Homeರಾಷ್ಟ್ರೀಯರಾಹುಲ್‌ ಗಾಂಧಿಯನ್ನು ಜೀವನಪರ್ಯಂತ ಅಣಕು ಪ್ರಧಾನಿಯಾಗಿ ಇಟ್ಟುಕೊಳ್ಳಿ : ಬಿಜೆಪಿ ವ್ಯಂಗ್ಯ

ರಾಹುಲ್‌ ಗಾಂಧಿಯನ್ನು ಜೀವನಪರ್ಯಂತ ಅಣಕು ಪ್ರಧಾನಿಯಾಗಿ ಇಟ್ಟುಕೊಳ್ಳಿ : ಬಿಜೆಪಿ ವ್ಯಂಗ್ಯ

ನವದೆಹಲಿ, ನ.1- ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ಇಂಡಿ ಮೈತ್ರಿಕೂಟ ನಡೆಸಿದ ಸಾಂಕೇತಿಕ ಸಾರ್ವಜನಿಕ ದೋಷಾರೋಪಣೆ ಕಾರ್ಯಕ್ರಮಕ್ಕೆ ಬಿಜೆಪಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.ವಿರೋಧ ಪಕ್ಷಗಳು ಸಂಸತ್ತು ಮತ್ತು ಪ್ರಜಾಪ್ರಭುತ್ವದ ವ್ಯವಸ್ಥೆಯನ್ನು ಅಣಕಿಸುತ್ತಿವೆ ಎಂದು ಆರೋಪಿಸಿರುವ ಬಿಜೆಪಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯನ್ನು ಜೀವನಪರ್ಯಂತ ಅಣಕು ಪ್ರಧಾನಿಯಾಗಿ ಇಟ್ಟುಕೊಳ್ಳಲಿ ಎಂದು ವ್ಯಂಗ್ಯವಾಡಿದೆ.

ದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಪಕ್ಷದ ವಕ್ತಾರ ಸಂಬಿತ್ ಪಾತ್ರಾ, ಕಾಂಗ್ರೆಸ್ ಮತ್ತು ಇಂಡಿ ಮೈತ್ರಿಕೂಟದ ವಿರುದ್ಧ ವಾಗ್ದಾಳಿ ನಡೆಸಿದರು. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ಸಾಂಕೇತಿಕ ಸಾರ್ವಜನಿಕ ದೋಷಾರೋಪಣೆ ನಡೆಸುವ ಮೂಲಕ ವಿರೋಧ ಪಕ್ಷಗಳು ಪ್ರಜಾಪ್ರಭುತ್ವದ ಸಂಸ್ಥೆಗಳನ್ನು ದುರ್ಬಲಗೊಳಿಸುವ ಪ್ರಯತ್ನ ಮಾಡುತ್ತಿವೆ ಎಂದು ಆರೋಪಿಸಿದರು.

ರಾಹುಲ್ ಗಾಂಧಿಯನ್ನು ಪ್ರಧಾನಿಯಾಗಿ ಬಿಂಬಿಸಲು ಕಾಂಗ್ರೆಸ್ ನಿರಂತರ ಪ್ರಯತ್ನ ನಡೆಸುತ್ತಿದೆ ಎಂದು ಟೀಕಿಸಿದ ಸಂಬಿತ್ ಪಾತ್ರಾ, ವಿರೋಧ ಪಕ್ಷಗಳು ತಮ್ಮದೇ ಆದ ಅಣಕು ಸಂಸತ್ತನ್ನು ರಚಿಸಿಕೊಂಡು ಅಲ್ಲಿ ರಾಹುಲ್ ಗಾಂಧಿಯನ್ನು ಪ್ರಧಾನಿಯನ್ನಾಗಿ ಕೂರಿಸಿಕೊಳ್ಳಲಿ ಎಂದು ಹೇಳಿದರು. “ನೀವು ರಚಿಸಿರುವ ಅಣಕು ಸಂಸತ್ತನ್ನು ಕೆಡವಬೇಡಿ. ರಾಹುಲ್ ಗಾಂಧಿಯನ್ನು ಆಡಳಿತ ಪಕ್ಷದ ಪೀಠದಲ್ಲಿ ಕೂರಿಸಿ. ಅವರಿಗೆ ಕುರ್ತಾ-ಪೈಜಾಮ ತೊಡಿಸಿ, ಪ್ರತಿದಿನ ಪ್ರಧಾನಮಂತ್ರಿ ಎಂದು ಘೋಷಣೆ ಕೂಗುತ್ತಾ ಜೀವನಪರ್ಯಂತ ಅವರನ್ನು ನಿಮ್ಮ ಅಣಕು ಪ್ರಧಾನಿಯಾಗಿ ಇಟ್ಟುಕೊಳ್ಳಿ. ಇದಕ್ಕೆ ನಮಗೆ ಯಾವುದೇ ಆಕ್ಷೇಪವಿಲ್ಲ” ಎಂದು ವ್ಯಂಗ್ಯವಾಡಿದರು.

ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ನಡೆಸುತ್ತಿರುವ ರಾಜಕೀಯ ಪ್ರಯತ್ನಗಳು ಫಲ ನೀಡುವುದಿಲ್ಲ ಎಂದ ಅವರು, ವಿರೋಧ ಪಕ್ಷಗಳ ಪ್ರತಿಭಟನೆ ಮತ್ತು ಮೆರವಣಿಗೆಗಳಿಂದ ರಾಜಕೀಯವಾಗಿ ಯಾವುದೇ ಬದಲಾವಣೆ ಸಾಧ್ಯವಿಲ್ಲ ಎಂದು ಟೀಕಿಸಿದರು. ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಅಕ್ರಮಗಳು ನಡೆದಿವೆ ಎಂಬ ಕಾಂಗ್ರೆಸ್ ಆರೋಪಗಳನ್ನು ಸಂಬಿತ್ ಪಾತ್ರಾ ತಳ್ಳಿಹಾಕಿದರು. ಚುನಾವಣಾ ಆಯೋಗದ ಕಾರ್ಯವೈಖರಿ ಕುರಿತು ಕಾಂಗ್ರೆಸ್ ಸುಳ್ಳು ಆರೋಪಗಳನ್ನು ಮಾಡುತ್ತಿದೆ ಎಂದು ದೂರಿದರು.

ಇದೇ ವೇಳೆ, ‘ವೋಟ್ ಚೋರಿ’ ವಿಚಾರವಾಗಿ ಕಾಂಗ್ರೆಸ್ ಮಾಡುತ್ತಿರುವ ಆರೋಪಗಳಿಗೆ ಪ್ರತಿಯಾಗಿ, ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರ ಆಯ್ಕೆಯ ಸಂದರ್ಭದಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರಿಗೆ ಹೆಚ್ಚಿನ ಬೆಂಬಲವಿದ್ದರೂ ನೆಹರು ಪ್ರಧಾನಿಯಾದರು ಎಂದು ಉಲ್ಲೇಖಿಸಿ ಬಿಜೆಪಿ ನಾಯಕರು ಕಾಂಗ್ರೆಸ್ ವಿರುದ್ಧ ರಾಜಕೀಯ ವಾಗ್ದಾಳಿ ನಡೆಸಿದರು.

RELATED ARTICLES

Latest News