Homeರಾಷ್ಟ್ರೀಯತಿಂಗಳಾಂತ್ಯಕ್ಕೆ ಸಂಸತ್‌ ವಿಶೇಷ ಅಧಿವೇಶನ

ತಿಂಗಳಾಂತ್ಯಕ್ಕೆ ಸಂಸತ್‌ ವಿಶೇಷ ಅಧಿವೇಶನ

ನವದೆಹಲಿ,ಅ.16- ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ ಹಾಗೂ ವಿರೋಧ ಪಕ್ಷಗಳ ಪ್ರತಿಭಟನೆಯ ತೀವ್ರತೆಯ ನಡುವೆಯೂ, ಕೇಂದ್ರ ಸರ್ಕಾರವು ಈ ತಿಂಗಳ ಕೊನೆಯಲ್ಲಿ ಸಂಸತ್ತಿನ ವಿಶೇಷ ಅಧಿವೇಶನವನ್ನು ಕರೆಯಲು ಸಿದ್ಧತೆ ನಡೆಸಿದೆ. ಕ್ಷೇತ್ರ ಮಿತಿ ಪುನರ್ವಿಂಗಡಣೆ ಹಾಗೂ ಮಹಿಳಾ ಮೀಸಲಾತಿ ಮಸೂದೆಗಳಿಗೆ ಸಾಂವಿಧಾನಿಕ ತಿದ್ದುಪಡಿ ತಂದು ಅವುಗಳನ್ನು ಅಂಗೀಕರಿಸಿಕೊಳ್ಳಲು ಅಗತ್ಯವಿರುವ ಸಂಖ್ಯಾಬಲ ತಮ್ಮ ಬಳಿಯಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.

ಅ. 26 ಮತ್ತು 27 ರಂದು ಸಂವಿಧಾನ್‌ ಸದನದಲ್ಲಿ ನಡೆಯಲಿರುವ 12 ನೇ ಬ್ರಿಕ್ಸ್ ಸಂಸದೀಯ ವೇದಿಕೆಯನ್ನು ಗಮನದಲ್ಲಿಟ್ಟುಕೊಂಡು, ವಿಶೇಷ ಅಧಿವೇಶನದ ಸಮಯವನ್ನು ಅಂತಿಮಗೊಳಿಸುವ ಸಾಧ್ಯತೆಯಿದೆ. ಅಧಿವೇಶನ ಆರಂಭವಾಗುವ ಮುನ್ನ ಸರ್ಕಾರವು ಕನಿಷ್ಠ ಒಂದು ವಾರದ ಮುಂಚಿತವಾಗಿ ಸೂಚನೆ ನೀಡುವ ನಿರೀಕ್ಷೆಯಿದೆ.

ಏ.17 ರಂದು ನಡೆದ ಬಜೆಟ್‌ ಅಧಿವೇಶನದಲ್ಲಿ ಕ್ಷೇತ್ರ ಪುನರ್ವಿಂಗಡಣೆ ಮತ್ತು ಮಹಿಳಾ ಮೀಸಲಾತಿ ಅನುಷ್ಠಾನಕ್ಕೆ ಸಂಬಂಧಿಸಿದ ಸಂವಿಧಾನ ತಿದ್ದುಪಡಿ ಮಸೂದೆಯು ಕೆಳಮನೆಯಲ್ಲಿ ಹಿನ್ನಡೆ ಅನುಭವಿಸಿತ್ತು. ಈ ಬಾರಿ ಅಂತಹ ಪರಿಸ್ಥಿತಿ ಮರುಕಳಿಸದಂತೆ ಎಚ್ಚರಿಕೆ ವಹಿಸಿರುವ ಸರ್ಕಾರ, ಮಸೂದೆಗಳಿಗೆ ಬೆಂಬಲವನ್ನು ಕ್ರೋಢೀಕರಿಸಲು ಡಿಎಂಕೆ ಸೇರಿದಂತೆ ಕೆಲವು ಪ್ರಮುಖ ಸಣ್ಣ ವಿರೋಧ ಪಕ್ಷಗಳೊಂದಿಗೆ ಮಾತುಕತೆ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ.

