Homeರಾಷ್ಟ್ರೀಯಬಿಹಾರ : ಬಿಜೆಪಿ ಸೇರಿದ ಇಬ್ಬರು ಸ್ವತಂತ್ರ ಎಂಎಲ್‌ಸಿಗಳು

ಬಿಹಾರ : ಬಿಜೆಪಿ ಸೇರಿದ ಇಬ್ಬರು ಸ್ವತಂತ್ರ ಎಂಎಲ್‌ಸಿಗಳು

ಪಾಟ್ನಾ, ನ.1- ಬಿಹಾರ ವಿಧಾನ ಪರಿಷತ್ತಿನ ದ್ವೈವಾರ್ಷಿಕ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಗಳಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದ ಇಬ್ಬರು ಎಂಎಲ್‌ಸಿಗಳು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.ತಿರ್ಹಟ್ ಪದವೀಧರ ಕ್ಷೇತ್ರದಿಂದ ಆಯ್ಕೆಯಾದ ಬನ್ಸಿಧಾರ್ ಬ್ರಜ್ವಾಸಿ ಹಾಗೂ ಸರನ್ ಶಿಕ್ಷಕರ ಕ್ಷೇತ್ರದಿಂದ ಗೆದ್ದ ರಾಹುಲ್ ರಾಜ್ ಅವರು ನಿನ್ನೆ ಪಾಟ್ನಾದಲ್ಲಿ ಮುಖ್ಯಮಂತ್ರಿ ಸಾಮ್ರಾಟ್ ಚೌಧರಿ, ಬಿಜೆಪಿ ರಾಜ್ಯಾಧ್ಯಕ್ಷ ಸಂಜಯ್ ಸರೋಗಿ ಸೇರಿದಂತೆ ಪಕ್ಷದ ಪ್ರಮುಖ ನಾಯಕರ ಸಮ್ಮುಖದಲ್ಲಿ ಬಿಜೆಪಿಯ ಸದಸ್ಯತ್ವ ಸ್ವೀಕರಿಸಿದರು.

ಈ ಬೆಳವಣಿಗೆಯಿಂದ ಬಿಹಾರ ವಿಧಾನ ಪರಿಷತ್ತಿನಲ್ಲಿ ಬಿಜೆಪಿಯ ಬಲ ಹೆಚ್ಚಾಗುವ ನಿರೀಕ್ಷೆಯಿದ್ದು, ರಾಜ್ಯದ ಆಡಳಿತಾರೂಢ ಎನ್‌ಡಿಎ ಮೈತ್ರಿಕೂಟದೊಳಗಿನ ರಾಜಕೀಯ ಲೆಕ್ಕಾಚಾರಗಳ ಬಗ್ಗೆಯೂ ಚರ್ಚೆ ಆರಂಭವಾಗಿದೆ.

ಈ ಇಬ್ಬರ ಸೇರ್ಪಡೆಯಲ್ಲಿ ರಾಜಕೀಯವಾಗಿ ಹೆಚ್ಚು ಗಮನ ಸೆಳೆದಿರುವುದು ರಾಹುಲ್ ರಾಜ್ ಅವರ ನಡೆ. ಇವರು ಮೂಲತಃ ಬಿಜೆಪಿ ಬಂಡಾಯಗಾರರಾಗಿದ್ದು, ಸರನ್ ಶಿಕ್ಷಕರ ಕ್ಷೇತ್ರದಲ್ಲಿ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ಸ್ಪರ್ಧಿಸದೆ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಚುನಾವಣೆಯಲ್ಲಿ ಜೆಡಿಯು ಅಭ್ಯರ್ಥಿ ಆನಂದ್ ಪುಷ್ಕರ್ ಅವರನ್ನು ಸೋಲಿಸಿ ಗೆಲುವು ಸಾಧಿಸಿದ್ದರು.

