ನವದೆಹಲಿ, ಜು. 20 ಚಲೋ ಸಂಸತ್ ಮೆರವಣಿಗೆ ನಡೆಸಲು ಮುಂದಾದ ಸಿಜೆಪಿ ಕಾರ್ಯಕರ್ತರ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ.ಸಂಸತ್ತಿನ ಮುಂಗಾರು ಅಧಿವೇಶನದ ಮೊದಲ ದಿನವಾದ ಇಂದು ರಾಜಧಾನಿ ವ್ಯಾಪಕ ಉದ್ವಿಗ್ನತೆಗೆ ಸಾಕ್ಷಿಯಾಯಿತು. ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಆಯೋಜಿಸಿದ್ದ ಚಲೋ ಸಂಸದ್ ಮೆರವಣಿಗೆಯನ್ನು ತಡೆಯಲು ಪೊಲೀಸರು ಲಾಠಿ ಪ್ರಹಾರ ನಡೆಸಿದರು.
ರಾಜಧಾನಿಯಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದ್ದರೂ ಪ್ರತಿಭಟನೆ ನಡೆಸಲು ಮುಂದಾದಾಗ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಭಾರಿ ಘರ್ಷಣೆ ಸಂಭವಿಸಿತು.ನೀಟ್ ಪರೀಕ್ಷಾ ಅಕ್ರಮಗಳನ್ನು ಖಂಡಿಸಿ ಮತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ಸಿಜೆಪಿ ಬೆಂಬಲಿಗರು ಜಂತರ್ ಮಂತರ್‌ನಿಂದ ಸಂಸತ್ತಿನತ್ತ ಮೆರವಣಿಗೆ ಹೊರಟಿದ್ದರು.
ಆದರೆ, ಭದ್ರತೆಯ ದೃಷ್ಟಿಯಿಂದ ದೆಹಲಿ ಪೊಲೀಸರು ಈ ಮೆರವಣಿಗೆಗೆ ಯಾವುದೇ ಪೂರ್ವಾನುಮತಿ ನೀಡಿರಲಿಲ್ಲ. ಪ್ರತಿಭಟನಾ ಪ್ರದೇಶ ಹೊರತುಪಡಿಸಿ, ಐದಕ್ಕಿಂತ ಹೆಚ್ಚು ಜನರು ಒಟ್ಟುಗೂಡುವುದನ್ನು ಮತ್ತು ಮೆರವಣಿಗೆ ನಡೆಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿತ್ತು.ಈ ಆದೇಶವನ್ನು ಉಲ್ಲಂಘಿಸಿ ಸಂಸತ್ತಿಗೆ ಮುತ್ತಿಗೆ ಹಾಕಲು ಯತ್ನಿಸಿದಾಗ ಪರಿಸ್ಥಿತಿ ಕೈಮೀರಿ, ಗೊಂದಲದ ವಾತಾವರಣ ನಿರ್ಮಾಣವಾಯಿತು.
ಕಾನೂನು ಸುವ್ಯವಸ್ಥೆ ಮತ್ತು ಸಾರ್ವಜನಿಕ ಶಾಂತಿಯನ್ನು ಕಾಪಾಡಲು ನಾಗರಿಕರು ಅನಧಿಕೃತ ಪ್ರತಿಭಟನೆಗಳಲ್ಲಿ ಭಾಗವಹಿಸಬಾರದು ಹಾಗೂ ಪೋಲಿಸರೊಂದಿಗೆ ಸಹಕರಿಸಬೇಕೆಂದು ದೆಹಲಿ ಪೊಲೀಸರು ಮನವಿ ಮಾಡಿದ್ದಾರೆ. ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.