ತಮಿಳುನಾಡು ಚುನಾವಣೆಗಳ ಬಳಿಕ ಡಿಎಂಕೆ ಪಕ್ಷವು ಕಾಂಗ್ರೆಸ್‌‍ ಜೊತೆಗಿನ ನಂಟು ಕಡಿದುಕೊಂಡು ಇಂಡಿಯಾ ಒಕ್ಕೂಟದಿಂದ ಹೊರಬಂದಿರುವುದು ಪ್ರಸ್ತುತ ರಾಜಕೀಯ ಬೆಳವಣಿಗೆಯಲ್ಲಿ ಮಹತ್ವದ ತಿರುವು ಪಡೆದುಕೊಂಡಿದೆ. ಕೇಂದ್ರ ಸರ್ಕಾರವು ಈ ರಾಜಕೀಯ ಬದಲಾವಣೆಯನ್ನು ತನ್ನ ಮಸೂದೆಗಳ ಅಂಗೀಕಾರಕ್ಕೆ ಅನುಕೂಲಕರವಾಗಿ ಬಳಸಿಕೊಳ್ಳಲು ಯೋಚಿಸುತ್ತಿದೆ.

ಇದರ ಜೊತೆಗೆ, ಕೆಲವು ಸಣ್ಣ ವಿರೋಧ ಪಕ್ಷಗಳ ನಾಯಕರನ್ನೂ ಸಂಪರ್ಕಿಸಿ ಬೆಂಬಲ ಪಡೆಯಲು ಸರ್ಕಾರ ಪ್ರಯತ್ನಿಸುತ್ತಿದೆ. ಲೋಕಸಭೆಯಲ್ಲಿ ತನ್ನ ಸಂಖ್ಯಾಬಲದ ಬಗ್ಗೆ ವಿಶ್ವಾಸ ಹೊಂದಿದ್ದರೂ, ಸಾಂವಿಧಾನಿಕ ತಿದ್ದುಪಡಿ ಮಸೂದೆಗಳಂತಹ ಮಹತ್ವದ ವಿಷಯಗಳಲ್ಲಿ ಹೆಚ್ಚಿನ ಪಕ್ಷಗಳ ಬೆಂಬಲವನ್ನು ಪಡೆಯುವುದು ರಾಜಕೀಯವಾಗಿ ಅನುಕೂಲಕರವಾಗಲಿದೆ ಎಂಬ ಲೆಕ್ಕಾಚಾರ ಕೇಂದ್ರದ್ದಾಗಿದೆ.

ಮಹಿಳೆಯರಿಗೆ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಶೇ. 33ರಷ್ಟು ಮೀಸಲಾತಿ ಕಲ್ಪಿಸುವ ಉದ್ದೇಶದ ನಾರಿ ಶಕ್ತಿ ವಂದನ್‌ ಅಧಿನಿಯಮವು 2023ರಲ್ಲಿ ಸಂಸತ್ತಿನ ಅನುಮೋದನೆ ಪಡೆದಿತ್ತು. ಆದರೆ ಅದರ ಅನುಷ್ಠಾನವು ಜನಗಣತಿ ಮತ್ತು ಕ್ಷೇತ್ರಗಳ ಪುನರ್ವಿಂಗಡಣೆ ಪ್ರಕ್ರಿಯೆಗೆ ಸಂಬಂಧಿಸಿದ ಷರತ್ತುಗಳೊಂದಿಗೆ ಜೋಡಿಸಲ್ಪಟ್ಟಿದೆ.