ಇನ್ನು ತಿರ್ಹಟ್ ಪದವೀಧರ ಕ್ಷೇತ್ರದಲ್ಲಿ ಬನ್ಸಿಧಾರ್ ಬ್ರಜ್ವಾಸಿ ಎರಡನೇ ಬಾರಿಗೆ ಆಯ್ಕೆಯಾಗಿದ್ದಾರೆ. ಅವರು ಜೆಡಿಯು ಅಭ್ಯರ್ಥಿ ಅಭಿಷೇಕ್ ಝಾ ಅವರನ್ನು 9,147 ಮತಗಳ ಅಂತರದಿಂದ ಸೋಲಿಸಿದ್ದರು. ಇದೀಗ ಇಬ್ಬರೂ ಬಿಜೆಪಿ ಸೇರ್ಪಡೆಯಾಗಿರುವುದು ಚುನಾವಣಾ ಫಲಿತಾಂಶದ ನಂತರದ ಮಹತ್ವದ ರಾಜಕೀಯ ಬೆಳವಣಿಗೆಯಾಗಿದೆ.

ರಾಜಕೀಯ ಲೆಕ್ಕಾಚಾರ ಬದಲು

ಇತ್ತೀಚೆಗೆ ನಡೆದ ದ್ವೈವಾರ್ಷಿಕ ಚುನಾವಣೆಯಲ್ಲಿ ಬಿಜೆಪಿ ಮತ್ತು ಆರ್‌ಜೆಡಿ ತಲಾ ಎರಡು ಸ್ಥಾನಗಳನ್ನು ಗೆದ್ದಿದ್ದವು. ಸ್ವತಂತ್ರ ಅಭ್ಯರ್ಥಿಗಳು ಎರಡು ಸ್ಥಾನಗಳಲ್ಲಿ ಜಯಗಳಿಸಿದ್ದರು. ಜೆಡಿಯು ಮತ್ತು ಜನ ಸುರಾಜ್ ಪಕ್ಷ ತಲಾ ಒಂದು ಸ್ಥಾನ ಪಡೆದುಕೊಂಡಿದ್ದವು. ಆದರೆ, ಗೆಲುವು ಸಾಧಿಸಿದ ಇಬ್ಬರು ಸ್ವತಂತ್ರ ಅಭ್ಯರ್ಥಿಗಳು ಬಿಜೆಪಿಗೆ ಸೇರ್ಪಡೆಯಾಗಿರುವುದರಿಂದ ಚುನಾವಣೆಯಲ್ಲಿ ಪಕ್ಷಗಳ ನಡುವೆ ಮೂಡಿದ್ದ ಬಲಾಬಲದ ಚಿತ್ರಣ ಬದಲಾಗುವ ಸಾಧ್ಯತೆಯಿದೆ. ವಿಧಾನ ಪರಿಷತ್ತಿನಲ್ಲಿ ಬಿಜೆಪಿಯ ಪ್ರಸ್ತುತ 26 ಸದಸ್ಯರ ಬಲ ಮತ್ತಷ್ಟು ಹೆಚ್ಚಾಗಲಿದೆ ಎಂದು ವರದಿಯಾಗಿದೆ.

ಬಿಜೆಪಿ ವಿರುದ್ಧ ಆರ್‌ಜೆಡಿ ವಾಗ್ದಾಳಿ

ಇಬ್ಬರು ಸ್ವತಂತ್ರ ಎಂಎಲ್‌ಸಿಗಳನ್ನು ಬಿಜೆಪಿ ತನ್ನ ತೆಕ್ಕೆಗೆ ತೆಗೆದುಕೊಂಡಿರುವುದನ್ನು ಆರ್‌ಜೆಡಿ ತೀವ್ರವಾಗಿ ಟೀಕಿಸಿದೆ. ಇದು ಸಾಂವಿಧಾನಿಕ ಮಾನದಂಡಗಳ ಉಲ್ಲಂಘನೆ ಹಾಗೂ ರಾಜಕೀಯ ಕುದುರೆ ವ್ಯಾಪಾರಕ್ಕೆ ಸಮಾನವಾದ ನಡೆ ಎಂದು ಆರ್‌ಜೆಡಿ ನಾಯಕರು ಆರೋಪಿಸಿದ್ದಾರೆ.

