ಲಕ್ನೋ, ಡಿ. 17: ಬುರ್ಕಾ ಧರಿಸದೆ ಮನೆಯಿಂದ ಹೊರ ಹೋಗಿದ್ದ ಪತ್ನಿ ಹಾಗೂ ತನ್ನ ಇಬ್ಬರು ಹೆಣ್ಣು ಮಕ್ಕಳನ್ನು ವ್ಯಕ್ತಿಯೊಬ್ಬ ಕೊಂದು ಹಾಕಿ ಶವಗಳನ್ನು ಶೌಚಾಲಯದ ಗುಂಡಿಯಲ್ಲಿ ಹೂತು ಹಾಕಿರುವ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.
ತನ್ನು ಕುಟುಂಬವನ್ನೇ ಬಲಿ ತೆಗೆದುಕೊಂಡ ಪಾತಕಿಯನ್ನು ಫಾರೂಕ್ ಎಂದು ಗುರುತಿಸಲಾಗಿದೆ. ಆತನ ಪತ್ನಿ ತಾಹಿರಾ ಮತ್ತು ಪುತ್ರಿಯರಾದ ಅಫ್ರೀನ್ ಮತ್ತು ಸಹ್ರೀನ್ ಐದು ದಿನಗಳ ಕಾಲ ಕಾಣೆಯಾದ ನಂತರ ಫಾರೂಕ್ ತಂದೆ ದಾವೂದ್ ಎಫ್‌ಐಆರ್ ದಾಖಲಿಸಿದ್ದರು. ವಿಚಾರಣೆಯ ಸಮಯದಲ್ಲಿ, ಫಾರೂಕ್ ಹೇಳಿಕೆಗಳಲ್ಲಿ ಅನುಮಾನ ಮೂಡುವ ಅಂಶವನ್ನು ಪೊಲೀಸರು ಗಮನಿಸಿದ್ದರು, ಬಳಿಕ ತೀವ್ರ ವಿಚಾರಣೆ ನಡೆಸಿದ್ದರು.
ಫಾರೂಕ್ ಅಂತಿಮವಾಗಿ ತನ್ನ ಹೆಂಡತಿ ಮತ್ತು ಹಿರಿಯ ಮಗಳನ್ನು ಗುಂಡು ಹಾರಿಸಿ, ಕಿರಿಯ ಮಗಳನ್ನು ಕತ್ತು ಹಿಸುಕಿ ಕೊಂದು, ಶೌಚಾಲಯಕ್ಕಾಗಿ ಅಗೆದ ಗುಂಡಿಯಲ್ಲಿ ಅವರ ಶವಗಳನ್ನು ಅಡಗಿಸಿಟ್ಟಿದ್ದಾಗಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.ಪೊಲೀಸರು ಭಾರತೀಯ ನ್ಯಾಯ ಸಂಹಿತೆಯ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಕೊಲೆ ಪ್ರಕರಣವನ್ನು ದಾಖಲಿಸಿದರು, ಅದರಲ್ಲಿ ಸೆಕ್ಷನ್ 103 (ಕೊಲೆ) ಸೇರಿದೆ.
