗಿದ್ದ ನಾಲ್ವರು ನಿಹಾಂಗ್‌ ಸಿಖ್‌ರನ್ನು ಬಿಡುಗಡೆ ಮಾಡುವಂತೆ ಅವರು ಆಗ್ರಹಿಸಿದ್ದರು.

ಮೂರು ದಿನಗಳ ಕಾಲ ಮುಂದುವರಿದಿದ್ದ ಪ್ರತಿಭಟನೆ: ಜೂನ್‌ 23ರಂದು ಸಿಖ್‌ ಪ್ರತಿನಿಧಿಗಳ ಮಧ್ಯಸ್ಥಿಕೆಯಿಂದ ಅಂತ್ಯಗೊಂಡಿತ್ತು. ಆದರೆ, ಜೂನ್‌ 25ರ ರಾತ್ರಿ, ಹಿಮಾಚಲ ಪ್ರದೇಶಕ್ಕೆ ಹೊಂದಿಕೊಂಡಿರುವ ಡೆಹ್ರಾಡೂನ್‌ ಜಿಲ್ಲೆಯ ಕುಲ್ಹಾಲ್‌ ಗಡಿ ಮೂಲಕ ನಿಹಾಂಗ್‌ ಸಿಖ್ಖರ ಗುಂಪೊಂದು ಉತ್ತರಾಖಂಡ ಪ್ರವೇಶಿಸಲು ಯತ್ನಿಸಿದ್ದು, ಬಂಧಿತರ ಬಿಡುಗಡೆಗೆ ಒತ್ತಾಯಿಸಿತ್ತು.

ಬಳಿಕ ಅಧಿಕಾರಿಗಳು ಅವರನ್ನು ಮನವೊಲಿಸಿ ಪಾಂಟಾ ಸಾಹಿಬ್‌ ಕಡೆಗೆ ಹಿಂತಿರುಗುವಂತೆ ಮಾಡಿದ್ದರು.ಇದೇ ವೇಳೆ, ಬಂಧಿತರಾಗಿದ್ದ ನಾಲ್ವರು ನಿಹಾಂಗ್‌ ಸಿಖ್ಖರಿಗೆ ಶನಿವಾರ ಉತ್ತರಾಖಂಡದ ಜಿಲ್ಲಾ ಮತ್ತು ಸೆಷನ್‌್ಸ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಗುಪ್ತಚರ ಮೂಲಗಳ ಪ್ರಕಾರ ಬೆದರಿಕೆ ಇ-ಮೇಲ್‌ನಲ್ಲಿ ದೆಹಲಿ ಮತ್ತು ಉತ್ತರಾಖಂಡದ ಹಲವು ದೇವಾಲಯಗಳು, ಸರ್ಕಾರಿ ಕಚೇರಿಗಳು, ರೈಲು ನಿಲ್ದಾಣಗಳು ಹಾಗೂ ಪೊಲೀಸ್‌‍ ಕಟ್ಟಡಗಳನ್ನು ಸಂಭಾವ್ಯ ಗುರಿಗಳಾಗಿ ಉಲ್ಲೇಖಿಸಲಾಗಿದೆ. ಕೆಲವು ರಾಜಕೀಯ ನಾಯಕರ ಹೆಸರೂ ಪ್ರಸ್ತಾಪವಾಗಿರುವುದರಿಂದ ಭದ್ರತಾ ಸಂಸ್ಥೆಗಳು ಹೆಚ್ಚಿನ ಎಚ್ಚರಿಕೆ ವಹಿಸಿವೆ.

ಬೆದರಿಕೆ ಹಿನ್ನೆಲೆಯಲ್ಲಿ ದೆಹಲಿ ಪೊಲೀಸ್‌‍, ಉತ್ತರಾಖಂಡ ಪೊಲೀಸ್‌‍ ಹಾಗೂ ಕೇಂದ್ರ ಗುಪ್ತಚರ ಸಂಸ್ಥೆಗಳು ಸೂಕ್ಷ್ಮ ಮತ್ತು ಜನನಿಬಿಡ ಪ್ರದೇಶಗಳಲ್ಲಿ ಭದ್ರತೆಯನ್ನು ಹೆಚ್ಚಿಸಿವೆ.ಪ್ರಮುಖ ಧಾರ್ಮಿಕ ಸ್ಥಳಗಳು, ಸರ್ಕಾರಿ ಕಟ್ಟಡಗಳು, ರೈಲು ನಿಲ್ದಾಣಗಳು ಹಾಗೂ ಸಾರಿಗೆ ಕೇಂದ್ರಗಳಲ್ಲಿ ಹೆಚ್ಚುವರಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಸ್ಥಳೀಯ ಪೊಲೀಸರಿಗೆ ಗಸ್ತು ತೀವ್ರಗೊಳಿಸುವಂತೆ ಸೂಚಿಸಲಾಗಿದೆ.

ಬೆದರಿಕೆ ಇ-ಮೇಲ್‌ನ ಸತ್ಯಾಸತ್ಯತೆ ಪರಿಶೀಲಿಸಲು ದೆಹಲಿ ಪೊಲೀಸರು ತನಿಖೆ ಆರಂಭಿಸಿದ್ದು, ಸೈಬರ್‌ ತಜ್ಞರು ಇ-ಮೇಲ್‌ನ ಡಿಜಿಟಲ್‌ ಮೂಲವನ್ನು ಪತ್ತೆಹಚ್ಚುವ ಕಾರ್ಯದಲ್ಲಿ ತೊಡಗಿದ್ದಾರೆ.ಸದ್ಯಕ್ಕೆ ದಾಳಿ ನಡೆಯುವ ನಿಖರ ಸ್ಥಳ ಅಥವಾ ಸಮಯದ ಕುರಿತು ಯಾವುದೇ ಖಚಿತ ಮಾಹಿತಿ ಲಭ್ಯವಾಗಿಲ್ಲ. ಆದಾಗ್ಯೂ, ಮುನ್ನೆಚ್ಚರಿಕಾ ಕ್ರಮವಾಗಿ ಭದ್ರತಾ ವ್ಯವಸ್ಥೆಗಳನ್ನು ಬಿಗಿಗೊಳಿಸಲಾಗಿದ್ದು, ಯಾವುದೇ ಅನುಮಾನಾಸ್ಪದ ಚಟುವಟಿಕೆಗಳ ಮೇಲೆ ನಿಗಾ ಇರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

RELATED ARTICLES

Latest News