ಹೀಗಾಗಿ ಮಹಿಳಾ ಮೀಸಲಾತಿಯನ್ನು ಯಾವಾಗ ಮತ್ತು ಯಾವ ವಿಧಾನದಲ್ಲಿ ಜಾರಿಗೆ ತರಲಾಗುತ್ತದೆ ಎಂಬುದು ರಾಜಕೀಯ ಚರ್ಚೆಯ ಪ್ರಮುಖ ವಿಷಯವಾಗಿದೆ. ಕ್ಷೇತ್ರ ಪುನರ್ವಿಂಗಡಣೆಯ ಪ್ರಸ್ತಾವನೆ ಈ ಪ್ರಕ್ರಿಯೆಯೊಂದಿಗೆ ಸಂಬಂಧ ಹೊಂದಿರುವುದರಿಂದ, ಹೊಸ ಸಂವಿಧಾನ ತಿದ್ದುಪಡಿಗಳ ಸ್ವರೂಪ, ಅನುಷ್ಠಾನದ ವೇಳಾಪಟ್ಟಿ ಮತ್ತು ರಾಜ್ಯಗಳ ಪ್ರಾತಿನಿಧ್ಯದ ಮೇಲೆ ಆಗಬಹುದಾದ ಪರಿಣಾಮಗಳ ಬಗ್ಗೆ ಸ್ಪಷ್ಟತೆ ಅಗತ್ಯವಾಗಿದೆ.

ವಿಶೇಷವಾಗಿ ದಕ್ಷಿಣ ಭಾರತದ ರಾಜ್ಯಗಳು ಜನಸಂಖ್ಯೆ ಆಧಾರಿತ ಕ್ಷೇತ್ರ ಪುನರ್ವಿಂಗಡಣೆಯಿಂದ ತಮ ಸಂಸದೀಯ ಪ್ರಾತಿನಿಧ್ಯಕ್ಕೆ ಧಕ್ಕೆಯಾಗಬಹುದೆಂಬ ಆತಂಕವನ್ನು ಈ ಹಿಂದೆ ವ್ಯಕ್ತಪಡಿಸಿವೆ. ಕರ್ನಾಟಕ, ತಮಿಳುನಾಡು, ಕೇರಳ, ಆಂಧ್ರಪ್ರದೇಶ ಮತ್ತು ತೆಲಂಗಾಣದಂತಹ ರಾಜ್ಯಗಳ ಹಿತಾಸಕ್ತಿಗಳನ್ನು ಪರಿಗಣಿಸಬೇಕೆಂಬ ಬೇಡಿಕೆಯೂ ಚರ್ಚೆಯ ಭಾಗವಾಗಿದೆ.

ಮಳೆಗಾಲದ ಅಧಿವೇಶನ ಮುಕ್ತಾಯಗೊಂಡು ಇನ್ನೂ ಅಧಿಕೃತವಾಗಿ ಮುಂದೂಡಿಕೆಯಾಗದ ಹಿನ್ನೆಲೆಯಲ್ಲಿ, ಪ್ರಸ್ತಾವಿತ ಸಾಂವಿಧಾನಿಕ ತಿದ್ದುಪಡಿಗಳಿಗೆ ಅಗತ್ಯ ಬೆಂಬಲವನ್ನು ಒಟ್ಟುಗೂಡಿಸಿ ವಿಶೇಷ ಅಧಿವೇಶನವನ್ನು ನಡೆಸಲು ಕೇಂದ್ರ ಸರ್ಕಾರವು ಗಂಭೀರ ಚಿಂತನೆ ನಡೆಸಿದೆ. ಈ ಅಧಿವೇಶನವು ಭಾರತೀಯ ಸಂಸತ್‌ ರಾಜಕೀಯದಲ್ಲಿ ಮತ್ತೊಮೆ ಭಾರೀ ಸಂಚಲನ ಮೂಡಿಸುವ ಸಾಧ್ಯತೆಯಿದೆ.

RELATED ARTICLES
spot_img

Latest News