ಹಿರಿಯ ಆರ್‌ಜೆಡಿ ನಾಯಕ ಶಕ್ತಿ ಸಿಂಗ್ ಯಾದವ್ ಮಾತನಾಡಿ, ಸ್ವತಂತ್ರ ಅಭ್ಯರ್ಥಿಗಳಾಗಿ ಗೆದ್ದ ಇಬ್ಬರು ಸದಸ್ಯರು ಇನ್ನೂ ಸದನದಲ್ಲಿ ಪ್ರಮಾಣವಚನ ಸ್ವೀಕರಿಸದಿರುವ ಸಂದರ್ಭದಲ್ಲಿ ಬಿಜೆಪಿಗೆ ಸೇರ್ಪಡೆಯಾಗಿರುವುದು ಕಾನೂನುಬದ್ಧವೇ ಎಂಬ ಪ್ರಶ್ನೆ ಎದುರಾಗಿದೆ. ಪಕ್ಷಾಂತರ ನಿಷೇಧ ಕಾಯ್ದೆ ಮತ್ತು ಸಾಂವಿಧಾನಿಕ ನಿಯಮಗಳ ಪ್ರಕಾರ ಈ ಸೇರ್ಪಡೆಗೆ ಅವಕಾಶವಿದೆಯೇ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದ್ದಾರೆ. ಚುನಾವಣೆಯಲ್ಲಿ ಕೇವಲ ಎರಡು ಸ್ಥಾನಗಳನ್ನು ಗೆದ್ದಿರುವ ಬಿಜೆಪಿ ತನ್ನ ರಾಜಕೀಯ ಪ್ರಭಾವ ಹೆಚ್ಚಿಸಿಕೊಳ್ಳಲು ಇಂತಹ ತಂತ್ರ ಅನುಸರಿಸುತ್ತಿದೆ ಎಂದೂ ಅವರು ಆರೋಪಿಸಿದ್ದಾರೆ.

ಎನ್‌ಡಿಎ ಮೈತ್ರಿಕೂಟದೊಳಗೂ ಚರ್ಚೆಗೆ ಕಾರಣ

ಈ ಬೆಳವಣಿಗೆಯ ಮತ್ತೊಂದು ಪ್ರಮುಖ ಆಯಾಮವೆಂದರೆ ಬಿಜೆಪಿ ಸೇರ್ಪಡೆಯಾದ ಇಬ್ಬರೂ ಅಭ್ಯರ್ಥಿಗಳು ಚುನಾವಣೆಯಲ್ಲಿ ಜೆಡಿಯು ಅಧಿಕೃತ ಅಭ್ಯರ್ಥಿಗಳನ್ನು ಸೋಲಿಸಿರುವುದು. ಹೀಗಾಗಿ ಎನ್‌ಡಿಎ ಮೈತ್ರಿಕೂಟದ ಪ್ರಮುಖ ಪಾಲುದಾರ ಪಕ್ಷಗಳಾದ ಬಿಜೆಪಿ ಮತ್ತು ಜೆಡಿಯು ನಡುವಿನ ರಾಜಕೀಯ ಸಂಬಂಧಗಳ ಬಗ್ಗೆಯೂ ಪ್ರಶ್ನೆಗಳು ಮೂಡಿವೆ. ಆರ್‌ಜೆಡಿ ನಾಯಕ ಎಜಾಜ್ ಅಹದ್ ಕೂಡ ಬಿಜೆಪಿ ತನ್ನ ಮೈತ್ರಿಕೂಟದ ಪಾಲುದಾರರನ್ನು ದುರ್ಬಲಗೊಳಿಸುವ ಉದ್ದೇಶದಿಂದಲೇ ಈ ರಾಜಕೀಯ ಬೆಳವಣಿಗೆಗೆ ಅವಕಾಶ ಮಾಡಿಕೊಟ್ಟಿದೆ ಎಂದು ಆರೋಪಿಸಿದ್ದಾರೆ.

RELATED ARTICLES

Latest News